ಮಂಗಳೂರು ಬ್ಲಾಸ್ಟ್ ಪ್ರಕರಣ; ಉತ್ತರ ಪ್ರದೇಶದ ಮಾದರಿಯಲ್ಲಿ ಕಠಿಣ ಕ್ರಮಕ್ಕೆ ಯತ್ನಾಳ್ ಆಗ್ರಹ
ವಿಜಯಪುರ, ನವೆಂಬರ್ 21: ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಪೊಲೀಸರಿಗೆ ತನಿಖೆ ನಡೆಸಲು ಮುಕ್ತ ಸ್ವಾತಂತ್ರ್ಯನೀಡಬೇಕು. ಉತ್ತರ ಪ್ರದೇಶದ ಮಾದರಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಸವಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರಿಗೆ ಮುಕ್ತ ಅಧಿಕಾರ ಕೊಡಬೇಕು ಎಂದು ಸಿಎಂ ಮತ್ತು ಗೃಹ ಸಚಿವರಿಗೆ ಹೇಳಿದ್ದೇನೆ. ಉತ್ತರ ಪ್ರದೇಶದಲ್ಲಿ ಹೇಗೆ ಕಠಿಣ ಕ್ರಮ ಕೈಗೊಳ್ಳುತ್ತಾರೆ ಅದೇ ರೀತಿ ಕಠಿಣ ಕ್ರಮ ಕೈಗೊಳ್ಳಬೇಕು. ಕೇವಲ ಬಾಯಿಂದ ಕಠಿಣ ಕ್ರಮ ಎಂದು ಹೇಳುವುದರಿಂದ ಯಾವುದೂ ಆಗುವುದಿಲ್ಲ. ನಾಲ್ಕಾರು ಎನ್ ಕೌಂಟರ್ ಮಾಡಿ ಬುದ್ಧಿ ಕಲಿಸದಿದ್ದರೆ ದೇಶವಿರೋಧಿ ಭಯೋತ್ಪಾದಕರು ಈ ರೀತಿ ರಾಜಾರೋಷವಾಗಿ ದುಷ್ಕೃತ್ಯ ಮಾಡುತ್ತಾರೆ ಎಂದರು.
ಖಡಕ್ ಆಗಿ ನಿರ್ಣಯ ತೆಗೆದುಕೊಳ್ಳಬೇಕು ಹೋಂ ಮಿನಿಸ್ಟರ್ ಬೇಕು
ಗೃಹ ಮಂತ್ರಿಗಳು ಒಳ್ಳೆಯವರಿದ್ದಾರೆ. ಆದ್ರೆ, ಅವರು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಅಷ್ಟೇ. ಅವರ ಒಳ್ಳೆಯತನ ನಡೆಯುವುದಿಲ್ಲ. ಹೋಂ ಡಿಪಾರ್ಟ್ ಮೆಂಟ್‌ಗೆ ಸ್ಟ್ರಾಂಗ್ ಮಿನಿಸ್ಚರ್ ಬೇಕು. ಖಡಕ್ ಆಗಿ ನಿರ್ಣಯ ತೆಗೆದುಕೊಳ್ಳಬೇಕು. ಸಿಎಂ ಬೊಮ್ಮಾಯಿ ಅವರು ಸಚಿವ ಸಂಪುಟ ಅದನ್ನು ಮಾಡ್ತೀನಿ, ಇದನ್ನ ಮಾಡ್ತೀನಿ ಅಂತಾರೆ. ಆದಷ್ಟು ಬೇಗನೆ ಒಂದು ಒಳ್ಳೆಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಮತದಾರರ ಮಾಹಿತಿ ಕಳವು ಹಾಗೂ ಮತದಾರರ ಐಡಿ ಡಿಲೀಟ್ ಮಾಡಿರುವುದಾಗಿ ಕಾಂಗ್ರೆಸ್ ಮಾಡಿರುವ ಆರೋಪದ ವಿಚಾರವಾಗಿ ಮಾತನಾಡಿ, ನಮ್ಮ ವಿಜಯಪುರ ಮಹಾನಗರ ಪಾಲಿಕೆ ಎಲೆಕ್ಷನ್ ವೇಳೆ ಸಾಕಷ್ಟು ಡಿಲೀಟ್ ಆಗಿವೆ. ಮಹಾನಗರ ಪಾಲಿಕೆ ಮತದಾರರ ಪಟ್ಟಿ ತಯಾರು ಮಾಡುವಲ್ಲಿ ಅನುಭವದ ಕೊರತೆ ಇದೆ. ಹಾಗಾಗಿ ಬದುಕಿದ್ದವರು ಸತ್ತಿದ್ದಾರೆ, ಸತ್ತವರು ಬದುಕಿದ್ದಾರೆ ಎಂಬಂತೆ ಆಗಿದೆ. ಇದು ಯಾವುದೋ ಒಂದೇ ಕಮ್ಯೂನಿಟಿಗೆ ಆಗಿದ್ದಲ್ಲಾ, ಮುಸ್ಲಿಂ & ಹಿಂದೂಗಳದ್ದು ಆಗಿವೆ. ವಿಧಾನಸಭೆ ಚುನಾವಣೆಗೆ ಕಂದಾಯ ಇಲಾಖೆಯವರು ಮಾಡ್ತಾರೆ, ಅವರು ವ್ಯವಸ್ಥಿತವಾಗಿ ಮಾಡ್ತಾರೆ.
