ಬೆಂಗಳೂರಲ್ಲಿ ಕರ್ನಾಟಕದ ಮೊದಲ ಮಂಗಳ ಮುಖಿಯರ 'ಮಂಗಳ' ಗ್ರಾಮ
ಬೆಂಗಳೂರು, ಜೂ. 15: ಮಂಗಳಮುಖಿಯರಿಗೆ ಪ್ರತ್ಯೇಕ ನಗರ ನಿರ್ಮಾಣ ಮಾಡುವ ಮೂಲಕ ಕರ್ನಾಟಕ ವಸತಿ ಇಲಾಖೆ ಇತಿಹಾಸ ಸೃಷ್ಟಿಸಲಿದೆ. ಬೆಂಗಳೂರಿನ ಹೊರ ವಲಯದಲ್ಲಿರುವ ದೊಡ್ಡ ಆಲದ ಮರದ ಬಳಿ ಮಂಗಳಮುಖಿಯರಿಗೆ ಪ್ರತ್ಯೇಕ ನಗರ ನಿರ್ಮಾಣ ಮಾಡಿಕೊಡಲಾಗುತ್ತಿದೆ. ಸುಮಾರು 2.2 ಎಕರೆ ಜಾಗದಲ್ಲಿ ಮಂಗಳಮಖಿಯರಿಗೆ ಮನೆ ನಿರ್ಮಿಸಿ ಕೊಡಲು ವಸತಿ ಇಲಾಖೆ ಮುಂದಾಗಿದೆ. ವಸತಿ ಸಚಿವ ವಿ. ಸೋಮಣ್ಣ ಅವರು ಮಂಗಳಮುಖಿಯರ ನಗರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಪೂಜೆ ನೆರವೇರಿಸಿದ್ದಾರೆ.
ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಮಂಗಳಮುಖಿಯರಿಗೆ ಪ್ರತ್ಯೇಕ ವಸತಿ ಸಮುಚ್ಚಯ ನಿರ್ಮಾಣ ಮಾಡಿಕೊಡುತ್ತಿದೆ. ಕೆಂಗೇರಿ ಸಮೀಪದ ಮುಕ್ತಿನಾಗ ದೇವಸ್ಥಾನದ ಬಳಿ ಮಂಗಳಮುಖಿಯರ ವಸತಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
''ಎರಡು ಎಕರೆ ಜಾಗದಲ್ಲಿ ಒಟ್ಟು 306 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಎರಡು ಹಂತಸ್ತಿನ ಈ ವಸತಿ ಸಮುಚ್ಚಯದಲ್ಲಿ ಸಿಂಗಲ್ ಬೆಡ್ ರೂಮ್ ಮನೆಗಳು ನಿರ್ಮಾಣವಾಗಲಿವೆ ಎಂದು ಕೊಳಚೆ ನಿರ್ಮೂಲನಾ ಮಂಡಳಿಯ ಇಂಜಿನಿಯರ್ ಸ್ಪಷ್ಟಪಡಿಸಿದ್ದಾರೆ. ಇನ್ನು ಕೆಲವು ವರ್ಷ ಮುಗಿದರೆ ಈ ಪ್ರದೇಶವೂ ಸಹ ಬೆಂಗಳೂರಿನ ಭಾಗವಾಗಲಿದೆ. ಈಗಲೂ ಸಹ ಭೂಮಿ ಪಡೆಯುವುದು ತುಂಬಾ ಕಷ್ಟವಾಗಿದೆ. ಮಂಗಳಮುಖಿಯರ ಸಮುದಾಯಕ್ಕೆ ಸೂರು ಕಲ್ಪಿಸುತ್ತಿರುವ ಈ ಯೋಜನೆಯಿಂದಾಗಿ ನನ್ನ ಬಹುದಿನಗಳ ಕನಸು ಈಡೇರಿದಂತಾಗಿದೆ'' ಎಂದು ವಸತಿ ಸಚಿವ ವಿ. ಸೋಮಣ್ಣ ಸಂತಸ ತೋಡಿಕೊಂಡಿದ್ದಾರೆ.

ಬೋರ್‌ವೆಲ್‌ನಲ್ಲಿ ನೀರು
ಬೋರ್‌ವೆಲ್‌ನಲ್ಲಿ ನೀರು: ಮಂಗಳಮುಖಿಯರ ನಗರದಲ್ಲಿ ಈಗಾಗಲೇ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಬೋರ್ ವೆಲ್ ಕೊರೆಯಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಭೂಮಿಯನ್ನು ಬೋರ್ಡ್‌ಗೆ ಹಸ್ತಾಂತರಿಸಿದ್ದಾರೆ. ಮುಂದಿನ ಅರು ತಿಂಗಳಲ್ಲಿ ಈ ವಸತಿ ಸಮುಚ್ಚಯಕ್ಕೆ ಬೇಕಾಗಿರುವ ಮೂಲ ಸೌಕರ್ಯಗಳನ್ನು ಪೂರ್ಣಗೊಳಿಸುವಂತೆ ಇಂಜಿನಿಯರ್‌ಗಳಿಗೆ ಸೂಚಿಸಿದ್ದೇನೆ ಎಂದು ಸೋಮಣ್ಣ ಅವರು ತಿಳಿಸಿದ್ದಾರೆ.

