ಗೌಡರ ಕಣ್ಣೀರು ಬಡವರಿಗಾಗಿ ಅಲ್ಲ ಮಕ್ಕಳಿಗಾಗಿ: ಸಿದ್ದು
ಮಂಡ್ಯ, ಮಾರ್ಚ್ 27: 'ಮತದಾರರ ಮುಂದೆ ಕಣ್ಣೀರು ಸುರಿಸಿದವರನ್ನು ನಂಬಬಾರದು' ಎಂದು ಹೇಳಿದ್ದಕ್ಕೆ 'ಬಡವರ ಬಗ್ಗೆ ನಮಗೆ ಭಾವನಾತ್ಮಕ ಸಂಬಂಧವಿದೆ. ಅದಕ್ಕೇ ಕಣ್ಣೀರು ಹಾಕಿದ್ದೇವೆ' ಎಂದು ದೇವೇಗೌಡ ಹೇಳಿದ್ದಾರೆ. ಆದರೆ 'ಅವರಿಗೆ ಅನುಕಂಪ ಇರೋದು ಬಡವರ ಬಗ್ಗೆ ಅಲ್ಲಾ, ತಮ್ಮ ಮಕ್ಕಳ ಬಗ್ಗೆ ಹಾಗೂ ತಮ್ಮ ಕುಟುಂಬ ರಾಜಕಾರಣದ ಬಗ್ಗೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ವರಿಷ್ಠ ದೇವೇಗೌಡರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಇಂದು ಗುರುವಾರ ನಡೆದ ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ ಅವರು 'ಒಬ್ಬ ರಾಜಕಾರಣಿಯಾದವನು ಅಳುವುದೆಂದರೆ ಏನು? ಕುಮಾರಸ್ವಾಮಿ ರಾಮನಗರದಲ್ಲಿ ಮತದಾರರ ಮುಂದೆ ಕಣ್ಣೀರು ಹಾಕಿದ್ದಕ್ಕೆ ಅಳುವವರನ್ನು ನಂಬಬೇಡಿ' ಎಂದು ಹೇಳಿದ್ದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಚುನಾವಣೇಲಿ ಮೊಸಳೆಕಣ್ಣೀರು ಸುರಿಸೋರ್ನ ನಂಬಬೇಡಿ
ಅದಕ್ಕೆ ನನ್ನ ಬಗ್ಗೆ ಟೀಕೆ ಮಾಡಿದ ಗೌಡರು 'ನಾವು ಬಡವರ ಬಗ್ಗೆ ಅನುಕಂಪದಿಂದ ಅತ್ತಿದ್ದೇವೆ' ಅಂದಿದ್ದಾರೆ. ಆದರೆ 'ಗೌಡರ ಕುಟುಂಬದವರು ಸುರಿಸುವ ಕಣ್ಣೀರು ಬಡವರ ಬಗೆಗಲ್ಲಾ. ತಮ್ಮ ಮಕ್ಕಳ ಬಗ್ಗೆ' ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
'ಇವರಿಗೆ ಚುನಾವಣೆ ಬಂದಾಗ ಮತದಾರರನ್ನು ನೋಡಿದರೆ ಕಣ್ಣೀರು ಬರುತ್ತೆ. ಜನಸೇವೆ ಮಾಡಲು ಬರುವ ನಮ್ಮಂತಹವರು ಅತ್ತೂ ಕರೆದು ಜನಸೇವೆ ಮಾಡಬೇಕಾಗಿಲ್ಲಾ. ಜನ ಆಶೀರ್ವಾದ ಮಾಡಿದರೆ ಅಧಿಕಾರದಲ್ಲಿರುತ್ತೇವೆ, ಇಲ್ಲದಿದ್ದರೆ ಇಲ್ಲಾ. ಅದು ಬಿಟ್ಟು ಚುನಾವಣೆ ಸಮಯದಲ್ಲಿ ಇಂತಹ ಮೊಸಳೆಕಣ್ಣೀರು ಸುರಿಸುವವರನ್ನು ನಂಬಬೇಡಿ' ಎಂದು ಸಿದ್ದರಾಮಯ್ಯ ಎಚ್ಚರಿಸಿದರು.

