ಮನ್ ಕೀ ಬಾತ್; ಬೆಂಗಳೂರಿನ ಸುರೇಶ್ ಕುಮಾರ್ ಶ್ಲಾಘಿಸಿದ ಮೋದಿ
ಬೆಂಗಳೂರು, ಅಕ್ಟೋಬರ್ 30; ಭಾರತದ ಪ್ರಧಾನಿ ನರೇಂದ್ರ ಮೋದಿ ತಿಂಗಳ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದರು.
94ನೇ ಕಂತಿನ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮೋದಿ ನನ್ನ ಪ್ರೀತಿಯ ದೇಶವಾಸಿಗಳೇ, ಪರಿಸರ ಕುರಿತ ಕಾಳಜಿ ನಮ್ಮ ಸಮಾಜದ ಕಣ ಕಣದಲ್ಲೂ ತುಂಬಿದೆ ಮತ್ತು ನಾವು ನಮ್ಮ ಸುತ್ತಮುತ್ತಲೂ ಇದರ ಇರುವಿಕೆಯ ಅನುಭವ ಹೊಂದುತ್ತೇವೆ. ಪರಿಸರದ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಜನರ ಸಂಖ್ಯೆ ದೇಶದಲ್ಲಿ ಕಡಿಮೆಯೇನಿಲ್ಲ ಎಂದರು.

ಕರ್ನಾಟಕದ ಬೆಂಗಳೂರಿನ ನಿವಾಸಿ ಸುರೇಶ್ ಕುಮಾರ್ ಅವರ ಸಾಧನೆಯನ್ನು ಮೋದಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಶ್ಲಾಘಿಸಿದರು. ಸುರೇಶ್ ಕುಮಾರ್ ಅವರಿಂದ ಕೂಡಾ ನಾವು ಬಹಳಷ್ಟು ಕಲಿಯಬಹುದಾಗಿದೆ ಎಂದು ಬಣ್ಣಿಸಿದರು.
ಸುರೇಶ್ ಕುಮಾರ್ ಅವರಲ್ಲಿ ಪ್ರಕೃತಿ ಹಾಗೂ ಪರಿಸರದ ರಕ್ಷಣೆಯ ಬಗ್ಗೆ ಬಹಳ ಉತ್ಸಾಹ ತುಂಬಿದೆ. 20 ವರ್ಷಗಳ ಹಿಂದೆ ಅವರು ನಗರದ ಸಹಕಾರನಗರದ ಒಂದು ಅರಣ್ಯವನ್ನು ಪುನಃ ಹಸಿರಿನಿಂದ ನಳನಳಿಸುವಂತೆ ಮಾಡುವುದಕ್ಕೆ ಮುಂದಾಗಿದ್ದರು. ಈ ಕೆಲಸ ಕಷ್ಟದಿಂದ ಕೂಡಿತ್ತು, ಆದರೆ 20 ವರ್ಷಗಳ ಹಿಂದೆ ನೆಟ್ಟ ಆ ಗಿಡಗಳು ಇಂದು ಸುಮಾರು 40 ರಿಂದ 45 ಅಡಿ ಎತ್ತರಕ್ಕೆ ಬೆಳೆದು ಬೃಹತ್ ಮರಗಳಾಗಿವೆ ಎಂದು ವಿವರಿಸಿದರು.

ನರೇಂದ್ರ ಮೋದಿ ಸುರೇಶ್ ಕುಮಾರ್ ಮತ್ತೊಂದು ಅದ್ಭುತ ಕೆಲಸವನ್ನು ಕೂಡಾ ಮಾಡುತ್ತಾರೆ. ಅವರು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಹಕಾರನಗರದಲ್ಲಿ ಒಂದು ಬಸ್ ತಂಗುದಾಣವನ್ನು ಕೂಡಾ ನಿರ್ಮಿಸಿದ್ದಾರೆ. ಪರಿಸರ ಮತ್ತು ಸಂಸ್ಕೃತಿ ಎರಡೂ ಒಟ್ಟಾಗಿ ಬೆಳೆದು, ಅರಳಿದರೆ ಯೋಚಿಸಿ ನೋಡಿ ಇದು ಎಷ್ಟೊಂದು ದೊಡ್ಡ ಉತ್ತಮ ವಿಚಾರವಲ್ಲವೇ? ಎಂದರು.
