ಕೆಪಿಸಿಸಿ ಸದಸ್ಯ ಸ್ಥಾನಕ್ಕೆ ಮಾಲೀಕಯ್ಯ ಗುತ್ತೇದಾರ್ ರಾಜೀನಾಮೆ
ಕಲಬುರಗಿ, ಜೂನ್ 20 : ಸಚಿವ ಸ್ಥಾನ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಅಫ್ಜಲ್‌ಪುರ ಶಾಸಕ ಮಾಲೀಕಯ್ಯ ಗುತ್ತೇದಾರ್ ಕೆಪಿಸಿಸಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದಿನ ನಡೆ ಬಗ್ಗೆ ಚರ್ಚಿಸಲು ಜೂನ್ 22ರಂದು ಬೆಂಬಲಿಗರ ಸಭೆ ಕರೆದಿದ್ದಾರೆ.
ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಮಾಲೀಕಯ್ಯ ಗುತ್ತೇದಾರ್ ಅವರು, 'ಕೆಪಿಸಿಸಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದೇನೆ. ಜೂನ್ 23ರಂದು ಈ ಕುರಿತು ತೀರ್ಮಾನ ಕೈಗೊಳ್ಳುತ್ತೇನೆ ಎಂದರು ಹೇಳಿದರು. [ಸಿದ್ದರಾಮಯ್ಯ ಸಂಪುಟ ಸೇರಿದವರ ಪರಿಚಯ]

'ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ. ರಾಜಕೀಯ ನಿವೃತ್ತಿ ಪಡೆಯುವ ಚಿಂತನೆ ಇದೆ. ಜೂನ್ 22ರಂದು ಬೆಂಬಲಿಗರ ಸಭೆ ನಡೆಸಿ, ಮುಂದಿನ ನಿರ್ಧಾರವನ್ನು ಕೈಗೊಳ್ಳಲಿದ್ದೇನೆ' ಎಂದು ತಿಳಿಸಿದರು. [ಸಿದ್ದರಾಮಯ್ಯ ಸಚಿವ ಸಂಪುಟಕ್ಕೆ 13 ಹೊಸಮುಖಗಳ ಸೇರ್ಪಡೆ]
ಪ್ರಬಲ ಆಕಾಂಕ್ಷಿಯಾಗಿದ್ದರು : ಮಾಲೀಕಯ್ಯ ಗುತ್ತೇದಾರ್ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. 'ನನಗೆ ಸಚಿವ ಸ್ಥಾನ ಸಿಗಲಿಲ್ಲ ಎಂದು ಕ್ಷೇತ್ರದ ಜನರು ಅಸಮಾಧಾನಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ಶಾಸಕನಾದ ನನಗೆ ಸಚಿವನಾಗುವ ಅರ್ಹತೆ ಇದೆ. ಪಕ್ಷದ ಹೈಕಮಾಂಡ್ ಮೇಲೆ ನನಗೆ ನಂಬಿಕೆ ಇದೆ' ಎಂದು ಕೆಲವು ದಿಗಳ ಹಿಂದೆ ಹೇಳಿದ್ದರು.












Click it and Unblock the Notifications