Karnataka Rains: 'ಮಾಂಡೌಸ್' ದುರ್ಬಲ, ಡಿ.13ಕ್ಕೆ ಮತ್ತೆ ವೈಪರಿತ್ಯ ಕರ್ನಾಟಕಕ್ಕೆ ಭಾರಿ ಮಳೆ
ಬೆಂಗಳೂರು, ಡಿಸೆಂಬರ್ 11: 'ಮಾಂಡೌಸ್' ಚಂಡಮಾರುತ ಭಾನುವಾರ ದುರ್ಬಲಗೊಂಡಿದೆ. ಹೀಗಿದ್ದರೂ ಸಹ ಎರಡು ಪ್ರತ್ಯೇಕ ಕಡೆಗಲ್ಲಿ ಮೇಲ್ಮೈ ಸುಳಿಗಾಳಿ ನಿರ್ಮಾಣವಾಗುವ ಲಕ್ಷಣಗಳು ಇದೆ. ಪರಿಣಾಮ ಕರ್ನಾಟಕದಲ್ಲಿ ಮುಂದಿನ 5 ದಿನ ಸಾಧಾರಣದಿಂದ ಭಾರಿ ಮಳೆ ಆಗಲಿದೆ. ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಭಾರತೀಯ ಹವಾಮಾನ ಇಲಾಖೆ ತಿಳಿಸಿರುವ ಮಳೆ ಮುನ್ಸೂಚನೆ ಪ್ರಕಾರ, ತಮಿಳುನಾಡು ಕರಾವಳಿ ಹಾಗೂ ಕೇರಳಕ್ಕೆ ಹೊಂದಿಕೊಂಡ ಭಾಗದಲ್ಲಿ 'ಮಾಂಡೌಸ್' ಚಂಡಮಾರುತ ಭಾನುವಾರ ದರ್ಬಲಗೊಂಡಿದ್ದು, ವಾಯುಭಾರ ಕುಸಿತವಾಗಿದೆ. ನಂತರ ಅದು ಪಶ್ಚಿಮ ನೈಋತ್ಯ ದಿಕ್ಕಿನಲ್ಲಿ ಚಲಿಸಿ, ಕರ್ನಾಟಕದ ಈಶಾನ್ಯ ಅರಬ್ಬಿ ಸಮುದ್ರ ತಲುಪಲಿದೆ. ಈ ಕಾರಣದಿಂದ ಡಿಸೆಂಬರ್ 13ರಂದು ಅರಬ್ಬಿ ಸಮುದ್ರದ ಮಟ್ಟದಲ್ಲಿ ಮೇಲ್ಮೈ ಸುಳಿಗಾಳಿ ಸೃಷ್ಟಿ ಆಗಲಿದೆ. ಇದೇ ದಿನ ಅಂಡಮಾನ್ ಸಮುದ್ರದಲ್ಲಿ 5.8ಕಿಲೋ ಮೀಟರ್ ಎತ್ತರದಲ್ಲಿ ಒಂದು ಮೇಲ್ಮೈ ಸುಳಿಗಾಳಿ ಕಾಣಿಸಿಕೊಳ್ಳಲಿದೆ.
ಈ ಎರಡು ಕಾರಣಗಳಿಂದ ಕರಾವಳಿ ಕರ್ನಾಟಕ ಹಾಗೂ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ತಜ್ಞ ಡಾ.ಪ್ರಸಾದ್ ತಿಳಿಸಿದ್ದಾರೆ.

ಸೊಮವಾರ 4ಜಿಲ್ಲೆಗೆ ಹಳದಿ ಎಚ್ಚರಿಕೆ
ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರಿದಿದೆ. ಮುಂದಿನ ಐದು ದಿನ ಪೈಕಿ ಸೋಮವಾರ ಗುಡುಗು ಸಹಿತ ಭಾರಿ ಮಳೆ ಆಗುವುದರಿಂದ ಚಾಮರಾಜನಗರ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಮಂಗಳವಾರದಿಂದ ಮೂರುದಿನ ಹಗುರದಿಂದ ಸಾಧಾರಣವಾಗಿ ಕೆಲವು ಕಡೆಗಳಲ್ಲಿ ಮಳೆ ಆಗಲಿದೆ.
ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಐದು ದಿನ (ಡಿ.16) ಪೈಕಿ ಮೊದಲ ಎರಡು ದಿನ ಸಾಧಾರಣದಿಂದ ಭಾರಿ ಮಳೆ ಆಗಲಿದೆ. ನಂತರದ ಒಂದು ದಿನ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಹಲವು ಕಡೆಗಳಲ್ಲಿ ಹಗುರ ಮಳೆಯಾಗಲಿದೆ. ನಂತರ ಎರಡು ದಿನ ತುಂತುರು ಮಳೆ ಬೀಳಲಿದೆ. ಇದೇ ಅವಧಿಯಲ್ಲಿ ಉತ್ತರ ಒಳನಾಡಿನಲ್ಲಿ ಇಂದಿನಿಂದ ಮುಂದಿನ ಎರಡು ದಿನ ಹಗರು ಮಳೆ ಬೀಳಲಿದೆ. ರಾಜ್ಯದ ಈ ಮಳೆ ನಿಗದಿ ಪ್ರದೇಶಗಳಲ್ಲಿ ಚಳಿ ಹೆಚ್ಚಾಗಿ ಕಂಡು ಬರಲಿದೆ. ಬೆಳಗ್ಗೆ ಮಂಜಿನ ವಾತಾವರಣ ಕಂಡು ಬರಲಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ 24ಗಂಟೆಯಲ್ಲಿ ಕೋಲಾರದಲ್ಲಿ ಅಧಿಕ ಮಳೆ 8 ಸೆಂಟಿ ಮೀಟರ್, ಚಿಂತಾಮಣಿ, ರಾಯಲ್‌ಪಾಡು ತಲಾ 7ಸೆಂ.ಮೀ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಾಲೂರಲ್ಲಿ ತಲಾ 5ಸೆಂ.ಮೀ. ಮಳೆ ಆಗಿದೆ. ಉಳಿದೆಡೆ ಸಾಧಾರಣ ಮಳೆ ಕಂಡು ಬಂದಿದೆ. ದಕ್ಷಿಣ ಒಳನಾಡು ಭಾಗದಲ್ಲಿ ಇಡಿ ದಿನ ಚಳಿ ಹಾಗೂ ಮೋಡ ಕವಿದ ಕಂಡು ಬಂದಿದೆ.












Click it and Unblock the Notifications