ಮಡಿಕೇರಿ : ಸ್ವರ್ಗಲೋಕ ಧರೆಗೆ ತಂದ ದಶಮಂಟಪಗಳು
ಮಡಿಕೇರಿ, ಅಕ್ಟೋಬರ್, 24 : ಐತಿಹಾಸಿಕ ಮಡಿಕೇರಿ ದಸರಾ ಉತ್ಸವದ ಈ ಬಾರಿಯ ದಶಮಂಟಪಗಳ ವೈಭವದ ಶೋಭಾಯಾತ್ರೆಯಲ್ಲಿ ಗೌಳಿ ಬೀದಿಯ ಕಂಚಿ ಕಾಮಾಕ್ಷಿ ದೇವಾಲಯ, ಕೋಟೆ ಮಹಾಗಣಪತಿ ದೇವಾಲಯ, ಕೋಟೆ ಮಾರಿಯಮ್ಮ, ಚೌಡೇಶ್ವರಿ ದೇವಾಲಯ ಮಂಟಪಗಳು ಸೇರಿದಂತೆ ಹಲವಾರು ಮಂಟಪಗಳು ಪಾಲ್ಗೊಂಡಿದ್ದು, ಜನರು ದಸರಾ ನೋಟವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.
ದಸರಾದಲ್ಲಿ ಮೇಳೈಸಿದ ಗೌಳಿಬೀದಿಯ ಕಂಚಿ ಕಾಮಾಕ್ಷಿ ದೇವಾಲಯ ಹಾಗೂ ಕೋಟೆ ಮಹಾಗಣಪತಿ ದೇವಾಲಯದ ಮಂಟಪಗಳು ಪ್ರಥಮ ಬಹುಮಾನ ಮತ್ತು ಕೋಟೆ ಮಾರಿಯಮ್ಮ ಹಾಗೂ ಚೌಡೇಶ್ವರಿ ದೇವಾಲಯದ ಮಂಟಪಗಳು ದ್ವಿತೀಯ ಬಹುಮಾನವನ್ನು ತನ್ನದಾಗಿಸಿಕೊಂಡರೆ, ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಮಂಟಪ ತೃತೀಯ ಬಹುಮಾನಕ್ಕೆ ಭಾಜನವಾಯಿತು.[ಪ್ರವಾಸಿಗರಿಗೆ ಮೈಸೂರೆಂದರೆ ಅದೇಕೆ ಅಷ್ಟು ಇಷ್ಟವಾಗುತ್ತೆ?]
ಕಳೆದ ಬಾರಿ ಬಹುಮಾನ ಸಿಗದೆ ದಸರಾ ಹಾಗೂ ದಶಮಂಟಪ ಸಮಿತಿಗಳ ಹಾಗೂ ತೀರ್ಪುಗಾರರ ವಿರುದ್ಧ ಸಿಡಿದೆದ್ದಿದ್ದ ಕಂಚಿ ಕಾಮಾಕ್ಷಿ ದೇವಾಲಯ ಈ ಬಾರಿ ಪ್ರಥಮ ಬಹುಮಾನಕ್ಕೆ ಪಾತ್ರವಾದರೂ, ಈ ಮಂಟಪಕ್ಕೆ ಭಾರೀ ಪೈಪೋಟಿ ನೀಡಿದ ಕೋಟೆ ಗಣಪತಿ ದೇವಾಲಯದ ಮಂಟಪ ಕೂಡಾ ಪ್ರಥಮ ಬಹುಮಾನ ಪಡೆದಿರುವುದು ಆಶ್ಚರ್ಯ ಹಾಗೂ ವಿಶೇಷವಾಗಿತ್ತು.
ಕೋಟೆ ಶ್ರೀ ಮಹಾಗಣಪತಿ:
ನಗರದ ಕೋಟೆ ಶ್ರೀ ಮಹಾಗಣಪತಿ ದೇವಾಲಯದ ದಸರಾ ಮಂಟಪ ಸಮಿತಿಯು 40ನೇ ವರ್ಷದ ಅಂಗವಾಗಿ ಹೊರಡಿಸಿದ್ದ ಮಂಟಪವು ಗಣೇಶ ಪುರಾಣದಿಂದ ಆಯ್ದ ಗಜಾನನ ಹಾಗೂ ಸಿದ್ಧಿಬುದ್ಧಿ ದೇವತೆಗಳಿಂದ ನರಾಂತಕ ಹಾಗೂ ದೇವಾಂತಕರ ಸಂಹಾರ ಕಥಾಸಾರಾಂಶವನ್ನು ಒಳಗೊಂಡಿತ್ತು. 2 ಟ್ರ್ಯಾಕ್ಟರ್‍ನಲ್ಲಿ ಆತ್ಯಾಕರ್ಷಕವಾದ 18 ಕಲಾಕೃತಿಗಳನ್ನು ಅಳವಡಿಸಲಾಗಿತ್ತು. ಅದ್ಭುತ ಲೈಟಿಂಗ್ ಮತ್ತು ಸ್ಟುಡಿಯೋ ಸೆಟ್ಟಿಂಗ್ ಮಂಟಪದ ಅಂದವನ್ನು ಹೆಚ್ಚಿಸಿತ್ತು.[ಜಾತಿ ಧರ್ಮದ ಹಂಗುಗಳಿಲ್ಲದ ಮಡಿಕೇರಿಯ ದಸರಾ]

