MGNREGA: ನರೇಗಾ ಯೋಜನೆಯಲ್ಲಿ ಮಹಿಳೆಯರದ್ದೇ ಮೇಲು ಗೈ: ಖುಷಿ ಹಂಚಿಕೊಂಡ ಸಚಿವರು
ಬೆಂಗಳೂರು, ಫೆಬ್ರವರಿ 15: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಂಟಿಯಾಗಿ ನಿರ್ವಹಣೆ ಮಾಡುತ್ತಿರುವ ಮಹತ್ವದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಗೆ ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ತಮ್ಮ ಗ್ರಾಮದಲ್ಲಿಯೇ ಉದ್ಯೋಗ ಸಿಗುವುದರಿಂದ ಈ ಯೋಜನೆಯಲ್ಲಿ ಮಹಿಳೆಯರೇ ಹೆಚ್ಚು ಹೆಸರು ನೋಂದಣಿ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ.
ನರೇಗಾ ಯೋಜನೆಯಲ್ಲಿ ಮಹಿಳೆಯರೇ ಮೇಲುಗೈ ಸಾಧಿಸಿದ್ದು, ರಾಜ್ಯದಲ್ಲಿ 53.51% ರಷ್ಟು ಮಹಿಳೆಯರು ನರೇಗಾ ಉದ್ಯೋಗನಿರತರಾಗಿರುವ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ನರೇಗಾ ಯೋಜನೆ ಮೂಲಕ ಗ್ರಾಮೀಣ ಭಾಗದ ಮಹಿಳೆಯರು ಪುರುಷರಿಗೆ ಸರಿಸಮಾನವಾದ ದುಡಿಮೆ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ ಎಂದು ಖುಷಿ ಹಂಚಿಕೊಂಡಿದ್ದಾರೆ.
ಇತ್ತೀಚಿಗೆ ದೊಡ್ಡ ನಿರ್ಮಾಣ ಕಂಪೆನಿಯ ಚೇರ್ಮನ್ ಒಬ್ಬರು ನರೇಗಾದಂತಹ ಯೋಜನೆಯಿಂದ ಜನತೆ ತಾವಿದ್ದಲ್ಲಿಯೇ ಸಂತುಷ್ಟರಾಗಿ ಬದುಕುತ್ತಿದ್ದಾರೆ ಎಂದು ದೂರಿದ್ದರು. ಅವರ ಪ್ರಕಾರ ಅದು ಟೀಕೆ, ಆದರೆ ನಮಗೆ ಅದು ಹೊಗಳಿಕೆಯಾಗಿ ಕಾಣುತ್ತದೆ.

ನರೇಗಾ ಯೋಜನೆಯಿಂದ ವಲಸೆ ತಡೆಗಟ್ಟುವಿಕೆ, ಮಹಿಳಾ ಸಬಲೀಕರಣ, ಕುಟುಂಬ ಕಲ್ಯಾಣ, ಗ್ರಾಮೀಣ ಆರ್ಥಿಕತೆಯ ಸುಧಾರಣೆಗಳು ಸಾಧ್ಯವಾಗುತ್ತಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಲವು ಗುರಿ ಮತ್ತು ಉದ್ದೇಶಗಳನ್ನು ಯಶಸ್ವಿಯಾಗಿ ಸಾಧಿಸುತ್ತಿರುವುದು ಹೆಮ್ಮೆಯ ಸಂಗತಿ.
ನರೇಗಾ ಯೋಜನೆ ಮೂಲಕ ಗ್ರಾಮೀಣ ಭಾಗದ ಮಹಿಳೆಯರು ಪುರುಷರಿಗೆ ಸರಿಸಮಾನವಾದ ದುಡಿಮೆ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ಮಹಿಳಾ ಸಬಲೀಕರಣದ ಕನಸು ಈ ಮೂಲಕ ಸಾಕಾರಗೊಳ್ಳುತ್ತಿದೆ. ಅಭಿವೃದ್ಧಿಯುಕ್ತ ಗ್ರಾಮ ಭಾರತದ ನಿರ್ಮಾಣದೆಡೆಗಿನ ಹೆಜ್ಜೆಯೂ ದೃಢವಾಗುತ್ತಿದೆ.
ನರೇಗಾ ಯೋಜನೆ ಲಾಭವನ್ನು ಪಡೆಯುವುದರಲ್ಲಿ ಮಹಿಳೆಯರು ಮುಂದಿದ್ದು, ಒಟ್ಟು 24.95 ಲಕ್ಷಕ್ಕೂ ಅಧಿಕ ನರೇಗಾ ಉದ್ಯೋಗ ಕಾರ್ಡ್ ಹೊಂದಿದ್ದಾರೆ. ಶೇಕಡಾ 53.51 ರಷ್ಟು ಮಹಿಳೆಯರು ನರೇಗಾ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದು ಮೇಲುಗೈ ಸಾಧಿಸಿದ್ದಾರೆ. ಮಹಿಳೆಯರಿಗೆ ನರೇಗಾ ಯೋಜನೆಯು ಆರ್ಥಿಕ ಹಾಗೂ ಸ್ವಾವಲಂಬನೆಯ ಸಾಮಾಜಿಕ ಬಲ ನೀಡುತ್ತಿರುವುದಕ್ಕೆ ಇದು ಸಾಕ್ಷಿ.
ಹೆಣ್ಣುಮಕ್ಕಳಿಗೆ ದುಡಿಯುವ ಅವಕಾಶಗಳನ್ನು ಒದಗಿಸಿದರೆ ಅವರು ಎಲ್ಲ ಅಡೆತಡೆಗಳನ್ನು ಮೀರಿ ಸಾಧಿಸಬಲ್ಲರು. ಮಹಿಳಾ ಸಬಲೀಕರಣದ ಗುರಿಗೆ ನರೇಗಾ ಯೋಜನೆ ಭದ್ರ ಬುನಾದಿಯಾಗಿದೆ. ಔದ್ಯೋಗಿಕ ವಲಯದಲ್ಲಿ ಇನ್ನಷ್ಟು ಮಹಿಳೆಯರ ಪಾಲ್ಗೊಳ್ಳುವಿಕೆಗೆ ಇದು ಸ್ಫೂರ್ತಿಯಾಗಲಿ ಎಂದು ಆಶಿಸುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.












Click it and Unblock the Notifications