ಈಗ ಆಪ್(App) ಬಂದಿದೆ, ದೇಶದಲ್ಲಿ ಯಾವುದೋ ಮೂಲೆಯಲ್ಲಿ ಸೇರಿ ಎರಡೆರಡು ಓಟರ್ ಐಡಿ ಇದ್ರೂ ಡಿಲೀಟ್ ಆಗ್ತಾವೆ. ಇನ್ನು ಹದಿನೈದು ದಿನದಲ್ಲಿ ರಾಷ್ಟ್ರೀಯ ಆಪ್ ಬರೋದಿದೆ. ಅದು ಬಂದ್ರೆ ಒಬ್ಬ ಮತದಾರ ಕಾಶ್ಮೀರದಲ್ಲೂ ಹಾಗೂ ವಿಜಯಪುರದಲ್ಲೂ ಓಟರ್ ಐಡಿ ಮಾಡಿಸಿದ್ರೆ ಅದು ಗೊತ್ತಾಗುತ್ತದೆ. ಅವರು ಒಂದೇ ಕಡೆ ಆಪ್ಷನ್ ಇಟ್ಕೊಳೋಕೆ ಅವಕಾಶ ಇದೆ, ಇನ್ನೊಂದು ಅಟೊಮೇಟಿಕ್ ಆಗಿ ಡಿಲೀಟ್ ಆಗುತ್ತದೆ ಎಂದರು.
ಪಂಚಮಸಾಲಿ ಮೀಸಲಾತಿ
ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಮಾತನಾಡಿ, ಮೊನ್ನೆ ಎಸ್ಸಿ ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದು, ಮೊದಲ ಹೆಜ್ಜೆ. ಎರಡನೇ ಹೆಜ್ಜೆಯಾಗಿ ಹಿಂದುಳಿದ ವರ್ಗಕ್ಕೆ ಅನೇಕ ಸಮುದಾಯ ಸೇರಿಸಬೇಕಿದೆ. ತಳವಾರ ಸಮುಾದಯಕ್ಕೆ ಎಸ್ ಟಿ ಮೀಸಲಾತಿ ನೀಡುವ ಬಗ್ಗೆ ವಿಧಾನ ಸಭೆಯಲ್ಲಿ ನಾವು ಹೋರಾಟ ಮಾಡಿದ್ದೆವು. ಅಗ ಅವರಿಗೆ ಪ್ರಮಾಣ ಪತ್ರ ನೀಡುತ್ತಿದ್ದಾರೆ. ಮುಂದೆ ಹಾಲುಮತ ಸಮಾಜ ಎಸ್ ಟಿಗೆ ಹೋಗುವುದು ನಿರ್ಣಯ ಆಗಬೇಕಿದೆ ಎಂದು ಹೇಳಿದರು.