ಕಂಚಿ ಕಾಮಾಕ್ಷಿ ದೇವಾಲಯ: ಕೊಲ್ಲೂರು ಮೂಕಾಂಬಿಕಾ ಮಹಿಮೆ ಕಥಾಸಾರಾಂಶ
ನಗರದ ನಾಲ್ಕು ಕರಗ ದೇವತೆಗಳಲ್ಲಿ ಒಂದಾದ ಶ್ರೀ ಕಂಚಿಕಾಮಾಕ್ಷಿ ದೇವಾಲಯ ದಸರಾ ಸಮಿತಿಯು 52ನೇ ವರ್ಷದ ಅಂಗವಾಗಿ ಹೊರಡಿಸಿದ್ದ ಮಂಟಪ ಶ್ರೀ ಕೊಲ್ಲೂರು ಮೂಕಾಂಬಿಕಾ ಮಹಿಮೆ ಎಂಬ ಕಥಾಸಾರಾಂಶವನ್ನು ಹೊಂದಿತ್ತು. ಕೇರಳ ಏಷ್ಯಾನೆಟ್ ವಾಹಿನಿಯ ಧ್ವನಿವರ್ಧಕ, ಡಿಂಡಿಗಲ್‍ನ ಡೇವಿಡ್ ಲೈಟಿಂಗ್ ಬೋರ್ಡ್ , ಸನ್ನಿ ಸ್ಟುಡಿಯೋದವರ ಸ್ಟುಡಿಯೋ ಸೆಟ್ಟಿಂಗ್ಸ್ ಮಂಟಪಕ್ಕೆ ಮೆರಗು ನೀಡಿತ್ತು.

