ಎಚ್.ಡಿ.ದೇವೇಗೌಡರು ಮಾಡಿದ ದೊಡ್ಡ ತಪ್ಪು ಇದು!
ಬೆಂಗಳೂರು, ಜ.29 : ಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡರು ಮಾಡಿದ ದೊಡ್ಡ ತಪ್ಪು ಏನು ಗೊತ್ತೆ?. ಸ್ವತಃ ದೇವೇಗೌಡರೇ ಹೇಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದಲ್ಲಿದ್ದಾಗ ಅವರನ್ನು ಉಪಮುಖ್ಯಮಂತ್ರಿ ಮಾಡಿ ದೊಡ್ಡ ತಪ್ಪು ಮಾಡಿದ್ದಾರೆ. ಅಂದು ಉಪಮುಖ್ಯಮಂತ್ರಿಯಾಗಿದ್ದರಿಂದ ಇಂದು ಅವರು ಸಿಎಂ ಆಗಿದ್ದಾರೆ'.
ಬೆಂಗಳೂರಿನ ಪದ್ಮನಾಭನಗರದಲ್ಲಿನ ತಮ್ಮ ನಿವಾಸದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಗೌಡರು, 'ಸಿದ್ದರಾಮಯ್ಯ ಅವರನ್ನು ಅಂದು ಉಪಮುಖ್ಯಮಂತ್ರಿ ಮಾಡಿದ್ದಕ್ಕೆ ಇಂದು ಅವರು ಮುಖ್ಯಮಂತ್ರಿಯಾಗಿದ್ದಾರೆ. ಅವರನ್ನು ಉಪಮುಖ್ಯಮಂತ್ರಿ ಮಾಡಿ ನನ್ನ ಜೀವನದಲ್ಲಿ ತಪ್ಪು ಮಾಡಿದೆ. ಇಲ್ಲದಿದ್ದರೆ ಸೋನಿಯಾ ಗಾಂಧಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುತ್ತಿರಲಿಲ್ಲ' ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರು ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದು, 'ಅರ್ಕಾವತಿ ಹಗರಣದ ವಿಚಾರದಲ್ಲಿ ತಮ್ಮ ರಾಜೀನಾಮೆ ಕೇಳಲು ದೇವೇಗೌಡರು ಯಾರು? ಎಂದು ಪ್ರಶ್ನಿಸಿದ್ದಾರೆ. ದೇವೇಗೌಡರಂತೆ ನನಗೆ ಮೂಢನಂಬಿಕೆಯ ಇಲ್ಲ ಎಂದು ಕುಟುಕಿದ್ದಾರೆ. ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವಿನ ವಾಕ್ಸಮರದ ವಿವರ ಇಲ್ಲಿದೆ. [ಚಿತ್ರಗಳಲ್ಲಿ: ತಿಮ್ಮಪ್ಪನ ಹಳೆ ಹರಕೆ ತೀರಿಸಿಕೊಂಡ ಸಿದ್ದರಾಮಯ್ಯ]

ಜೀವನದಲ್ಲಿ ಒಂದು ದೊಡ್ಡ ತಪ್ಪು ಮಾಡಿದೆ
'ಸಿದ್ದರಾಮಯ್ಯ ಅವರನ್ನು ಅಂದು ಉಪಮುಖ್ಯಮಂತ್ರಿ ಮಾಡಿದ್ದಕ್ಕೆ ಇಂದು ಅವರು ಮುಖ್ಯಮಂತ್ರಿಯಾಗಿದ್ದಾರೆ. ಅವರನ್ನು ಉಪಮುಖ್ಯಮಂತ್ರಿ ಮಾಡಿ ನನ್ನ ಜೀವನದಲ್ಲಿ ತಪ್ಪು ಮಾಡಿದೆ' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದಾರೆ.

ಸೋನಿಯಾ ಗಾಂಧಿ ಕಣ್ಣೆತ್ತಿ ನೋಡುತ್ತಿರಲಿಲ್ಲ
'ಅಂದು ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಆಗಿರದಿದ್ದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಿದ್ದರಾಮಯ್ಯ ಅವರನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಇಂದು ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯ ಅವರನ್ನು ಯಾರು ಎಂದು ಕೇಳುತ್ತಿದ್ದರು? ಎಂದು ಗೌಡರು ತಿಳಿಸಿದರು.

ನನ್ನನ್ನು ಜೈಲಿಗೆ ಕಳಿಸಲು ಹುನ್ನಾರ
ಬೆಂಗಳೂರಿನ ಜೆಡಿಎಸ್ ಕಚೇರಿಯನ್ನು ಬಿಟ್ಟುಕೊಟ್ಟಿಲ್ಲ ಎಂದು ಕಾಂಗ್ರೆಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಇದು ನನ್ನನ್ನು ಜೈಲಿಗೆ ಕಳುಹಿಸುವ ಹುನ್ನಾರ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಆದರೆ, ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಗೌಡರು ಕಾಂಗ್ರೆಸ್ ವಿರುದ್ಧ ಗುಡುಗಿದರು.

ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಿಲ್ಲ
'ಸಿದ್ದರಾಮಯ್ಯ ಅವರನ್ನು ಉಪಮುಖ್ಯಮಂತ್ರಿ ಮಾಡಿ ತಪ್ಪು ಮಾಡಿದೆ. ಅದರಿಂದ ಅವರು ಇಂದು ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ನಾನೆಂದೂ ಅವರ ರಾಜೀನಾಮೆಯನ್ನು ಕೇಳಿಲ್ಲ ಎಂದು ಎಂದು ಗೌಡರು ಸ್ಪಷ್ಟಪಡಿಸಿದರು.

ದೇವೇಗೌಡರು ಯಾರು?
ಸಿಎಂ ಸಿದ್ದರಾಮಯ್ಯ ಅವರು ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅರ್ಕಾವತಿ ಡಿನೋಟಿಫಿಕೇಶನ್ ವಿಚಾರದಲ್ಲಿ ದೇವೇಗೌಡರು ನಿಮ್ಮ ರಾಜೀನಾಮೆ ಕೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಸಿಎಂ ನನ್ನ ರಾಜೀನಾಮೆ ಕೇಳಲು ದೇವೇಗೌಡರು ಯಾರು?, ದೇವೇಗೌಡರಿಗೂ ಕಾಂಗ್ರೆಸ್‌ಗೂ ಏನು ಸಂಬಂಧ? ಎಂದು ಪ್ರಶ್ನಿಸಿದ್ದಾರೆ.

ದೇವೇಗೌಡರಂತೆ ಮೂಢನಂಬಿಕೆ ಇಲ್ಲ
ಸಿದ್ದರಾಮಯ್ಯ ಅವರ ತಿರುಪತಿ ಪ್ರವಾಸದ ಬಗ್ಗೆ ದೇವೇಗೌಡರು ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, 'ತಾನು ನಾಸ್ತಿಕನಲ್ಲ. ಆದರೆ, ದೇವೇಗೌಡರ ಹಾಗೆ ಕಂದಾಚಾರ, ಮೂಢನಂಬಿಕೆಗಳಲ್ಲಿ ನಂಬಿಕೆ ಇಲ್ಲ' ಎಂದು ಹೇಳಿದರು.












Click it and Unblock the Notifications