ಬಿಜೆಪಿ-ಕಾಂಗ್ರೆಸ್ ನಡುವೆಯಷ್ಟೇ ಸ್ಪರ್ಧೆ: ಸಿದ್ದರಾಮಯ್ಯ
ರಾಜ್ಯದ ಬಹುತೇಕ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹಾಗು ನಮ್ಮ ಪಕ್ಷದ ನಡುವೆಯೇ ನೇರ ಸ್ಪರ್ಧೆ. ಮೂರ್ನಾಲ್ಕು ಕಡೆ ಮಾತ್ರ ಜೆಡಿಎಸ್ ನವರು ತ್ರಿಕೋನ ಸ್ಫರ್ಧೆಗೆ ಬರುತ್ತಾರೆ ಎಂದು ವಾಗ್ದಾಳಿ ಮುಂದುವರಿಸಿದ ಸಿದ್ದರಾಮಯ್ಯ, ಜೆಡಿಎಸ್ ನವರಿಗೆ ಅಭ್ಯರ್ಥಿಗಳೇ ಇಲ್ಲಾ. ಹುಡುಕೀ ಹುಡುಕಿ ಹಾಕಿದ್ದಾರೆ.
'ಚಿಕ್ಕಬಳ್ಳಾಪುರದಲ್ಲಿ ಯಾರು ಸಿಗದೇ ಇದ್ದ ಕಾರಣ, ವಿಧಿ ಇಲ್ಲದೆ ಕುಮಾರಸ್ವಾಮಿಯವರೇ ನಿಲ್ಲಬೇಕಾಯಿತು. ಕಳೆದ ಬಾರಿ ಮೂರು ಕಡೆ ಗೆದ್ದಿದ್ದ ಜೆಡಿಎಸ್ ಈ ಬಾರಿ ಒಂದು ಕ್ಷೇತ್ರದಲ್ಲೂ ಗೆಲ್ಲುವುದಿಲ್ಲಾ' ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.

ಜನರ ಆಶೀರ್ವಾದ ಇರೋವರೆಗೂ ಅಧಿಕಾರದಲ್ಲಿರುತ್ತೇನೆ
ದೇವೇಗೌಡರು, ಕುಮಾರಸ್ವಾಮಿ, ಜಗದೀಶ್ ಶೆಟ್ಟರ್ ಎಲ್ಲರೂ ಲೋಕಸಭಾ ಚುನಾವಣೆಯಾದ ಮೇಲೆ ಸಿದ್ದರಾಮಯ್ಯ ಹೊರಟು ಹೋಗುತ್ತಾರೆ ಎಂದು ಟೀಕೆ ಮಾಡ್ತಾರೆ. ನಾನು ಎಲ್ಲೂ ಹೋಗೊಲ್ಲಾ. ಇನ್ನುಳಿದ ನಾಲ್ಕು ವರ್ಷ ಎರಡು ತಿಂಗಳು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುತ್ತದೆ. ಮತ್ತು ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಈ ಬಾರಿ ರಮ್ಯಾ ಅವರಿಗೆ ಹೆಚ್ಚಿನ ಬಹುಮತದಿಂದ ಮತ ಹಾಕಿ ನಮಗೆ ಶಕ್ತಿ ತುಂಬಿ, ನಿಮ್ಮ ಆಶೀರ್ವಾದ ಇರುವವರೆಗೂ ನಾನು ಅಧಿಕಾರದಲ್ಲಿರುತ್ತೇನೆ' ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಕೊಟ್ಟ ಕುದುರೆ ಏರಲಾಗದ ಕುಮಾರಸ್ವಾಮಿ- ಸಿದ್ದು
ಸಭೆಯಲ್ಲಿ ಇಂಧನ ಸಚಿವ ಡಿಕೆ ಶಿವಕುಮಾರ್ ಮಾತನಾಡಿ, ಕೊಟ್ಟ ಕುದುರೆ ಏರಲು ಆಗದವನು ಮತ್ತೊಂದು ಕುದುರೆ ಏರಿ ಏನು ಮಾಡಿಯಾನು? ಅವನು ವೀರನೂ ಅಲ್ಲಾ ಶೂರನೂ ಅಲ್ಲಾ ಎಂದು ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದರು. ತನ್ನನ್ನು (ಎಚ್ಡಿಕೆ) ಮುಖ್ಯಮಂತ್ರಿ, ತಂದೆಯನ್ನು (ದೇವೇಗೌಡ) ಪ್ರಧಾನ ಮಂತ್ರಿ ಮಾಡಿದ ಜನರ ವಿಶ್ವಾಸಗಳಿಸಲು ಆಗದವರು ಈಗ ಚಿಕ್ಕಬಳ್ಳಾಪುರಕ್ಕೆ ಹೋಗಿದ್ದಾರೆ. ಇವರು ಯಾವ ಕಾರಣಕ್ಕೂ ವೀರಪ್ಪ ಮೊಯ್ಲಿಯವರನ್ನು ಸೋಲಿಸಲು ಸಾಧ್ಯವಿಲ್ಲಾ!' ಎಂದು ಹರಿಹಾಯ್ದರು.
ಮಂಡ್ಯದ ಜನ ದಡ್ಡರಲ್ಲಾ. ಈ ಬಾರಿ ರಮ್ಯಾ ಅವರನ್ನು ಗೆಲ್ಲಿಸುವ ಮೂಲಕ ತಮಗೆ ಪಾಠ ಕಲಿಸುತ್ತಾರೆ ಎಂದರು.

