ಇಂಗ್ಲೆಂಡ್ ಸಮಾಜ ಶಾಸ್ತ್ರಜ್ಞೆ ಮಂಗಲ ಕೆಂಪಮ್ಮ ಇನ್ನಿಲ್ಲ
ಮಂಡ್ಯ, ಏ.28: ಮಂಗಲ ಕೆಂಪಮ್ಮ ಎಂದೇ ಜಿಲ್ಲೆಯ ಗ್ರಾಮಸ್ಥರ ಜನಾನುರಾಗಿಯಾಗಿದ್ದ ಇಂಗ್ಲೆಂಡ್‌ನ ಸಮಾಜ ಶಾಸ್ತ್ರಜ್ಞೆ ಡಾ. ಸ್ಕಾರ್‌ಲೆಟ್ ಎಪ್ಸ್ ಟೆನ್ ಒಬೆ (T. Scarlett Epstein Obe) ಇಂಗ್ಲೆಂಡ್‌ನ ಬ್ರೈಟನ್ ನಲ್ಲಿ ಭಾನುವಾರ ಬೆಳಗ್ಗೆ ನಿಧನರಾದರು.
ದಶಕಗಳ ಹಿಂದೆಯೇ ತಾಲೂಕಿನ ಮಂಗಲ ಗ್ರಾಮಕ್ಕೆ ಅಧ್ಯಯನಕ್ಕೆಂದು ಬಂದು ಇಲ್ಲಿಯೇ ನೆಲೆಸಿದ್ದ ಡಾ. ಸ್ಕಾರ್‌ಲೆಟ್ ಎಪ್ಸ್ ಟೆನ್ ಒಬೆ ಅಲಿಯಾಸ್ ಮಂಗಲ ಕೆಂಪಮ್ಮ ಅವರು ಡೇಬಿ, ನಿಶೆಲ್ ಎಂಬ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಮಂಗಳವಾರ ಇಂಗ್ಲೆಂಡ್‌ನ ಬ್ರೈಟನ್ ನಲ್ಲಿ ನಡೆಯಲಿದೆ. ಮಂಡ್ಯ ತಾಲೂಕು ಮಂಗಲ ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಎಂಎಚ್ ಜವರೇಗೌಡರ ಅಧ್ಯಕ್ಷತೆಯಲ್ಲಿ ಸೋಮವಾರ ಶ್ರದ್ಧಾಂಜಲಿ ಸಭೆ ನಡೆಯಿತು.
ಮೂಲತಃ ಜರ್ಮನಿಯವರಾದ ಡಾ. ಸ್ಕಾರ್‌ಲೆಟ್ ಎಪ್ಸ್ ಟೆನ್ ಒಬೆ ಅವರ ಒಡನಾಡಿಯೂ, ಶಿಷ್ಯರೂ ಆಗಿದ್ದ ನಿವೃತ್ತ ಐಎಎಸ್ ಅಧಿಕಾರಿ, ಪ್ರಸ್ತುತ ರಾಜ್ಯ ಜನಪದ ಪರಿಷತ್ತಿನ ಅಧ್ಯಕ್ಷ ಟಿ ತಿಮ್ಮೇಗೌಡ ಅವರು ಮಾತನಾಡಿ 'ಮಂಗಲ ಕೆಂಪಮ್ಮ ಅವರಿಗೆ ಭಾರತದ ಹಳ್ಳಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. 2020 ರ ವೇಳೆಗೆ ಭಾರತದಲ್ಲಿ ಆಹಾರ ಕ್ಷಾಮ ತಲೆದೋರುತ್ತದೆ ಎಂದೂ ಎಚ್ಚರಿಸಿದ್ದಾರೆ. ಇವರ ಅಕಾಲಿಕ ಮರಣ ನಮ್ಮ ಗ್ರಾಮಕ್ಕೆ ಹಾಗೂ ನಾಡಿಗೆ ತುಂಬಲಾರದ ನಷ್ಟವಾಗಿದೆ' ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಲೋಕ ಶಿಕ್ಷಣಾಧಿಕಾರಿ ಕೆ ಕಾಳೇಗೌಡ ಅವರು ಮಾತನಾಡಿ, ಮಂಗಲ ಮತ್ತು ಕಾಳೇನಹಳ್ಳಿ ಗ್ರಾಮಕ್ಕೆ 1954ರಲ್ಲಿ ಸ್ಕಾರ್‌ಲೆಟ್ ಎಫ್ಟೀನ್ ಅವರು ಸಾಮಾಜಿಕ ಅಧ್ಯಯನಕ್ಕೆ ಆಗಮಿಸಿದ್ದರಿಂದಾಗಿ ಈ ಗ್ರಾಮಗಳು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರಿಯಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.
