ಸ್ತ್ರೀ ಸಾಮರ್ಥ್ಯ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಳಗಾವಿ, ಡಿಸೆಂಬರ್ 22: ಕರ್ನಾಟಕದಲ್ಲಿ ಮುಂದಿನ ವರ್ಷದಿಂದ 5 ಕಡೆಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ಶಾಶ್ವತ ವಸ್ತು ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಳಗಾವಿಯಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಗ್ರಾಮೀಣ ಸ್ವಸಹಾಯ ಸಂಘಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ ಕುಶಲತೆ ಭಾರತೀಯ ನಾರಿಯರಿಗೆ ದೊರೆತ ಒಂದು ವರ. ಸ್ತ್ರೀ ಸಾಮರ್ಥ್ಯ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬೇಕು. ಅದಕ್ಕಾಗಿಯೇ ರಾಜ್ಯ ಸರ್ಕಾರ ರಾಜ್ಯದ ಐದು ಕಡೆ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ಶಾಶ್ವತ ವಸ್ತು ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಕಲ್ಪಿಸಲಾಗುವುದು. ಜೊತೆಗೆ ಆನ್‌ಲೈನ್ ಮಾರುಕಟ್ಟೆ ಕಲ್ಪಿಸುವ ಕೆಲಸ ಮಾಡುತ್ತೇವೆ ಎಂದರು.

33,000 ಮಹಿಳಾ ಸಂಘಕ್ಕೆ ಲಾಭ
ರಾಜ್ಯದಲ್ಲಿ ಸ್ತ್ರೀ ಸಾಮರ್ಥ್ಯ ಅನ್ನುವ ಯೋಜನೆ ಜಾರಿ ಮಾಡಿದ್ದೇವೆ. ಸ್ತ್ರೀ ಸಾಮರ್ಥ್ಯ ಯೋಜನೆ ಅನುಷ್ಠಾನಕ್ಕಾಗಿ ಬಜೆಟ್ ನಲ್ಲಿ ರೂ.1000 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಈ ಯೋಜನೆಯಿಂದ ರಾಜ್ಯದ 33 ಸಾವಿರ ಮಹಿಳಾ ಸಂಘದ 5 ಲಕ್ಷ ಮಹಿಳೆಯರಿಗೆ ಲಾಭವಾಗಿದೆ. ಸ್ತ್ರೀ ಸಾಮರ್ಥ್ಯ ಯೋಜನೆಯಿಂದ ದೇಶದಲ್ಲಿ ದೊಡ್ಡ ಕ್ರಾಂತಿ ಉಂಟಾಗಲಿದೆ. ಮಹಿಳಾ ಸ್ವ ಸಂಘ ಉತ್ಪನ್ನಗಳ ಮಾರಾಟಕ್ಕೆ ರಾಜ್ಯದ 5 ಸ್ಥಳಗಳಲ್ಲಿ ಶಾಶ್ವತ ಪ್ರದರ್ಶನ ಮಾರಾಟ ಮಳಿಗೆ ನಿರ್ಮಾಣ ಮಾಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಮಹಿಳೆಯರ ಕೆಲಸದ ಮೌಲ್ಯಮಾಪನ ಆಗಬೇಕು
ಸ್ತ್ರೀ ಸಾಮರ್ಥ್ಯ ಯೋಜನೆ ಮೂಲಕ ತಾಯಂದಿರು ದೇಶದ ಅಭಿವೃದ್ಧಿ ಮಾಡುತ್ತಿದ್ದಾರೆ. ಸ್ತ್ರೀ ಸಾಮರ್ಥ್ಯದ ಮೌಲ್ಯಮಾಪನವಾಗಬೇಕು. ಮಹಿಳೆಯರು ನಿರ್ವಹಿಸುವ ಮನೆ ಕೆಲಸ ಹಾಗೂ ಸೇವೆ ಸಾಮಾನ್ಯವಾದುದಲ್ಲ. ಮಹಿಳೆಯರ ಶ್ರಮಕ್ಕೆ ಯಾರು ಬೆಲೆ ನೀಡುವುದಿಲ್ಲ. ಮನೆ ಕೆಲಸ ಮಾಡುವ ಮಹಿಳೆಯರಿಗೂ ಗೌರವ ಸಿಗಬೇಕು. ಅವರ ಕೆಲಸದ ಮೌಲ್ಯ ಮಾಪನವಾಗಬೇಕು. ಅವರ ಕೆಲಸಕ್ಕೆ ಆದಾಯ ಬರಬೇಕು. ಗ್ರಾಮೀಣ ಭಾಗದಲ್ಲಿ ಮಹಿಳೆಯರು ಪುರುಷರ ರೀತಿಯಲ್ಲಿ ಹೆಚ್ಚು ಕೆಲಸ ಮಾಡುತ್ತಾರೆ. ಆದರೆ ಅವರಿಗೆ ಕಡಿಮೆ ಕೂಲಿ ನೀಡುತ್ತಾರೆ. ದೀನ ದಲಿತ ಮಹಿಳೆಯರು ಆಹಾರ ಕೊರತೆ ಎದುರಿಸುತ್ತಾರೆ. ಸ್ವಂತ ಭೂಮಿ ಇಲ್ಲದ ಅವರು ಬೇರೆಯವರ ಮನೆ ಹಾಗೂ ಜಮೀನಿನಲ್ಲಿ ದುಡಿಯುತ್ತಾರೆ ಎಂದು ವಿವರಿಸಿದರು.

