ಡಿ.ಕೆ.ಶಿವಕುಮಾರ್ ಬಾಯಲ್ಲಿ ಆರ್‌ಎಸ್‌ಎಸ್ ಗೀತೆ; ಖರ್ಗೆ ಖಡಕ್ ಪ್ರತಿಕ್ರಿಯೆ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಿವಾದಗಳ ಸರಮಾಲೆಯಲ್ಲಿ ಸಿಲುಕಿದ್ದಾರೆ. ಇತ್ತೀಚೆಗೆ ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಗೀತೆ ಹಾಡುವ ಮೂಲಕ ಸ್ವಪಕ್ಷದಿಂದಲೇ ವಿರೋಧಕ್ಕೆ ಗುರಿಯಾಗಿದ್ದರು. ಇದಕ್ಕೆ ಕ್ಷಮೆಯೂ ಕೇಳಿದರು. ಇದಾದ ಬಳಿಕ ಚಾಮುಂಡೇಶ್ವರಿ ಹಿಂದೂಗಳ ಆಸ್ತಿಯಲ್ಲ ಎನ್ನುವ ಮೂಲಕ ಮತ್ತೊಂದು ಇಕ್ಕಟ್ಟಿಗೆ ಸಿಲುಕಿದ್ದಾರೆ. ಸದ್ಯ ಇದೇ ವಿಚಾರವಾಗಿ ಬಿಜೆಪಿ ನಾಯಕರು ಕೆಂಡಕಾರುತ್ತಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಆರ್‌ಎಸ್‌ಎಸ್ ಗೀತೆ ಹಾಡಿದ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿರುವ ಬಗ್ಗೆ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ, ಈ ವಿಷಯದ ಬಗ್ಗೆ ಇನ್ನು ಮುಂದೆ ಯಾರೂ ಮಾತನಾಡಬಾರದು. ಡಿ.ಕೆ.ಶಿವಕುಮಾರ್ ಆ ರೀತಿ ಹೇಳಬಾರದಿತ್ತು, ಆದರೂ ಹೇಳಿದ್ದಾರೆ. ಹೇಳಿದ ಮೇಲೆ ಅವರೇ ಕ್ಷಮೆ ಕೋರಿದ್ದಾರೆ. ಕ್ಲೋಸ್ ಆಗಿರುವ ವಿಚಾರದ ಬಗ್ಗೆ ಮತ್ತೆ ಮಾತನಾಡಲು ಹೋಗಲ್ಲ ಎಂದು ಖರ್ಗೆ ಹೇಳಿದ್ದಾರೆ. ಇನ್ನು ಧರ್ಮಸ್ಥಳ ಪ್ರಕರಣ ವಿಚಾರದ ಬಗ್ಗೆಯೂ ಅದು ಕ್ಲೋಸ್ ಆಗಿರುವ ವಿಷಯ ಎಂದಿದ್ದಾರೆ.

ಆರ್‌ಎಸ್‌ಎಸ್ ವಿವಾದದ ಬಗ್ಗೆ ಸ್ವಪಕ್ಷದಿಂದಲೇ ವಿರೋಧ ಕೇಳಿಬಂದಿದ್ದರಿಂದ ಡಿಕೆ ಶಿವಕುಮಾರ್ ಕ್ಷಮೆ ಕೇಳಿದ್ದರು. ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿರುವ ವಿಷಯವನ್ನ ರಾಜಕೀಯ ಮಾಡುವುದು ಬೇಡ. ನಾನು ಆರ್‌ಎಸ್‌ಎಸ್ ಅನ್ನು ಹೊಗಳಲು ಆ ಮಾತು ಹೇಳಿಲ್ಲ, ನನಗೂ ವಿರೋಧ ಪಕ್ಷದ ಸಿದ್ಧಾಂತದ ಬಗ್ಗೆ ಅರಿವಿದೆ ಎಂಬುದನ್ನ ಪ್ರಸ್ತಾಪಿಸಿದೆ ಅಷ್ಟೇ. ನಾನು ಹುಟ್ಟು ಕಾಂಗ್ರೆಸ್ಸಿಗ, ನಾನು ಕಾಂಗ್ರೆಸ್ಸಿಗನಾಗೇ ಸಾಯುತ್ತೇನೆ. ನನ್ನ ಪಕ್ಷನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು. ಯಾರಿಗೇ ಆಗಲಿ ನನ್ನಿಂದ ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ಧ ಎಂದಿದ್ದರು.
ಬಂಡೆಗೇ ಈ ಗತಿಯೇ?