ನೋಡಿ ಸಿದ್ದರಾಮಯ್ಯ ಅವರು ಯಾವ ರೀತಿ ಮೇಲ್ಜಾತಿಯವರನ್ನು ದ್ವೇಷ ಮಾಡುತ್ತಾರೆ. ಒಬಿಸಿಯಲ್ಲಿ 10% ಮೀಸಲಾತಿ ಕೊಟ್ಟರೆ ಇವರಿಗೆ ಏನು ಬ್ಯಾನಿ ಆಗುತ್ತೆ? ಸಿದ್ದರಾಮಯ್ಯಗೆ ಏನು ಬ್ಯಾನಿ? ಎಂದು ಪ್ರಶ್ನಿಸಿದರು. ಇನ್ನೂ ಲಿಂಗಾಯತರು, ಬ್ರಾಹ್ಮಣರು, ಮರಾಠರು, ರಜಪೂತರು ಮತ್ತು ವಿಶ್ವಕರ್ಮ ಸಮಾಜಗಳಲ್ಲಿ ಬಡತನ ಇಲ್ವಾ? ಎಲ್ಲಾ ಸಮಾಜದಲ್ಲಿ ಬಡತನ ಎಂಬುದು ಇದೆ. ಯಾವುದೇ ಒಂದು ಮೇಲ್ಜಾತಿಯಲ್ಲಿ ಹುಟ್ಟಿದ್ದಾರೆ ಎಂದರೆ ಎಲ್ಲರೂ ಟಾಟಾ ಬಿರ್ಲಾ ಇರಲ್ಲ. ಎಲ್ಲಾ ಸಮುದಾಯಗಳ ಹಿಂದುಳಿದ ಜನರಿಗಾಗಿ ಪ್ರಧಾನಿ ಮೋದಿ ಅವರು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಶೇ. 10 ರಷ್ಟು ಮೀಸಲಾತಿ ನೀಡಿದ್ದಾರೆ.
ನಮ್ಮ ಜಾತಿಯಲ್ಲಿ ನಾನೊಬ್ಬ ಶ್ರೀಮಂತ ಇರಬಹುದು. ಆದರೆ, ಕೂಲಿ ಮಾಡುವವರು ಇದ್ದಾರೆ. ಕಂಡಕ್ಟರ್ ಕೂಡ ಇದ್ದಾರೆ. ಬ್ರಹ್ಮಾಡರಲ್ಲಿ ಮೂರು ಸಾವಿರಕ್ಕೆ ಜೀವನ ಮಾಡುವಷ್ಟೂ ಬಡವರು ಇದ್ದಾರೆ. ಇಂಥ ಸಮುದಾಯದ ಬಡವರಿಗೆ ಪ್ರಧಾನ ಮಂತ್ರಿಗಳು ಬಹಳದೊಡ್ಡ ಉಪಕಾರ ಮಾಡಿದ್ದಾರೆ. ಶೇ. 10 ಮೀಸಲಾತಿಯನ್ನು ನಾವ್ಯಾರೂ ಶ್ರೀಮಂತರು, ಜಮೀನ್ದಾರು ಕೇಳ್ತಿಲ್ಲ. ಸಮುದಾಯದಲ್ಲಿರುವ ಬಡವರಿಗೆ ಕೊಟ್ಟಿದ್ದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ ಎಂದರು.
ಮುಧೋಳದಲ್ಲಿ ಕಬ್ಬು ಬೆಳೆಗಾರರ ಹೋರಾಟ ವಿಚಾರವಾಗಿ ಮಾತನಾಡಿ, ಮುಧೋಳದಲ್ಲೇ ಯಾಕೆ ಆಗ್ತಿದೆ? ಯಾಕಂದ್ರೆ ಅವರು(ನಿರಾಣಿ) ರೈತರೊಂದಿಗೆ ಸಹಕಾರ ಇಲ್ಲ, ರೈತರ ಭಾವನೆಗಳಿಗೆ ಸ್ಪಂದಿಸೋದಿಲ್ಲ. ಕಾರ್ಖಾನೆ ಮಾಲೀಕರು ರೈತರೊಂದಿಗೆ ಸೌಹಾರ್ದಯುತವಾಗಿ ಮಾತುಕಥೆ ಮಾಡಿದ್ರೆ ಒಪ್ಪುತ್ತಾರೆ. ಅದನ್ನ ಬಿಟ್ಟು ದುರಹಂಕಾರ ಮಾಡಿದ್ರೆ, ನಾನು ಏನು ಬೇಕಾದ್ರೂ ಮಾಡಬಹುದು ಎಂದು ಮಾಡಿದ್ರೆ ರೈತರು ರೊಚ್ಚಿಗೇಳ್ತಾರೆ ಎಂದು ಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿಗೆ ಟಾಂಗ್ ಕೊಟ್ಟರು.












Click it and Unblock the Notifications