Rose: ಬೇಸಿಗೆಯಲ್ಲಿ ಈ ರೀತಿ ಆರೈಕೆ ಮಾಡಿದರೆ ಗಿಡ ತುಂಬಾ ಅರಳಿ ನಿಲ್ಲುವುದು ಗುಲಾಬಿ ಹೂವು
Rose: ಗುಲಾಬಿ ಅತ್ಯಂತ ಪ್ರಿಯವಾದ ಹೂವುಗಳಲ್ಲಿ ಒಂದು. ಈ ಹೂವಿನ ಸೌಂದರ್ಯ, ಪರಿಮಳದ ಕಾರಣದಿಂದ ಇದನ್ನು ಇಷ್ಟಪಡದವರು ಬಹಳ ಕಡಿಮೆ. ಗುಲಾಬಿ ಹೂವನ್ನು ಪ್ರೀತಿ ಮತ್ತು ಉತ್ಸಾಹದ ಸಂಕೇತ ಎಂದು ಕೂಡಾ ಹೇಳಲಾಗುತ್ತದೆ. ಬಳ್ಳಿಗಳಿಂದ ಹಿಡಿದು ಚಿಕ್ಕ ಪೊದೆಗಳವರೆಗೆ ಲೆಕ್ಕವಿಲ್ಲದಷ್ಟು ಪ್ರಭೇದಗಳಲ್ಲಿ ಈ ಗುಲಾಬಿಗಳು ಕಾಣ ಸಿಗುತ್ತವೆ. ಸರಿಯಾದ ಕಾಳಜಿ ವಹಿಸಿ ಕಾಯ್ದುಕೊಂಡರೆ ಯಾವ ಹವಾಮಾನದಲ್ಲಿ ಬೇಕಾದರೂ ಈ ಗಿಡ ಚೆನ್ನಾಗಿ ಬೆಳೆಯಬಹುದು ಮಾತ್ರವಲ್ಲ ಗಿಡ ತುಂಬಾ ಹೂವು ಬಿಡಬಹುದು.
ಬೇಸಿಗೆಯಲ್ಲಿ ಗುಲಾಬಿ ಗಿಡಗಳ ಆರೈಕೆ ಹೇಗೆ ಎಂದು ತಿಳಿದುಕೊಂಡಿರುವುದು ಬಹಳ ಮುಖ್ಯ. ಮನುಷ್ಯರಂತೆ ಪ್ರತಿ ಹವಾಮಾನ ಗಿಡಗಳಿಗೂ ಮುಖ್ಯವಾಗಿರುತ್ತದೆ. ಹವಾಮಾನಕ್ಕೆ ತಕ್ಕಂತೆ ಅವುಗಳ ಆರೈಕೆಯ ವಿಧಾನಗಳೂ ಬದಲಾಗುತ್ತವೆ. ಅದರಂತೆಯೇ ಗುಲಾಬಿ ಗಿಡಗಳಿಗೂ ಸಹ ಬೇಸಿಗೆಯಲ್ಲಿ ತನ್ನದೇ ಆದ ಸವಾಲುಗಳನ್ನು ಎದುರಿಸುತ್ತವೆ. ಹಾಗಾಗಿ ಹವಾಮಾನಕ್ಕೆ ಅನುಗುಣವಾಗಿ ಅವುಗಳನ್ನು ಬಹಳ ಜತನದಿಂದ ನೋಡಿಕೊಳ್ಳುವುದು ಮುಖ್ಯ.

ಬೇಸಿಗೆಯಲ್ಲಿ ಗುಲಾಬಿ ಗಿಡಗಳ ಕಾಳಜಿ ಹೇಗೆ ?
ಬೇಸಿಗೆಯಲ್ಲಿ ಗುಲಾಬಿಗಳಿಗೆ ನೀರುಣಿಸುವುದು ಬಹಳ ಮುಖ್ಯ: ಬಿಸಿ ಮತ್ತು ಶುಷ್ಕ ವಾತಾವರಣದಲ್ಲಿ ಗುಲಾಬಿಗಳಿಗೆ ನೀರಿನ ಅವಶ್ಯಕತೆ ಹೆಚ್ಚಾಗುತ್ತದೆ. ಪ್ರತಿ ಎರಡು ವಾರಗಳಿಗೊಮ್ಮೆ ಗಿಡದ ಆಳವಾದ ಮಟ್ಟಕ್ಕೆ ನೀರು ಹೋಗುವಂತೆ ನೀರು ಬಿಡಬೇಕು. ಗುಲಾಬಿ ಗಿಡ ಇರುವ ಮಣ್ಣು 10 - 12 ಇಂಚು ಆಳಕ್ಕೆ ಸರಿಯಾಗಿ ತೋಯ್ದಿದಿರುವಂತೆ ನೀರು ಬಿಡಬೇಕು. ಈ ಗಿಡಕ್ಕೆ ಎಲೆ, ಹೂವುಗಳಿಗೆ ನೀರು ಹಾಕುವ ಬದಲು ನೇರವಾಗಿ ಮಣ್ಣಿಗೆ ನೀರು ಹಾಕಬೇಕು. ಎಲೆ ಮತ್ತು ಹೂವಿಗೆ ನೀರುಣಿಸಿದರೆ ಸಸ್ಯಕ್ಕೆ ಕೆಲವು ರೋಗ ತಗಲುವ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಗುಲಾಬಿ ಗಿಡದ ಸುತ್ತಲೂ ಹಸಿಗೊಬ್ಬರ ಹಾಕುವುದರಿಂದ ಮಣ್ಣಿನಲ್ಲಿ ತೇವಾಂಶ ಇರುತ್ತದೆ. ಜೊತೆಗೆ ಕಳೆಗಳನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ.
