ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಗಾಲಕ್ಕೆ ಸನ್ನದ್ಧರಾಗುತ್ತಿರುವ ಕೊಡಗಿನ ಜನತೆ!

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಜೂನ್ 13 : ಕೊಡಗಿನಲ್ಲಿ ಮಳೆಗಾಲ ಅಂದ್ರೆ ಒಂದು ಸಂಭ್ರಮ. ಹಚ್ಚಿಹೊಡೆಯುವ ಮಳೆ ತರುವ ಸಂಕಷ್ಟ ಒಂದೆಡೆಯಾದರೆ, ಮಳೆಗಾಲಕ್ಕೆ ಬೇಕಾದ ವಸ್ತುಗಳನ್ನು ತಿಂಗಳಿಗಾಗುವಷ್ಟು ಒಮ್ಮೆಲೇ ಸಂತೆಗಳಲ್ಲಿ ಕೊಳ್ಳುವ ಸಡಗರ ಮತ್ತೊಂದೆಡೆ.

ಮಳೆಗಾಲದಲ್ಲಿ ಸಂತೆಯಲ್ಲಿ ಗದ್ದೆಯಲ್ಲಿ ಕೆಲಸ ಮಾಡಲು ಗುದ್ದಲಿ, ತೋಟದಲ್ಲಿ ಕೆಲಸ ಮಾಡಲು ಕತ್ತಿ, ಇನ್ನಿತರ ಹತ್ಯಾರುಗಳು, ತಲೆಗೆ ಹಾಕಿಕೊಳ್ಳಲು ಪ್ಲಾಸ್ಟಿಕ್‌ಗಳು, ಕಾಲಿಗೆ ಗಂಬೂಟ್, ಛತ್ರಿಗಳು ಮಾರುಕಟ್ಟೆಯಲ್ಲಿ ಕೊಳ್ಳುಗರಿಗಾಗಿ ಬೀಡುಬಿಟ್ಟಿವೆ. ಮಳೆಗಾಲದಲ್ಲಿ ಹೊರಹೋಗಲು ಸಾಧ್ಯವಾಗದ ಕಾರಣ ಆಹಾರ ಪದಾರ್ಥಗಳನ್ನು ಶೇಖರಿಸಿಟ್ಟುಕೊಳ್ಳುವುದು ಹಿಂದಿನಿಂದಲೂ ನಡೆದು ಬಂದಿರುವ ವಾಡಿಕೆ.

ವಾರ ಪೂರ್ತಿ ಜಿಲ್ಲೆಯ ಹಲವೆಡೆ ಸಂತೆಗಳು ನಡೆಯುತ್ತಿದ್ದು, ಸಂತೆಯಲ್ಲಿ ಛತ್ರಿ, ಗಂಬೂಟು ಹೀಗೆ ಮಳೆಗಾಲಕ್ಕೆ ಬೇಕಾದ ವಸ್ತುಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಮಾರಾಟಗಾರರಿಗೆ ಭರ್ಜರಿ ವ್ಯಾಪಾರ. ಸಂತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಕೂಲಿ ಕಾರ್ಮಿಕರು, ರೈತರು, ಮಧ್ಯಮ ವರ್ಗದವರು ಸಂತೆಯಲ್ಲಿ ಕಡಿಮೆ ದರದಲ್ಲಿ ಮಾರಾಟವಾಗುವ ವಸ್ತುಗಳನ್ನು ಖರೀದಿಸುವುದು ಸಾಮಾನ್ಯವಾಗಿದೆ. [ಕೊಡಗಿಗೆ ಬಲಗಾಲಿಟ್ಟು ಪ್ರವೇಶಿಸಿದ ಮುಂಗಾರು ಮಳೆ]

Madikeri people getting ready for grand monsoon

ಕೂಲಿ ಕಾರ್ಮಿಕರಿಗೆ ಮಳೆಗಾಲದಲ್ಲಿ ತೋಟ ಕೆಲಸಕ್ಕೆ ಬೇಕಾದ ಪ್ಲಾಸ್ಟಿಕ್ ಹೊದಿಕೆಗೂ ಸಂತೆಯನ್ನೇ ಅವಲಂಬಿಸಬೇಕು. ಕೆಲವರು ಮನೆಯಲ್ಲಿರುವ ಹಳೆಯ ಛತ್ರಿಗಳನ್ನು ತಂದು ದುರಸ್ತಿ ಮಾಡಿಸಿಕೊಂಡು ಹೋಗುತ್ತಾರೆ. ಹೀಗಾಗಿ ಸಂತೆ ದಿನ ಅಲ್ಲಲ್ಲಿ ಕುಳಿತು ಛತ್ರಿ ರಿಪೇರಿ ಮಾಡುವವರಿಗೆ ಎಲ್ಲಿಲ್ಲದ ಬೇಡಿಕೆ ಕಂಡು ಬರುತ್ತದೆ.

