Malur Vote Recount: ಮಾಲೂರು ಅಸೆಂಬ್ಲಿ ಕ್ಷೇತ್ರದ ಮರು ಮತ ಎಣಿಕೆಗೆ ಕ್ಷಣಗಣನೆ; ಗೆಲುವು ಯಾರಿಗೆ?
ಕೋಲಾರ, ನವೆಂಬರ್ 10 : ಸುಪ್ರೀಂಕೋರ್ಟ್ ಆದೇಶದಂತೆ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಇಂದು ನಡೆಯಲಿದೆ. ಕೋಲಾರದ ಟಮಕಾ ಬಳಿ ಇರುವ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಮರುಮತ ಎಣಿಕೆ ಕಾರ್ಯ ನಡೆಯಲಿದೆ. ಒಟ್ಟು 18 ಸುತ್ತು ಮರುಮತ ಎಣಿಕೆ ಕಾರ್ಯ ನಡೆಯಲಿದ್ದು, ಒಂದೇ ಕೊಠಡಿಯಲ್ಲಿ 14 ಟೇಬಲ್ ಹಾಕಿ ಮರು ಎಣಿಕೆ ಮಾಡಲಾಗುತ್ತಿದೆ.
ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಕುರಿತು ತೀವ್ರ ಚರ್ಚೆಗಳು ನಡೆದಿದ್ದು, ಇಂದು ಪ್ರತಿ ಟೇಬಲ್ಗೆ ಸಿಸಿಟಿವಿ, 360 ಡಿಗ್ರಿ ಕ್ಯಾಮರಾ ಅಳವಡಿಕೆ ಮಾಡಲಾಗಿದ್ದು, ಮತ ಎಣಿಕೆ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಇನ್ನೊಂದೆಡೆ ಗೆದ್ದ ಕಾಂಗ್ರೆಸ್ನ ನಂಜೇಗೌಡ ಹಾಗೂ ಬಿಜೆಪಿಯ ಪರಾಜಿತ ಅಭ್ಯರ್ಥಿ ಮಂಜುನಾಥ್ ಗೌಡಗೆ ಢವ ಢವ ಶುರುವಾಗಿದೆ.

ಪರಾಜಿತ ಅಭ್ಯರ್ಥಿ ಮಂಜುನಾಥಗೌಡ ಅವರು ಮತ ಎಣಿಕೆ ಪಾರದರ್ಶಕವಾಗಿ ನಡೆದಿಲ್ಲ ಎಂದು ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಕೆ.ವೈ.ನಂಜೇಗೌಡ 248 ಮತಗಳಿಂದ ಗೆದ್ದಿದ್ದರು. ಆದರೆ ಮಾಲೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ ಲೋಪವಾಗಿದ್ದು, ಈ ಸಂಬಂಧ ನಂಜೇಗೌಡ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್, ಸುಪ್ರೀಂಕೋರ್ಟ್ ಮರು ಮತ ಎಣಿಕೆಗೆ ಆದೇಶ ನೀಡಿವೆ.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಇಂದು (ನವೆಂಬರ್ 11) ಮಾಲೂರು ವಿಧಾನಸಭಾ ಕ್ಷೇತ್ರದ ಮತಗಳನ್ನು ಮರು ಎಣಿಕೆ ಮಾಡಲು ಕೋಲಾರ ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ. ಕೋಲಾರದ ಟಕಮದಲ್ಲಿರುವ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಮತಗಳ ಮರು ಎಣಿಕೆ ನಡೆಯಲಿದೆ. ಮರು ಮತಎಣಿಕೆಗೆ ಉಪವಿಭಾಗಾಧಿಕಾರಿ ಡಾ.ಎಚ್.ಪಿ.ಎಸ್. ಮೈತ್ರಿ ಅವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇನ್ನೂ ಕೋಲಾರ, ಬಂಗಾರಪೇಟೆ, ಶ್ರೀನಿವಾಸಪುರ, ಮುಳಬಾಗಿಲು ತಹಸೀಲ್ದಾರ್ ಗಳನ್ನು ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳಾಗಿ ನೇಮಿಸಲಾಗಿದೆ. ಜಿಲ್ಲಾಧಿಕಾರಿ ಎಂ.ಆರ್.ರವಿ ಸಿದ್ದತೆಗಳನ್ನು ಪರಿಶೀಲಿಸಿದ್ದಾರೆ.
ಇಂದು ಮೂಲೂರು ಕ್ಷೇತ್ರದ ಮರು ಮತಎಣಿಕೆ ಹಿನ್ನೆಲೆಯಲ್ಲಿ ನಿನ್ನೆ ಕೋಲಾರ ಜಿ್ಲ್ಲಾಧಿಕಾರಿ ಕಚೇರಿ ಬಳಿಯ ಸ್ಟ್ರಾಂಗ್ ರೂಂನಲ್ಲಿ ಅಭ್ಯರ್ಥಿಗಳು ಹಾಗೂ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಯಿತು. ಕಳೆದ ಎರಡುವರೆ ವರ್ಷದ ಹಿಂದೆ ಚುನಾವಣೆ ನಡೆದ ನಂತರದಲ್ಲಿ ಇವಿಎಂ ಯಂತ್ರಗಳನ್ನು ಸ್ಟ್ರಾಂಗ್ ರೂಂ ನಲ್ಲಿ ಸುರಕ್ಷಿತವಾಗಿರಿಸಲಾಗಿತ್ತು. ಇದೀಗ ಮರು ಮತ ಏಣಿಕೆ ಹಿನ್ನೆಲೆ ಸ್ಟ್ರಾಂಗ್ ರೂಂ ಓಪನ್ ಮಾಡಿ ಅಭ್ಯರ್ಥಿಗಳಿಗೆ ಇವಿಎಂ ಮತ ಯಂತ್ರಗಳನ್ನು ತೋರಿಸಲಾಯಿತು.
ಬಿಜೆಪಿ ಅಭ್ಯರ್ಥಿ ಹಾಗೂ ದೂರುದಾರ ಮಂಜುನಾಥಗೌಡ ಅವರು ಸುಮಾರು 252 ಇವಿಎಂ ಮತಯಂತ್ರಗಳ ಬಾಕ್ಸ್ ತೆರೆಯಲಾಗಿದೆ. ಮತ ಎಣಿಕೆ ಮುಗಿದ ಮೇಲೆ ಅದನ್ನು ಇವಿಎಂ ಬಾಕ್ಸ್ ನಲ್ಲಿ ಹಾಕಿ ಸೀಲ್ ಮಾಡಬೇಕು. ಆದರೆ ಅಲ್ಲಿ ಸೀಲ್ ಮಾಡಿಲ್ಲ ಇಲ್ಲಿ ಅದಿಕಾರಿಗಳ ನಿರ್ಲ್ಯಕ್ಷ ಇದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಮೊದಲು ವಿವಿ ಪ್ಯಾಟ್ ಹಾಗೂ ಇವಿಎಂ ಎಣಿಕೆ ಮಾಡಿ ಎರಡೂ ಹೊಂದಾಣಿಕೆಯಾದ ನಂತರದಲ್ಲಿ ಮತ ಎಣಿಕೆ ಕಾರ್ಯ ಮಾಡಬೇಕು ಎಂದು ಬಿಜೆಪಿಯ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್, ಸೇರಿದಂತೆ ಹಲವು ಮುಖಂಡರು ಜಿಲ್ಲಾಧಿಕಾರಿ ಎಂ.ಆರ್.ರವಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.












Click it and Unblock the Notifications