ಮಹದಾಯಿ ಯೋಜನೆ ಸ್ಥಗಿತಗೊಳಿಸಿ; ಗೋವಾ ಸರ್ಕಾರದ ಜೊತೆ ಕೈಜೊಡಿಸಿದ ಸಂಘಟನೆಗಳು
ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರನ್ನು ಭೇಟಿ ಮಾಡಿದ ನಿಯೋಗವುಮ, ಮಹದಾಯಿ ನದಿ ನೀರುವ ಹಂಚಿಕೆ ವಿವಾದದಲ್ಲಿ ತುರ್ತು ಮಧ್ಯಪ್ರವೇಶ ಮಾಡಬೇಕು ಎಂದು ಬೇಡಿಕೆಯಿಟ್ಟಿದೆ.
ಪಣಜಿ, ಫೆಬ್ರವರಿ. 10: ಕಳಸಾ - ಬಂಡೂರಿ ಡಿಪಿಆರ್‌ಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಗೋವಾ ಸರ್ಕಾರವಲ್ಲದೆ, ಹಲವಾರು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಕರ್ನಾಟಕಕ್ಕೆ ಮಹದಾಯಿ ನದಿ ನೀರು ಹರಿಸುವುದನ್ನು ತಡೆಯುವ ಪ್ರಯತ್ನದಲ್ಲಿ ಕೇಂದ್ರದ ಮೇಲೆ ಒತ್ತಡ ಹೇರುತ್ತಲೇ ಇವೆ.
ಈ ಪ್ರಯತ್ನಗಳಿಗೆ ಹೊಸದಾಗಿ, ಮಹದಾಯಿ ಉಳಿಸಿ, ಗೋವಾ ಉಳಿಸಿ ಫ್ರಂಟ್ ನಿಯೋಗವು ಗೋವಾದಲ್ಲಿ ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರನ್ನು ಭೇಟಿ ಮಾಡಿದೆ. ಮಹದಾಯಿ ನದಿ ನೀರುವ ಹಂಚಿಕೆ ವಿವಾದದಲ್ಲಿ ತುರ್ತು ಮಧ್ಯಪ್ರವೇಶ ಮಾಡಬೇಕು ಎಂದು ಬೇಡಿಕೆ ಇಟ್ಟಿದೆ.
ಮಹದಾಯಿ ಉಳಿಸಿ ಗೋವಾ ಫ್ರಂಟ್‌ನ ನಿಯೋಗವು ಗೋವಾ ಮತ್ತು ಕರ್ನಾಟಕದ ನಡುವೆ ಇರುವ ಮಹದಾಯಿ ನೀರು ಹಂಚಿಕೆ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಒದಗಿಸುವಲ್ಲಿ ಸಹಾಯ ಮಾಡುವಂತೆ ಗೋವಾ ರಾಜ್ಯಪಾಲರಿಗೆ ಮನವಿ ಮಾಡಿದೆ. ಗೋವಾ ರಾಜ್ಯದ ಪರವಾಗಿ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯುವಂತೆ ಒತ್ತಾಯಿಸಿದೆ.

ರಾಜ್ಯಪಾಲರಿಗೆ ಸರ್ವಾನುಮತದ ನಿರ್ಣಯದ ಪ್ರತಿ ಸಲ್ಲಿಕೆ
ಇಷ್ಟು ದಿನಗಳ ಕಾಲ ಬೂದಿಮುಚ್ಚಿದ ಕೆಂಡದಂತಿದ್ದ ಮಹದಾಯಿ ನದಿ ನೀರು ವಿವಾದ, ಕಳಸಾ - ಬಂಡೂರಿ ಯೋಜನೆಯ ಡಿಪಿಆರ್‌ಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದ ನಂತರ ಮತ್ತೆ ಮುನ್ನೆಲೆಗೆ ಬಂದಿದೆ.
"ಜನವರಿ 16 ರಂದು ನಮ್ಮ ಕೊನೆಯ ಸಾರ್ವಜನಿಕ ಸಭೆಯಲ್ಲಿ ನಾವು ಕೆಲವು ನಿರ್ಣಯಗಳನ್ನು ಅಂಗೀಕರಿಸಿದ್ದೇವೆ. ನಮ್ಮ ನಿರ್ಣಯಗಳ ಪ್ರತಿಯನ್ನು ರಾಜ್ಯಪಾಲರಿಗೆ ಸಲ್ಲಿಸಿ, ಅದನ್ನು ರಾಷ್ಟ್ರಪತಿಗಳಿಗೆ ತಿಳಿಸುವಂತೆ ಒತ್ತಾಯಿಸಿದ್ದೇವೆ. ಮಹಾದಾಯಿ ವಿಚಾರದಲ್ಲಿ ರಾಜ್ಯ ಸರ್ಕಾರ ಏನು ಮಾಡಬಹುದು ಅಥವಾ ಕೇಂದ್ರವು ಈ ವಿಷಯದಲ್ಲಿ ಮಧ್ಯಪ್ರವೇಶಿಸಬಹುದೇ ಎಂಬ ಬಗ್ಗೆಯೂ ವೇದಿಕೆಯ ಸದಸ್ಯರು ವಿವರವಾದ ಚರ್ಚೆ ನಡೆಸಿದ್ದೇವೆ" ಎಂದು ಮಹದಾಯಿ ಉಳಿಸಿ, ಗೋವಾ ಉಳಿಸಿ ಫ್ರಂಟ್ ನಿಯೋಗದ ಪ್ರಶಾಂತ್ ನಾಯಕ್ ಹೇಳಿದ್ದಾರೆ.

