Breaking: ಮಳೆ ಆರ್ಭಟ; ಮಂಗಳವಾರವೂ ಈ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ
ಬೆಂಗಳೂರು ಆಗಸ್ಟ್ 30: ಕರ್ನಾಟಕದ ಹಲವೆಡೆ ವರುಣನ ಆರ್ಭಟ ಮಂಗಳವಾರವೂ ಮುಂದುವರಿದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಭಾನುವಾರದಿಂದ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಸೋಮವಾರ ಸುರಿದ ಮಳೆಗೆ ಕೆಲವು ಕಡೆ ಪ್ರವಾಹ ಉಂಟಾಗಿ ಹಲವು ಕಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಗದಗದಲ್ಲೂ ಗುಡುಗು ಸಹಿತ ಮಳೆಯಾಗುತ್ತಿರುವ ಕಾರಣ ಜಿಲ್ಲಾಧಿಕಾರಿ ಎಂ. ಎಲ್. ವೈಶಾಲಿ ಶಾಲಾ-ಕಾಲೇಜಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ ರಜೆ ಘೋಷಣೆ ಮಾಡಿದ್ದಾರೆ.

ಹಾವೇರಿಯಲ್ಲಿ ಜಿಲ್ಲಾಧಿಕಾರಿ ಸಂಜಯ್ ಶೆಟ್ಟಣ್ಣನವರ್ ಮಂಗಳವಾರ ಶಾಲೆಗಳಿಗೆ ಮಾತ್ರ ರಜೆ ಘೋಷಿಸಿದ್ದು, ಮುಂಬರುವ ರಜಾ ದಿನಗಳಲ್ಲಿ ತರಗತಿಗಳನ್ನು ನಡೆಸುವುದಾಗಿ ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿಜಯನಗರ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕೊಪ್ಪಳದಲ್ಲೂ ಮಳೆಯಾಗುತ್ತಿದ್ದು, ಶಿಕ್ಷಣ ಇಲಾಖೆ ಕೊಪ್ಪಳ ತಾಲೂಕಿಗೆ ರಜೆ ಘೋಷಣೆ ಮಾಡಿದೆ. ಉಳಿದ ತಾಲೂಕುಗಳಿಗೆ ಮಳೆ ಪ್ರಮಾಣ ನೋಡಿ ರಜೆ ನೀಡಲು ಆದೇಶಿಸಿದೆ.
ರಾಜ್ಯ ರಾಜಧಾನಿ ಬೆಂಗಳೂರಿಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಧಿಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಬೆಂಗಳೂರು ಗ್ರಾಮಂತರ ಜಿಲ್ಲೆಯಲ್ಲೂ ರಜೆ ಘೋಷಿಸಲಾಗಿದೆ.












Click it and Unblock the Notifications