ದಂಡಿನ ಮಾರಿಯಮ್ಮ: ತುಳಸಿ ಮಹಾತ್ಮೆ ಕಥಾ
ಕಳೆದ ಬಾರಿ ಪ್ರಥಮ ಬಹುಮಾನಕ್ಕೆ ಪಾತ್ರವಾಗಿದ್ದ ಕೋಟೆ ಮಾರಿಯಮ್ಮ ದೇವಾಲಯದ ಮಂಟಪ ಈ ಬಾರಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ದೇವಾಲಯದ ದಸರಾ ಮಂಟಪದ ವತಿಯಿಂದ ಈ ಬಾರಿ 40ನೇ ವರ್ಷದ ಮಂಟಪವನ್ನು ಹೊರಡಿಸಿದ್ದು, ಶಿವ ಮಹಾ ಪುರಾಣದಿಂದ ಆಯ್ದ ತುಳಸಿ ಮಹಾತ್ಮೆ ಕಥಾ ಸಾರಾಂಶವನ್ನು ಒಳಗೊಂಡಿತ್ತು. 19 ತರಾವರಿ ಚಲನಶೀಲ ಕಲಾಕೃತಿ ಆಕರ್ಷಕ ಧ್ವನಿವರ್ಧಕ, ಸ್ಟುಡಿಯೋ ಸೆಟ್ಟಿಂಗ್ ಸೇರಿದಂತೆ ನವೀನತೆಯನ್ನು ಒಳಗೊಂಡಿದ್ದ ಮಂಟಪ ಗಮನ ಸೆಳೆಯಿತು.

ಚೌಡೇಶ್ವರಿ ದೇವಾಲಯ ಮಂಟಪ: ಶಿವನಿಂದ ಅಂಧಕಾಸುರನ ವಧೆ ಕಥಾ ಸಾರಾಂಶ
ಕಳೆದ ಬಾರಿ ದ್ವಿತೀಯ ಬಹುಮಾನಕ್ಕೆ ಪಾತ್ರವಾಗಿದ್ದ ಚೌಡೇಶ್ವರಿ ದೇವಾಲಯದ ಮಂಟಪ ಈ ಬಾರಿಯೂ ದ್ವಿತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿದೆ, ಈ ಬಾರಿ ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯು 53ನೇ ವರ್ಷದ ಉತ್ಸವದ ಅಂಗವಾಗಿ ಶಿವ ಪುರಾಣದಿಂದ ಆಯ್ದ ಶಿವನಿಂದ ಅಂಧಕಾಸುರನ ವಧೆ ಕಥಾ ಸಾರಾಂಶವನ್ನು ಒಳಗೊಂಡ ಮಂಟಪವನ್ನು ಹೊರಡಿಸಿತ್ತು. ಮಡಿಕೇರಿ ಪೂಜಾ ಎಲೆಕ್ಟ್ರಿಕಲ್ಸ್ ನ ಅತ್ಯಾಧುನಿಕ ಲೈಟಿಂಗ್ ಬೋರ್ಡ್, ಬೆಂಗಳೂರಿನ ಮಧುರ ಸೌಂಡ್ಸ್ ನ ಸ್ಟುಡಿಯೊ ಸೆಟ್ಟಿಂಗ್, ಬೆಂಗಳೂರಿನ ಡೇವಿಸ್ ಪ್ರೋ ಸೌಂಡ್ಸ್ ನ ಧ್ವನಿ ವರ್ಧಕ ಹಾಗೂ ಉದ್ಬೂರಿನ ಮಹದೇವಪ್ಪ ಮತ್ತು ಕಲಾವಿದರಿಂದ ರಚಿತವಾದ 18 ಕಲಾಕೃತಿಗಳು ಮಂಟಪದ ಮೆರುಗನ್ನು ಹೆಚ್ಚಿಸಿದ್ದವು.

ಚೌಟಿ ಮಾರಿಯಮ್ಮ: ಮಣಿಕಂಠನಿಂದ ಮಹಿಷಿಯ ಸಂಹಾರ ಕಥಾ
ನಗರದ ನಾಲ್ಕು ಶಕ್ತಿ ದೇವಾಲಯಗಳಲ್ಲಿ ಹಿರಿಯಕ್ಕಳೆನಿಸಿಕೊಂಡಿರುವ ಕುಂದುರುಮೊಟ್ಟೆಯ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ವತಿಯಿಂದ 42ನೇ ವರ್ಷದ ದಸರಾ ಉತ್ಸವದ ಅಂಗವಾಗಿ ಹೊರಡಿಸಲಾಗಿದ್ದ ಮಣಿಕಂಠನಿಂದ ಮಹಿಷಿಯ ಸಂಹಾರ ಕಥಾ ಸಾರಾಂಶವನ್ನು ಹೊಂದಿದ್ದ ಮಂಟಪ ಅದ್ಭುತವಾಗಿತ್ತು. ಅತ್ಯಾಕರ್ಷಕ ಕಲಾಕೃತಿ , ಹಾಗೂ ಬೆಳಕಿನ ವ್ಯವಸ್ಥೆ ನೋಡುಗರನ್ನು ಮಂತ್ರಮುಗ್ಧಗೊಳಿಸಿತು.