ಬಜೆಟ್‌ನಲ್ಲಿ ಮಹಿಳೆಯರಿಗೆ ವಿಶೇಷ ಯೋಜನೆ
ಮಹಿಳೆಯರ ಅಭಿವೃದ್ಧಿಗಾಗಿ ಮುಂದಿನ ವರ್ಷ ಆಯವ್ಯಯದಲ್ಲಿ ವಿಶೇಷ ಯೋಜನೆ ಘೋಷಣೆ ಮಾಡಲಾಗುವುದು. ಸದ್ಯ ರಾಜ್ಯ ಸರ್ಕಾರದಿಂದ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2 ಮಹಿಳಾ ಸಂಘಗಳಿಗೆ 1 ಲಕ್ಷ ಸಹಾಯಧನ ಹಾಗೂ ಬ್ಯಾಂಕ್ ಸಾಲ ನೀಡಿ ಅವರ ಸ್ವ ಉದ್ಯೋಗ ನೆರವು ನೀಡಲಾಗಿದೆ. ಅಮೃತ ಯೋಜನೆಯಡಿ 5,000 ಸಾವಿರ ಮಹಿಳೆಯರಿಗೆ ಸಹಾಯ ಒದಗಿಸಲಾಗಿದೆ ಎಂದು ಯೋಜನೆಗಳ ಬಗ್ಗೆ ತಿಳಿಸಿದರು.

ಆಧುನಿಕ ವ್ಯವಸ್ಥೆ ಹೊಂದುವ ಉತ್ಪನ್ನ ತಯಾರಿಸಿ
ಬಾಂಗ್ಲಾದೇಶದಲ್ಲಿ ಸ್ತ್ರೀ ಶಕ್ತಿ ಸಂಘದವರು ಸರ್ಕಾರ ಹಾಗೂ ವರ್ಲ್ಡ್ ಬ್ಯಾಂಕ್ ಗಳಿಗೆ ಸಾಲ ಕೊಡುತ್ತಾರೆ. ಹೊಸ ತಂತ್ರಜ್ಞಾನ ಬಳಸಿ ಆಧುನಿಕ ವ್ಯವಸ್ಥೆಗೆ ಹೊಂದುವ ಉತ್ಪನ್ನಗಳನ್ನು ತಯಾರಿಸಿ, ನಿಮ್ಮ ಕುಟುಂಬಗಳು ನೆಮ್ಮದಿಯ ಜೀವನ ನಡೆಸಬೇಕು. ಮಹಿಳೆಯರು ಹೆಚ್ಚು ಪ್ರಾಮಾಣಿಕರು. ಮಹಿಳೆಯರ ಸಾಮರ್ಥ್ಯದ ಮೇಲೆ ನಂಬಿಕೆಯಿಂದ ಹೆಚ್ಚಿನ ಬಂಡವಾಳ ಹೂಡಲು ಸಿದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.
ಸಮಾರಂಭದಲ್ಲಿ ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಡಾ.ಸಿ.ಎನ್. ಅಶ್ಬಥ ನಾರಾಯಣ, ಜಲ ಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ ಕಾರಜೋಳ, ಹಣಕಾಸು ಇಲಾಖೆ ಎಸಿಎಸ್ ಐ.ಎಸ್ ಎನ್ ಪ್ರಸಾದ್, ಜಿ.ಪಂ.ಸಿಇಓ ದರ್ಶನ.ಹೆಚ್.ವಿ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications