ಕುಡಿದ ಮತ್ತಿನಲ್ಲಿ ಸಿಎಂ ಮನೆಯಲ್ಲಿ ಬಾಂಬ್ ಇದೆ ಎಂದ!
ಬೆಂಗಳೂರು, ಮೇ 18 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿ ಬಾಂಬ್ ಇದೆ ಎಂದು ಕರೆ ಮಾಡಿದ್ದ ಅನಾಮಿಕ ವ್ಯಕ್ತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕುಡಿದ ಮತ್ತಿನಲ್ಲಿ ಈ ಕರೆ ಮಾಡಿದ್ದೆ ಎಂದು ಬಂಧಿತ ವ್ಯಕ್ತಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಬಂಧಿತನನ್ನು ಬೆಂಗಳೂರಿನ ವಿವೇಕನಗರದ ನಿವಾಸಿ ರಾಜು ಎಂದು ಗುರುತಿಸಲಾಗಿದೆ. ಫೆಬ್ರವರಿ 18ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕರೆ ಮಾಡಿದ್ದ ಈ ರಾಜು ಸಿದ್ದರಾಮಯ್ಯ ಮನೆಯಲ್ಲಿ ಬಾಂಬ್ ಇಟ್ಟಿದ್ದು, ಕೆಲವೇ ಕ್ಷಣಗಳಲ್ಲಿ ಅದು ಸ್ಫೋಟಗೊಳ್ಳಲಿದೆ ಎಂದು ಹೇಳಿದ್ದ. [ಪೊಲೀಸರಿಂದ ಬಲರಾಮನ ಬಂಟ ರೌಡಿ ಮುಲಾಮ ಬಂಧನ]

ಈ ಬಗ್ಗೆ ಮಾಹಿತಿ ಪಡೆದ ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳು, ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸಿಎಂ ನಿವಾಸಕ್ಕೆ ಹೋಗಿ, ಕೆಲವು ಹೊತ್ತು ಹುಡುಕಾಟ ನಡೆಸಿದ ಬಳಿಕ ಇದು ಹುಸಿ ಬಾಂಬ್ ಬೆದರಿಕೆ ಕರೆ ಎಂಬುದು ತಿಳಿದುಬಂದಿತ್ತು. [ಸಿದ್ದರಾಮಯ್ಯ ಮನೆಯಲ್ಲಿ ಬಾಂಬ್, ಅನಾಮಿಕನ ಕರೆ]
ಕಬ್ಬನ್ ಪಾರ್ಕ್ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಕರೆ ಮಾಡಿದ್ದ ಅನಾಮಿಕ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದರು. ಸೋಮವಾರ ಬೆಂಗಳೂರಿನಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕುಡಿದ ಮತ್ತಿನಲ್ಲಿ ಕರೆ : ಸಿಎಂ ಮನೆಯಲ್ಲಿ ಬಾಂಬ್ ಇದೆ ಎಂದು ಕರೆ ಮಾಡಿದ ಬಳಿಕ ರಾಜು ಬೆಂಗಳೂರಿನಿಂದ ಪರಾರಿಯಾಗಿದ್ದ. ವಿವಿಧ ಜಿಲ್ಲೆಗಳಲ್ಲಿ ಓಡಾಡುತ್ತಾ ತಲೆಮರಿಸಿಕೊಂಡಿದ್ದ ಆತನನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ. ಕುಡಿದ ಮತ್ತಿನಲ್ಲಿ ಸಿಎಂ ಮನೆಯಲ್ಲಿ ಬಾಂಬ್ ಇದೆ ಎಂದು ಕರೆ ಮಾಡಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ.












Click it and Unblock the Notifications