ಗುಲಾಬಿ ಗಿಡಕ್ಕೆ ಗೊಬ್ಬರದ ಅವಶ್ಯಕತೆ: ಗುಲಾಬಿ ಗಿಡದಲ್ಲಿ ಎಲ್ಲಾ ಕಾಲದಲ್ಲಿಯೂ ಹೂವು ಅರಳಿ ನಳನಳಿಸಬೇಕು ಎಂದಾದರೆ ವರ್ಷಕ್ಕೆ ಮೂರು ಬಾರಿ ಗೊಬ್ಬರವನ್ನು ಹಾಕಬೇಕು. ವಸಂತಕಾಲದ ಆರಂಭದಲ್ಲಿ, ಸಮರುವಿಕೆ (Pruning) ಪ್ರಕ್ರಿಯೆಯ ನಂತರ ಮೊದಲ ಡೋಸ್ ರಸಗೊಬ್ಬರವನ್ನು ನೀಡಬೇಕು. ಗುಲಾಬಿ ಗಿಡವು ಮೊದಲ ಬಾರಿಗೆ ಹೂವು ಬಿಡಲು ಪ್ರಾರಂಭಿಸಿದಾಗ, ಎರಡನೇ ಹಂತದ ಗೊಬ್ಬರವನ್ನು ನೀಡಬೇಕು. ಗಿಡಕ್ಕೆ ರಸಗೊಬ್ಬರ ಹಾಕುವುದಕ್ಕೆ ಜುಲೈ ಮಧ್ಯದಿಂದ ಕೊನೆಯವರೆಗಿನ ಅವಧಿ ಹೆಚ್ಚು ಸೂಕ್ತ. ಗೊಬ್ಬರ ಹಾಕಿದ ನಂತರ ಗುಲಾಬಿ ಗಿಡಕ್ಕೆ ಚೆನ್ನಾಗಿ ನೀರು ಹಾಕಬೇಕು.
ಗಿಡದ ತುದಿಯನ್ನು ಟ್ರಿಮ್ ಮಾಡುವುದು: ಸಸ್ಯದ ಶಕ್ತಿಯನ್ನು ಸಂರಕ್ಷಿಸಲು ಬಾಡಿದ ಹೂವುಗಳನ್ನು ತೆಗೆದು ಹಾಕುತ್ತಿರಬೇಕು. ಇತ್ತೀಚೆಗೆ ನೆಟ್ಟ ಗುಲಾಬಿಯಾಗಿದ್ದರೆ, ಪ್ರತಿ ಕೊಂಬೆಯ ಮೇಲಿನ 3 ಎಲೆಗಳನ್ನು ತೆಗೆದುಹಾಕಿ. ಎಳೆಯ ಸಸ್ಯಗಳಿಂದ ಹೆಚ್ಚಿನ ಪ್ರಮಾಣದ ಎಲೆಗಳನ್ನು ತೆಗೆಯಬೇಡಿ. ಇದು ಹೂವುಗಳನ್ನು ಉತ್ಪಾದಿಸುವ ಅವುಗಳ ದಕ್ಷತೆಯನ್ನು ಕಡಿಮೆ ಮಾಡಬಹುದು. ಒಣಗಿದ ಹೂವುಗಳನ್ನು ಕತ್ತರಿಸಲು ಚಾಕು ಅಥವಾ ಕೈ ಕತ್ತರಿಗಳಂತಹ ಹರಿತವಾದ ಸಾಧನಗಳನ್ನು ಬಳಸಬೇಕು.
ಕೀಟಗಳು ಮತ್ತು ರೋಗಗಳ ನಿಯಂತ್ರಣ: ಬೇಸಿಗೆಯ ತಿಂಗಳುಗಳಲ್ಲಿ ನಿರಂತರವಾಗಿ ನೀರು ಸಿಂಪಡಿಸಲೇಬೇಕು. ಈ ರೀತಿ ಮಾಡುವ ಮೂಲಕ ಗುಲಾಬಿ ಗಿಡಗಳನ್ನು ಕೀಟಗಳು ಮತ್ತು ರೋಗಗಳಿಂದ ಸುರಕ್ಷಿತವಾಗಿರಿಸಿಕೊಳ್ಳಬಹುದು. ರೋಗದ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲು ಶಿಲೀಂಧ್ರನಾಶಕಗಳನ್ನು ಹಾಕಬೇಕು.
ಸೋಂಕನ್ನು ತಡೆಗಟ್ಟಲು ದಳಗಳು ಮತ್ತು ಎಲೆಗಳ ಎರಡೂ ಬದಿಗಳಿಗೂ ಔಷಧಿ ಸಿಂಪಡಿಸಿ.
ಸರಿಯಾದ ಕಾಳಜಿ ವಹಿಸಿದರೆ ನಿಮ್ಮ ಮನೆ ಮುಂದಿನ ಗಿಡದಲ್ಲಿ ವರ್ಷ ಪೂರ್ತಿ ಗುಲಾಬಿ ಹೂವು ಅರಳಿ ನಿಲ್ಲುವಂತೆ ಮಾಡಬಹುದು. ಗುಲಾಬಿ ಹೂವು ಮನಸ್ಸಿಗೆ ಮುದ ನೀಡುವ ಜೊತೆಗೆ ಸಕಾರಾತ್ಮಕತೆಯನ್ನು ಕೂಡಾ ಹೆಚ್ಚಿಸುತ್ತದೆ.
(ಬರಹ : ರಂಜಿತಾ ಆರ್. ಕೆ)












Click it and Unblock the Notifications