ಡಿಕೆ ಶಿವಕುಮಾರ್ ಕ್ಷಮೆ ಕೇಳಿದ್ದಕ್ಕೆ ವ್ಯಂಗ್ಯವಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಂಡೆಯಂತಹ ಡಿಕೆ ಶಿವಕುಮಾರ್ ಅವರಿಗೇ ಈ ಗತಿಯಾದರೆ, ಕಾಂಗ್ರೆಸ್ ಪಕ್ಷದಲ್ಲಿರುವ ಅದೆಷ್ಟೋ ನಿಷ್ಠ ಕಾರ್ಯಕರ್ತರ ಸ್ಥಿತಿ ಹೇಗಿರಬಹುದು? ಎಂಬುದು ಊಹೆಗೂ ನಿಲುಕದ ಪ್ರಶ್ನೆಯಾಗಿದೆ. ತುರ್ತು ಪರಿಸ್ಥಿತಿಯನ್ನು ಹೇರಿ ಪ್ರಜಾಪ್ರಭುತ್ವದ ಕತ್ತು ಹಿಸುಕಿದ್ದ ಕಾಂಗ್ರೆಸ್‌ನ ಆಂತರಿಕ ವಲಯದಲ್ಲಿ ಇವತ್ತಿಗೂ ತುರ್ತುಪರಿಸ್ಥಿತಿಕರಾಳ ನೃತ್ಯ ಮಾಡುತ್ತಲೇ ಇದೆ ಎಂಬುದಕ್ಕೆ ಡಿಕೆಶಿ ಅವರ ಕ್ಷಮಾಪಣೆ ಕೇಳಿದ ಪ್ರಕರಣ ಸ್ಪಷ್ಟ ನಿದರ್ಶನ ಎಂದಿದ್ದರು.
ಮಾತೃಪ್ರೇಮ-ದೇಶ ಭಕ್ತಿ ಸ್ವಾಭಿಮಾನಿ ಪ್ರಜೆಯ ಹೆಮ್ಮೆಯ ಕಿರೀಟ. ತಾಯ್ನೆಲದ ಬದ್ಧತೆ ತೋರುವುದೇ ಅಪರಾಧವೆಂದು ಪರಿಗಣಿಸಿ ಕ್ಷಮಾಪಣೆ ಕೇಳುವ ಪರಿಸ್ಥಿತಿಗಿಂತ ಘೋರ ದುರಂತ ಇನ್ನೊಂದಿಲ್ಲ. ಡಿಕೆ ಶಿವಕುಮಾರ್ ಅವರ ಕ್ಷಮೆ ರಾಹುಲ್ ಗಾಂಧಿ ಅವರನ್ನ ತಣ್ಣಗಾಗಿಸಲು, ಅಧಿಕಾರ ರಾಜಕಾರಣವನ್ನು ಭದ್ರಪಡಿಸಿಕೊಳ್ಳಲು ಅನಿವಾರ್ಯವಾಗುವುದಾದರೆ, ಅದು ಕರ್ನಾಟಕದ ಸ್ವಾಭಿಮಾನವನ್ನು ಒತ್ತೆಯಿಟ್ಟಂತೆ ಎಂದು ವಿಜಯೇಂದ್ರ ಹೇಳಿದ್ದರು.
ಈಗಲೂ ಕಾಲ ಮಿಂಚಿಲ್ಲ ಡಿಕೆ.ಶಿವಕುಮಾರ್ ಅವರು ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಗೀತೆಯ ಅರ್ಥವನ್ನು ರಾಹುಲ್ ಗಾಂಧಿ ಅವರಿಗೆ ತಿಳಿಸಿಕೊಟ್ಟು, ತಮ್ಮ ನಡೆಯನ್ನು ಸಮರ್ಥಿಸಿ ಕೊಳ್ಳಲಿ, ಮಾತೃ ಭೂಮಿಗಿಂತ ಕಾಂಗ್ರೆಸ್ ದೊಡ್ಡದಲ್ಲ ಎಂಬ ಸಂದೇಶ ದೇಶಕ್ಕೆ ರವಾನಿಸಲಿ. ಆ ಮೂಲಕ ಸ್ವಾಭಿಮಾನಿ ಕನ್ನಡ ನೆಲದ ಘನತೆಯನ್ನು ಎತ್ತಿ ಹಿಡಿಯಲಿ ಎಂದು ಸಲಹೆ ನೀಡಿದ್ದರು.












Click it and Unblock the Notifications