ಕೋದಂಡರಾಮ ದೇವಾಲಯ
ಮಡಿಕೇರಿ ದಸರಾದಲ್ಲಿ ಮೂಡಿಬಂದ ಕೋದಂಡರಾಮನ ದೇವಾಲಯ ಜನರ ಇನ್ನೊಂದು ಆಕರ್ಷಣಾ ಕೇಂದ್ರವಾಗಿತ್ತು. ಬೆಳಕಿನ ವಿನ್ಯಾಸದಲ್ಲಿ ಇದರ ಸೊಬಗನ್ನು, ಪುರಾಣದ ಕಥೆಯನ್ನು ಮೆಲುಕು ಹಾಕಿಕೊಂಡರು.

ರಾಮನಿಗಾಗಿ ಸಂಜೀವಿ ಬೆಟ್ಟ ಹೊತ್ತೊಯ್ದ ಆಂಜನೇಯ
ರಾಮನ ಪ್ರಾಣ ಉಳಿಸಲು ರಾಮನ ಪರಮ ಭಕ್ತನಾದ ಆಂಜನೇಯ ಸಂಜೀವಿನಿ ಬೆಟ್ಟ ಎತ್ತಿಹಿಡಿದ ಆಂಜನೇಯನೂ ಈ ಮಡಿಕೇರಿ ದಸರಾದ ಪ್ರಮುಖ ಕಲಾಕೃತಿ. ಇದು ಕರವಲೆ ಭಗವತಿ ದೇವಾಲಯ ಮಂಟಪದಲ್ಲಿಯೇ ಕಂಡು ಬಂದಿತು.

ಜನಸಾಗರದಲ್ಲಿ ಮಿಂದೆದ್ದ ಮಡಿಕೇರಿ ದಸರಾ
ಮಡಿಕೇರಿಯಲ್ಲಿ ನಡೆದ ಮಹಾದೇವತೆಗಳ ದಸರಾ ವೈಭವ ನೋಡಲು ಜನಸಾಗರವೇ ಹರಿದು ಬಂದಿದ್ದು, ದಸರಾ ಕಳೆಯನ್ನು ಇನ್ನಷ್ಟು ಹೆಚ್ಚಿಸಿತ್ತು.

ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ಕಂಡು ಬಂದ ಮಹಿಷಾಸುರ
ಪ್ರಥಮ ಬಹುಮಾನ ಪಡೆದ ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ಕಲಾವಿದರ ಕೈಚಳಕ ಹಾಗೂ ಬೆಳಕಿನ ವಿನ್ಉಆಸದಲ್ಲಿ ಮೂಡಿಬಂದ ಮಹಿಷಾಸುರನ ಕಲಾಕೃತಿ

ಭಕ್ತಿ ಪ್ರದರ್ಶನದ ಆಂಜನೇಯ
ಇದು ದೇಚೂರು ರಾಮ ಮಂದಿರ. ಇದರಲ್ಲಿ ರಾಮನ ಪರಮ ಭಕ್ತನಾದ ಆಂಜನೇಯ ರಾಮನ ಮೇಲಿನ ಭಕ್ತಿ ಪ್ರದರ್ಶಿಸಲು, ಎದೆಯಲು ಸೀಳಲು ತಯಾರಾಗಿ ನಿಂತಿರುವುದು











Click it and Unblock the Notifications