ತಮಿಳುನಾಡಿನ ಉದಾಹರಣೆ; ಇಂದು ಪರಿಸರ ಸ್ನೇಹಿ ಜೀವನ ಮತ್ತು ಪರಿಸರ ಸ್ನೇಹಿ ಉತ್ಪನ್ನಗಳ ಕುರಿತಂತೆ ಜನರಲ್ಲಿ ಮೊದಲಿಗಿಂತ ಅತ್ಯಂತ ಹೆಚ್ಚು ಜಾಗೃತಿ ಕಂಡುಬರುತ್ತಿದೆ. ತಮಿಳುನಾಡಿನ ಇಂತಹದ್ದೇ ಒಂದು ಕುತೂಹಲಕಾರಿ ಪ್ರಯತ್ನದ ಬಗ್ಗೆ ತಿಳಿದುಕೊಳ್ಳುವ ಅವಕಾಶ ನನಗೆ ದೊರೆಯಿತು ಎಂದು ಮೋದಿ ಹೇಳಿದರು.
ಕೊಯಂಬತ್ತೂರಿನ ಅನಾಯಿಕಟ್ಟೀಯಲ್ಲಿ ಬುಡಕಟ್ಟು ಮಹಿಳೆಯರ ಒಂದು ತಂಡದ ಉತ್ತಮ ಪ್ರಯತ್ನ ಇದಾಗಿದೆ. ಈ ಮಹಿಳೆಯರು ರಫ್ತು ಮಾಡುವುದಕ್ಕಾಗಿ 10 ಸಾವಿರ ಪರಿಸರ ಸ್ನೇಹಿ ಟೆರ್ರಕೋಟಾ ಟೀ ಕಪ್ ತಯಾರಿಸಿದ್ದಾರೆ. ಆಶ್ಚರ್ಯಕರ ವಿಷಯವೆಂದರೆ, ಟೆರ್ರಕೋಟಾ ಟೀ ಕಪ್ಸ್ ತಯಾರಿಸುವ ಸಂಪೂರ್ಣ ಜವಾಬ್ದಾರಿಯನ್ನು ಈ ಮಹಿಳೆಯರು ಸ್ವತಃ ಕೈಗೆತ್ತಿಕೊಂಡರು ಎಂದು ವಿವರಣೆ ನೀಡಿದರು.
ನೀವು ಬಯೋ ವಿಲೇಜ್ ಎನ್ನುವ ಪದವನ್ನು ಖಂಡಿತವಾಗಿಯೂ ಕೇಳಿರಬಹುದು, ಆದರೆ ತ್ರಿಪುರಾದ ಕೆಲವು ಗ್ರಾಮಗಳು Bio-Village 2 ಮೆಟ್ಟಿಲನ್ನು ಏರಿವೆ. Bio-Village 2ನಲ್ಲಿ ಪ್ರಾಕೃತಿಕ ವಿಕೋಪಗಳಿಂದ ಸಂಭವಿಸುವ ನಷ್ಟವನ್ನು ಯಾವರೀತಿ ಕಡಿಮೆ ಮಾಡಬಹುದು ಎಂಬ ಅಂಶಕ್ಕೆ ಒತ್ತು ನೀಡಲಾಗುತ್ತದೆ. ಇದರಲ್ಲಿ ವಿಭಿನ್ನ ಕ್ರಮಗಳ ಮೂಲಕ ಜನರ ಜೀವನ ಮಟ್ಟವನ್ನು ಮತ್ತಷ್ಟು ಉತ್ತಮವಾಗಿ ಹೇಗೆ ಮಾಡಬಹುದು ಎಂಬ ಕುರಿತು ಸಂಪೂರ್ಣ ಗಮನ ಹರಿಸಲಾಗುತ್ತದೆ ಎಂದರು.