ಕಳೆದ ಬಾರಿಯಂತೆ ಈ ಬಾರಿಯೂ ನನ್ನೇ ಗೆಲ್ಸಿ: ರಮ್ಯಾ
ಸಭೆಯಲ್ಲಿ ಅಭ್ಯರ್ಥಿ ರಮ್ಯಾ ಮಾತನಾಡಿ, ಕಳೆದ ಚುನಾವಣಾ ಸಂದರ್ಭದಲ್ಲಿ ನೀವೆಲ್ಲರೂ ನನ್ನ ತಂದೆಯ ಸ್ಥಾನದಲ್ಲಿ ನಿಂತು ನನ್ನನ್ನು ಗೆಲ್ಲಿಸಿ ಆಶೀರ್ವದಿಸಿದಿರಿ. ನಿಮಗೆ ನಾನು ಋಣಿಯಾಗಿದ್ದೇನೆ. ಕಳೆದ ಚುನಾವಣೆಗೆ ಬಂದಾಗ ನನ್ನ ಬಗ್ಗೆ ಅಪಪ್ರಚಾರ ಮಾಡಿದರು. ಜಾತಿ ಯಾವುದು, ತಂದೆ ಯಾರು, ಇವರು ಸಿನಿಮಾ ನಟಿ -ಜನರ ಕೈಗೆ ಸಿಗ್ತಾರಾ ಎಂದೆಲ್ಲಾ ಆರೋಪಗಳು ಮಾಡಿದರು. ಆದರೂ ನೀವು ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಬೆಂಬಲ ನೀಡಿದ್ದೀರಿ. ಕಳೆದ ಬಾರಿಯಂತೆ ಈ ಬಾರಿಯೂ ನನ್ನ ಮೇಲೆ ವಿಶ್ವಾಸವಿಟ್ಟು ನನ್ನನ್ನು ಹರಸಿ ಆಶೀರ್ವದಿಸಿ, ನಿಮ್ಮ ಸೇವೆ ಮಾಡಿ ಋಣ ತೀರಿಸುತ್ತೇನೆ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

ಯಾರೆಲ್ಲಾ ಸಮಾವೇಶದಲ್ಲಿ ಭಾಗವಹಿಸಿದ್ದರು?
ಸಭೆಯಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಾ. ಜಿ ಪರಮೇಶ್ವರ್, ಸಚಿವರುಗಳಾದ ಡಾ. ಹೆಚ್ ಸಿ ಮಹದೇವಪ್ಪ, ಮಹದೇವ ಪ್ರಸಾದ್, ರೋಶನ್ ಬೇಗ್, ಶಾಸಕ ನರೇಂದ್ರ ಸ್ವಾಮಿ, ಜಿಲ್ಲಾಧ್ಯಕ್ಷ ಎಂಎಸ್ ಆತ್ಮಾನಂದ, ಮಧು ಜಿ ಮಾದೇಗೌಡ ಸೇರಿದಂತೆ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.












Click it and Unblock the Notifications