ಎಂ ಯೋಗೇಶ್ ಮಾತನಾಡಿ ಅವರು ಮಾತನಾಡಿ 'ಭಾರತದಲ್ಲಿನ ಗ್ರಾಮಸ್ಥರು ನಗರ ಪ್ರದೇಶಕ್ಕೆ ವಲಸೆ ಹೋಗುವುದನ್ನು ಮನಗಂಡು ವಿಷಾದಿಸಿದ್ದಲ್ಲದೆ, ಗ್ರಾಮೀಣ ಜನತೆ ಹಳ್ಳಿಗಳಲ್ಲೇ ವಾಸವಿದ್ದು, ಮೂಲಭೂತ ಸೌಕರ್‍ಯಗಳನ್ನು ಒದಗಿಸಿ ಅವರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವ ಮಹತ್ತರ ಯೋಜನೆಯನ್ನು ರೂಪಿಸಬೇಕೆಂದು ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲವಾಲಿಯಾ ಅವರನ್ನು ಮಂಗಲ ಕೆಂಪಮ್ಮ ಒತ್ತಾಯಿಸಿದ್ದರು.
ಈ ಸಂಬಂಧ ಮರಳಿ ಬಾ ಹಳ್ಳಿಗೆ ಎಂಬ ಸಾಕ್ಷ್ಯ ಚಿತ್ರ ನಿರ್ಮಾಣ ಹಾಗೂ ಕೃತಿಯನ್ನು ರಚಿಸಿ ಗ್ರಾಮಾಂತರ ಪ್ರದೇಶದ ಯುವಕರಲ್ಲಿ ಗ್ರಾಮಗಳಲ್ಲೇ ನೆಲೆಸುವಂತಹ ಪರಿಸ್ಥಿತಿ ನಿರ್ಮಾಣಕ್ಕೆ ಮಂಗಲ ಕೆಂಪಮ್ಮ ಮುಂದಾಗಿದ್ದರು ಎಂದು ಅವರು ವಿವರಿಸಿದರು.
ಗ್ರಾಮೀಣ ಮಹಿಳೆಯರು ಹಾಗೂ ಬಡಜನತೆಯ ಬಗ್ಗೆ ಅಸಾಧಾರಣ ಒಲವು ಹೊಂದಿದ್ದ ಡಾ. ಸ್ಕಾರ್‌ಲೆಟ್ ಎಪ್ಸ್ ಟೆನ್ ಒಬೆ ಅವರು, ಇಂದು ನಮ್ಮನ್ನು ಅಗಲಿರುವುದು ಗ್ರಾಮೀಣ ಭಾಗಕ್ಕೆ ತುಂಬಾ ನಷ್ಟ ಉಂಟುಮಾಡಿದೆ ಎಂದು ಹೇಳಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಂಸಿ ಲಂಕೇಶ್, ಗ್ರಾಪಂ ಸದಸ್ಯರಾದ ಪುಟ್ಟಸ್ವಾಮಿ, ಶಿವಪ್ಪ, ನೀರು ಬಳಕೆದಾರರ ಸಹಕಾರ ಸಂಘದ ನಿರ್ದೇಶಕ ಮೂಗ ಸಿದ್ದಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಎಂಇ ಮಹೇಶ್, ಪಂಚಾಯಿತಿ ಕಾರ್‍ಯದರ್ಶಿ ಸಿದ್ದಪ್ಪ ಸೇರಿದಂತೆ ಹಲವರು ಸಭೆಯಲ್ಲಿ ಶ್ರದ್ದಾಂಜಲಿ ಸಲ್ಲಿಸಿದರು.












Click it and Unblock the Notifications