ಮಂಗಳಮುಖಿಯರಿಗೆ ಸೂರು
ಮಂಗಳಮುಖಿಯರಿಗೆ ಸೂರು ಕಲ್ಪಿಸುವ ಈ ಸದುದ್ದೇಶಕ್ಕೆ ಸಮತಾ ಸೈನಿಕ ದಳದ ವೆಂಕಟಸ್ವಾಮಿ ತುಂಬಾ ಬೆಂಬಲ ಕೊಟ್ಟಿದ್ದಾರೆ ಎಂದು ಸಚಿವರು ಸ್ಮರಿಸಿದರು. ಕಳೆದ ಹದಿನೈದು ವರ್ಷಗಳಿಂದ ಮಂಗಳಮುಖಿಯರಿಗೆ ಸೂರು ಕಲ್ಪಸುವ ವಿಚಾರದಲ್ಲಿ ಹೋರಾಟ ನಡೆಸುತ್ತಿದ್ದೇವೆ. ಕೊನೆಗೂ ಅದಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ವಸತಿ ಸಚಿವರ ವೈಯಕ್ತಿಕ ಕಾಳಜಿ ವಹಿಸಿದ ಪರಿಣಾಮ ಮಂಗಳಮುಖಿಯರಿಗೆ ಸೂರು ಪಡೆಯುವ ಕನಸು ನನಸಾಗಿದೆ ಎಂದು ಸಮತಾ ಸೈನಿಕ ದಳದ ಮುಖ್ಯಸ್ಥ ವೆಂಕಟಸ್ವಾಮಿ ತಿಳಿಸಿದರು.

ಮಂಗಳಮುಖಿಯರ ಸಂಘದ ಅಧ್ಯಕ್ಷೆ ಗಾಯಿತ್ರಿ
ಅಖಿಲ ಕರ್ನಾಟಕ ಮಂಗಳಮುಖಿಯರ ಸಂಘದ ಅಧ್ಯಕ್ಷೆ ಗಾಯಿತ್ರಿ ಮಾತನಾಡಿ, ಬೆಂಗಳೂರಿನಲ್ಲಿ ನಮ್ಮ ಸಮುದಾಯ ಮನೆ ಬಾಡಿಗೆ ಪಡೆಯುವುದು ತುಂಬಾ ಕಷ್ಟ. ನಮಗೆ ಮನೆ ಕೊಟ್ಟರೂ ಮಾಲೀಕರು ಹೆಚ್ಚು ಬಾಡಿಗೆ ಪೀಕುತ್ತಾರೆ. ಅಲ್ಲದೇ ನಾನಾ ಷರತ್ತುಗಳನ್ನು ವಿಧಿಸುತ್ತಾರೆ. ನಮಗೆ ನಾನಾ ರೂಪದಲ್ಲಿ ಹಿಂಸೆ ಕೊಡುತ್ತಾರೆ. ನಮ್ಮ ಸಮುದಾಯಕ್ಕೆ ಪ್ರತ್ಯೇಕ ಗ್ರಾಮ ನಿರ್ಮಾಣ ಮಾಡುತ್ತಿರುವ ಈ ಯೋಜನೆಯಿಂದ ತುಂಬಾ ಸಂತಸವಾಗಿದೆ.

ನಮ್ಮ ಸಮುದಾಯವೇ ನಿರ್ವಹಣೆ ಮಾಡಲಿದೆ
ವಾಣಿಜ್ಯ ಕಟ್ಟಡ, ಶಾಲೆ, ಆಸ್ಪತ್ರೆ ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳು ಇಲ್ಲಿ ಇರಲಿವೆ. ಇವನ್ನು ನಮ್ಮ ಸಮುದಾಯವೇ ನಿರ್ವಹಣೆ ಮಾಡಲಿದೆ. ಈಗಾಗಲೇ 220 ಮಂಗಳ ಮುಖಿಯರನ್ನು ಗುರುತಿಸಿದ್ದೇವೆ. ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣದಿಂದ ಬರುವ ಮಂಗಳ ಮುಖಿಯರಿಗೆ ಇಲ್ಲಿ ವಸತಿ ಸೌಲಭ್ಯ ಕೊಡಲಾಗುವುದಿಲ್ಲ. ಕೇವಲ ಕರ್ನಾಟಕದಲ್ಲಿರುವ ಮಂಗಳಮುಖಿಯರಿಗೆ ಮಾತ್ರ ವಸತಿಗಳನ್ನು ಮೀಸಲಿಡಲಾಗಿದೆ ಎಂದು ಸ್ಪಷ್ಟಪಡಿಸಿದರು.












Click it and Unblock the Notifications