ಕಳಸಾ - ಬಂಡೂರಿ ಡಿಪಿಆರ್ ವಾಪಸ್ ಪಡೆಯಿರಿ
ರಾಜ್ಯಪಾಲರನ್ನು ಭೇಟಿಯಾದ ನಂತರ ಮಹದಾಯಿ ಉಳಿಸಿ, ಗೋವಾ ಉಳಿಸಿ ಫ್ರಂಟ್ ನಿಯೋಗವು ಮಹದಾಯಿ ನದಿಗೆ ಅನುಮೋದಿಸಲಾದ ಡಿಪಿಆರ್ ಅನ್ನು ತಕ್ಷಣವೇ ಹಿಂಪಡೆಯುವಂತೆ ಸಾವಿರಾರು ಮಂದಿ ಸಹಿ ಮಾಡಿದ್ದ ಜ್ಞಾಪನಾ ಪತ್ರ ಮತ್ತು ಸರ್ವಾನುಮತದ ನಿರ್ಣಯದ ಪ್ರತಿಯನ್ನು ಸಲ್ಲಿಸಿದೆ.
ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಈ ನಿಯೋಗವು ಈ ಹಿಂದೆ ಅಭಿಪ್ರಾಯ ಸಂಗ್ರಹದ ದಿನ ನಡೆಸಿ, ಸಾವಿರಾರು ಮಂದಿಯ ಸಹಿ ಸಂಗ್ರಹಿಸಿತ್ತು. ಅದನ್ನೇ ರಾಜ್ಯಪಾಲರಿಗೆ ಸಲ್ಲಿಸಿದೆ.

ಗೋವಾದಾದ್ಯಂತ ಮಹದಾಯಿ ಚಳವಳಿ; ಸಭೆಗಳು
ಮೂಲಗಳ ಪ್ರಕಾರ, ರಾಜ್ಯಪಾಲರು ಈ ವಿಷಯದ ಬಗ್ಗೆ ವೇದಿಕೆಯ ಅಭಿಪ್ರಾಯಗಳನ್ನು ಗಮನಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಚರ್ಚೆ ಮಾಡುವುದಾಗಿ ಭರವಸೆ ನೀಡಿ, ಗೋವಾ ಜನರ ಭಾವನೆಯನ್ನು ತಲುಪಿಸುವುದಾಗಿ ತಿಳಿಸಿದ್ದಾರೆ.
ಫ್ರಂಟ್‌ನ ಮತ್ತೊಬ್ಬ ಸದಸ್ಯ ಪ್ರಜಾಲ್ ಸಖರ್ದಂಡೆ ಮಾತನಾಡಿ, ಗೋವಾದಾದ್ಯಂತ ಎಲ್ಲಾ ಗ್ರಾಮಗಳಲ್ಲಿ ನಡೆಯುತ್ತಿರುವ ಮಹದಾಯಿ ಚಳವಳಿಯಲ್ಲಿ ಹೆಚ್ಚು ಹೆಚ್ಚು ಜನರನ್ನು ಒಳಗೊಳ್ಳಲು ಸಭೆಗಳನ್ನು ನಡೆಸಲಾಗುವುದು. ಮಹದಾಯಿ ಬಚಾವೋ ಅಭಿಯಾನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾದ ಪ್ರಕರಣ ಪ್ರಬಲವಾಗಿದ್ದು, ಇದೀಗ ಮಹದಾಯಿಯಿಂದ ಗೋವಾಕ್ಕೆ ನೀರು ಹರಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯದಲ್ಲಿ ಜನಾಂದೋಲನವನ್ನು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಇದು ನೀರಾವರಿ ಯೋಜನೆ ಎಂದು ಗೋವಾದ ಆರೋಪ
ಇನ್ನು, ಕೇಂದ್ರ ಸರ್ಕಾರ ಕರ್ನಾಟಕದ ಕಳಸಾ ಬಂಡೂರಿ ಯೋಜನೆಗೆ ಡಿಪಿಆರ್‌ಗೆ ನೀಡಿರುವ ಅನುಮೋದನೆಗಳಲ್ಲಿ ಹಲವಾರು ವಿಷಯಗಳಿವೆ ಎಂದು ವಕೀಲ ಹೃದಯನಾಥ್ ಶಿರೋಡ್ಕರ್ ತಿಳಿಸಿದ್ದಾರೆ . ಕರ್ನಾಟಕ ಸರ್ಕಾರವು ಈ ಯೋಜನೆಯನ್ನು ಕುಡಿಯುವ ನೀರಿನ ಯೋಜನೆ ಎಂದು ತಪ್ಪಾಗಿ ಹೇಳಿಕೊಂಡಿದೆ .ಆದರೆ ವಾಸ್ತವವಾಗಿ ಇದು ನೀರಾವರಿ ಯೋಜನೆಯಾಗಿದೆ ಎಂದು ಆರೋಪಿಸಿದ್ದಾರೆ
ಇತ್ತೀಚೆಗೆ ಗೋವಾ ಅಭಯಾರಣ್ಯದ ಮುಖ್ಯ ವನ್ಯಜೀವಿ ಅಧಿಕಾರಿ ಕರ್ನಾಟಕ ಸರ್ಕಾರಕ್ಕೆ ಕಳಸಾ-ಬಂಡೂರಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಸ್ಟಾಪ್ ವರ್ಕ್ ನೋಟಿಸ್ ನೀಡಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದರು.












Click it and Unblock the Notifications