Cyber Fraud: ಹುಡುಗಿ ಹೆಸರಲ್ಲಿ ಫೇಸ್‌ಬುಕ್ ಖಾತೆ: ವಿದ್ಯಾರ್ಥಿಯಿಂದ ಲಕ್ಷ ಲಕ್ಷ ಪೀಕಿಸಿದ ಖತರ್ನಾಕ್ ಅರೆಸ್ಟ್
ಬೆಂಗಳೂರು, ಡಿಸೆಂಬರ್ 15: ರಾಜ್ಯದಲ್ಲಿ ಸೈಬರ್ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಜನರಿಗೆ ವಂಚಿಸಲು ಖದೀಮರು ಹೊಂಚು ಹಾಕಿ ಕುಳಿತಿರುತ್ತಾರೆ. ಫೇಸ್‌ಬುಕ್, ಇನ್ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರ ಸ್ನೇಹ ಕುತ್ತು ತರುವುದಂದತೂ ಗ್ಯಾರಂಟಿ ಎನ್ನುವಂತಾಗಿದೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಆಗುವ ಸ್ನೇಹ ಹೆಚ್ಚಾಗಿ ಮೋಸ, ವಂಚನೆಯಲ್ಲೇ ಕೊನೆಯಾಗುತ್ತಿದೆ. ಯಾಕೆಂದರೆ ನಕಲಿ ಖಾತೆಗಳ ಹಾವಳಿ. ಯುವಕರು ಯುವತಿಯರ ಹೆಸರಲ್ಲಿ, ಯುವತಿಯರು ಯುವಕರ ಹೆಸರಲ್ಲಿ ಖಾತೆ ಸೃಷ್ಟಿಸಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೇ ರೀತಿಯ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿಯರ ಹೆಸರಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ಯುವಕರ ಸ್ನೇಹ ಮಾಡಿ ಅವರಿಂದ ಹಣ ಪೀಕಿಸುತ್ತಿದ್ದ ಆರೋಪಿಯನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬೇಕರಿವೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಫೇಸ್‌ಬುಕ್‌ನಲ್ಲಿ ಯುವತಿಯ ಹೆಸರು ಹಾಗೂ ಫೋಟೋ ಬಳಸಿದ್ದ ಆರೋಪಿ, ತುಮಕೂರು ಜಿಲ್ಲೆಯ ಶಿರಾದ ವಿದ್ಯಾನಗರದ ನಿವಾಸಿಯ ಜೊತೆ ಸ್ನೇಹ ಬೆಳೆಸಿದ್ದಾನೆ. ಇಬ್ಬರು ಮೊದಲು ಸ್ನೇಹಿತರಾಗಿ ಮಾತುಕತೆ ಆರಂಭಿಸಿದ್ದಾರೆ. ತಿಂಗಳುಗಟ್ಟಲೆ ಚಾಟಿಂಗ್ ಬಳಿಕ ಇಬ್ಬರ ನಡುವಿನ ಸ್ನೇಹ ಗಾಢವಾಗಿದೆ. ಆ ಕಡೆಯಿಂದ ಹುಡುಗಿ ಎಂದು ನಂಬಿಕೊಂಡಿದ್ದ ಸಂತ್ರಸ್ತ ಆರೋಪಿಯ ಜೊತೆ ಕರೆಯಲ್ಲೂ ಮಾತನಾಡಿದ್ದಾನೆ. ಈ ವೇಳೆ ಖತರ್ನಾಕ್ ಬುದ್ಧಿ ಉಪಯೋಗಿಸಿದ್ದ ಆರೋಪಿ ಹುಡುಗಿಯ ಧ್ವನಿಯಲ್ಲಿ ಮಾತನಾಡಿ ಸಂತ್ರಸ್ತನನ್ನು ನಂಬಿಸಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಆದ ಸ್ನೇಹವನ್ನೇ ಸಂತ್ರಸ್ತ ನಂಬಿಕೊಂಡಿದ್ದ. ಕೆಲ ದಿನಗಳು ಕಳೆದ ಬಳಿಕ ಆರೋಪಿ ತನ್ನ ನಕಲಿ ಖಾತೆಯಲ್ಲಿ ತನ್ನ ಅಸಲಿ ಕೆಲಸವನ್ನು ಆರಂಭಿಸಿದ್ದಾನೆ. ಯುವಕನ ಬಳಿ ನನಗೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದೇನೆ ಎಂದು ಹೇಳಿ ಒಂದಲ್ಲ ಎರಡಲ್ಲ ಬರೋಬ್ಬರಿ ಆರು ಲಕ್ಷ ರೂಪಾಯಿ ಪೀಕಿಸಿದ್ದಾನೆ. ಬರೀ ತನ್ನ ಖಾತೆಗಲ್ಲದೇ ತನ್ನ ಸ್ನೇಹಿತನ ಖಾತೆಗೂ ಹಣ ಹಾಕಿಸಿಕೊಂಡಿದ್ದಾನೆ. ಹಣ ಪಡೆದ ಬಳಿಕ ಸಂತ್ರಸ್ತನ ಸ್ನೇಹವನ್ನೇ ವಂಚಕ ಬಿಟ್ಟಿದ್ದಾನೆ.
ನಕಲಿ ಫೇಸ್‌ಬುಕ್ ಖಾತೆಯಿಂದ ತಾನು ವಂಚನೆಗೊಳಗಿರುವುದಾಗಿ ಮನಗಂಡ ಸಂತ್ರಸ್ತ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ವಂಚನೆಗೊಳಗಾದವನು ವಿದ್ಯಾರ್ಥಿಯಾಗಿದ್ದು, ಆತನ ತಂದೆ ಬ್ಯುಸಿನೆಸ್ ಮಾಡುತ್ತಿದ್ದಾರೆ. ತಂದೆಯ ಹಣವನ್ನೇ ಸಂತ್ರಸ್ತ ವಂಚಕರಿಗೆ ನೀಡಿದ್ದಾನೆ ಎನ್ನಲಾಗಿದೆ. ಸದ್ಯ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬೇಕರಿವೊಂದರಲ್ಲಿ ಕೆಲಸ ಮಾಡುತ್ತಿದ್ದು ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡಿದ್ದಾನೆ. ಹೀಗಾಗಿ ಕಳೆದುಕೊಂಡ ಹಣವನ್ನು ಮತ್ತೆ ಪಡೆಯಲು ಈ ವಂಚನೆಯ ದಾರಿ ಹಿಡಿದಿದ್ದಾನೆ ಎನ್ನಲಾಗಿದೆ.












Click it and Unblock the Notifications