ತೋಟದ ಕೆಲಸಕ್ಕೆ ತೆರಳುವವರಿಗೆ ವಾರದಲ್ಲಿ ಒಂದು ದಿನ ಮಾತ್ರ ರಜೆ. ಆ ಊರಿನ ಸುತ್ತಮುತ್ತ ಯಾವಾಗ ಸಂತೆ ನಡೆಯುತ್ತೋ ಆ ದಿನವೇ ರಜೆ ನೀಡಲಾಗುತ್ತದೆ. ಹೀಗಾಗಿ ತೋಟ ಕಾರ್ಮಿಕರು ಸೇರಿದಂತೆ ರೈತರು ಸಂತೆಗೆ ಆಗಮಿಸಿ ವಾರಕ್ಕೆ ಬೇಕಾದ ದಿನಸಿ ಪದಾರ್ಥಗಳನ್ನು ಖರೀದಿಸುತ್ತಾರೆ. [ಮಳೆಗಾಲದ ಕಲ್ಪವೃಕ್ಷ, ರೈತರಿಗೆ ವರದಾನ ಪಣಂಪುಳಿ]

Madikeri people getting ready for grand monsoon

ಇನ್ನು ಕುಗ್ರಾಮಗಳ ನಿವಾಸಿಗಳು ತಿಂಗಳಿಗೆ ಆಗುವಷ್ಟು ಪದಾರ್ಥಗಳನ್ನು ಶೇಖರಿಸಿಡುತ್ತಾರೆ. ಮಳೆಗಾಲದಲ್ಲಿ ಮಳೆ ಬಂದು ಕೆಲವೊಮ್ಮೆ ಸಂಪರ್ಕವೇ ಕಡಿದು ಹೋಗುವ ಸಂದರ್ಭಗಳಿರುತ್ತವೆ. ಆಗ ಯಾವುದೇ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಅಗತ್ಯ ವಸ್ತುಗಳಾದ ಅಕ್ಕಿ, ದಿನಸಿ, ಧಾನ್ಯಗಳು, ಬೆಲ್ಲ, ಕಾಫಿ, ಟೀ, ಪುಡಿ ಹೀಗೆ ಎಲ್ಲವನ್ನು ಶೇಖರಿಸಿಡುತ್ತಾರೆ.

ಮುಂಗಾರು ಮಳೆ ಶುರುವಾಗುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡಿತವಾಗುತ್ತಿರುವುದು ಹೆಚ್ಚಾಗಿರುವುದರಿಂದ ಸೀಮೆಎಣ್ಣೆ, ಮೇಣದ ಬತ್ತಿಯನ್ನು ಕೂಡ ಶೇಖರಿಸಿಟ್ಟುಕೊಳ್ಳುತ್ತಿದ್ದಾರೆ. ಹಿಂದಿನ ಕಾಲದಲ್ಲಿ ರಸ್ತೆ, ವಾಹನಗಳ ಸೌಲಭ್ಯವಿಲ್ಲದ ಕಾರಣ ಮಳೆಗಾಲಕ್ಕೆ ಬೇಕಾದ ವಸ್ತುಗಳನ್ನು ಬೇಸಿಗೆಯಲ್ಲಿಯೇ ಸಂಗ್ರಹಿಸಿಟ್ಟುಕೊಳ್ಳಲಾಗುತ್ತಿತ್ತು. ಆದರೆ ಈಗ ಹಾಗಿಲ್ಲ. ಆದರೂ ಪಟ್ಟಣಕ್ಕೆ ಸಮೀಪವಿರುವವರನ್ನು ಹೊರತು ಪಡಿಸಿದರೆ ಕುಗ್ರಾಮಗಳ ಜನರು ಎಲ್ಲವನ್ನು ಸಂಗ್ರಹಿಟ್ಟುಕೊಂಡು ಮಳೆಗಾಲವನ್ನು ಎದುರಿಸಲು ಸನ್ನದ್ಧರಾಗಿದ್ದಾರೆ. [ಹುಬ್ಬಳ್ಳಿಯಲ್ಲಿ ಜಿಟಿಜಿಟಿ ಮಳೆಗೆ ನಲಿದಾಡಿದ ಮಿರ್ಚಿ ಮಂಡಕ್ಕಿ]

English summary
Madikeri people are getting ready to face the monsoon. People are abuzz buying essential commodities, groceries, utensils, shoes, umbrellas in the market. Meteorological department has predicted that Karnataka will get more than normal rain in this monsoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X