ಸೌರಶಕ್ತಿ, ಬಯೋಗ್ಯಾಸ್, ಜೇನು ಸಾಕಣೆ ಈ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣ ಗಮನ ಕೇಂದ್ರೀಕರಿಸಲಾಗುತ್ತದೆ. ಒಟ್ಟಾರೆ ನೋಡಿದಲ್ಲಿ, ಹವಾಮಾನ ಬದಲಾವಣೆ ವಿರುದ್ಧ ಅಭಿಯಾನಕ್ಕೆ Bio-Village 2 ಸಾಕಷ್ಟು ಬಲ ತುಂಬಲಿದೆ. ಪರಿಸರ ಸಂರಕ್ಷಣೆ ಕುರಿತಂತೆ ದೇಶದ ಬೇರೆ ಬೇರೆ ಭಾಗಗಳಲ್ಲಿ ಹೆಚ್ಚಾಗುತ್ತಿರುವ ಉತ್ಸಾಹ ನೋಡಿ ನಾನು ಬಹಳ ಸಂತಸಗೊಂಡಿದ್ದೇನೆ ಎಂದು ಮೋದಿ ಹೇಳಿದರು.
ರೈತರ ಸಾಧನೆ ವಿವರಿಸಿದ ಮೋದಿ; ತಮಿಳುನಾಡಿನಲ್ಲಿ ಕಾಂಚೀಪುರಂನಲ್ಲಿ ಥಿರು ಕೆ. ಎಳಿಲನ್ ಎಂಬ ಕೃಷಿಕರೊಬ್ಬರಿದ್ದಾರೆ. ಇವರು 'ಪ್ರಧಾನ ಮಂತ್ರಿ ಕುಸುಮ್ ಯೋಜನೆ'ಯ ಲಾಭ ಪಡೆದು ತಮ್ಮ ಜಮೀನಿನಲ್ಲಿ ಹತ್ತು ಅಶ್ವಶಕ್ತಿಯ ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಂಡಿದ್ದಾರೆ. ಈಗ ಅವರು ತಮ್ಮ ಜಮೀನಿಗೆ ವಿದ್ಯುತ್ತಿಗಾಗಿ ಏನನ್ನೂ ಖರ್ಚು ಮಾಡಬೇಕಾಗಿಲ್ಲ. ಈಗ ಅವರು ಹೊಲದಲ್ಲಿ ನೀರಾವರಿಗಾಗಿ ಸರ್ಕಾರದ ವಿದ್ಯುತ್ ಪೂರೈಕೆಯ ಮೇಲೆ ಅವಲಂಬಿತವಾಗಿಲ್ಲ ಎಂದು ಮೋದಿ ವಿವರಿಸಿದರು.
ರಾಜಸ್ಥಾನದ ಭರತ್‌ಪುರದಲ್ಲಿನ ಇನ್ನೊಬ್ಬ ಫಲಾನುಭವಿ ರೈತ ಕಮಲ್ ಮೀನಾ ಬಗ್ಗೆಯೂ ಮೋದಿ ವಿವರಿಸಿದರು. ತಮ್ಮ ಹೊಲದಲ್ಲಿ ಸೋಲಾರ್ ಪಂಪ್ ಅನ್ನು ಸ್ಥಾಪಿಸಿದರು, ಇದರಿಂದಾಗಿ ಅವರ ವೆಚ್ಚ ಕಡಿಮೆಯಾಗಿದೆ. ವೆಚ್ಚ ಕಡಿಮೆಯಾದುದರಿಂದ ಆದಾಯವೂ ಹೆಚ್ಚಿತು. ಕಮಲಜಿ ಸೋಲಾರ್ ವಿದ್ಯುತ್ ಅನ್ನು ಇತರ ಅನೇಕ ಸಣ್ಣ ಕೈಗಾರಿಕೆಗಳಿಗೆ ಅಳವಡಿಸಲು ಪ್ರೋತ್ಸಾಹಿಸುತ್ತಿದ್ದಾರೆ. ಅವರ ಪ್ರದೇಶದಲ್ಲಿ ಮರದ ಕೆಲಸ ಇದೆ, ಹಸುವಿನ ಸಗಣಿಯಿಂದ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ, ಇವೆಲ್ಲವುಗಳಿಗೆ ಸೋಲಾರ್ ವಿದ್ಯುತ್ ಬಳಸಲಾಗುತ್ತಿದೆ, ಅವರು 10-12 ಜನರಿಗೆ ಉದ್ಯೋಗವನ್ನೂ ನೀಡುತ್ತಿದ್ದಾರೆ ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.












Click it and Unblock the Notifications