Karnataka bandh: ಮತ್ತೊಮ್ಮೆ ಕರ್ನಾಟಕ ಬಂದ್ ಸಾಧ್ಯತೆ, ಯಾವ ಕಾರಣಕ್ಕೆ ಯಾರಿಂದ?
ಕನ್ನಡಪರ ಸಂಘಟನೆಗಳು ಇತ್ತೀಚೆಗಷ್ಟೆ ವಿವಿಧ ಘಟನೆಗಳನ್ನು ಖಂಡಿಸಿ ಹಾಗೂ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಬಂದ್ ನಡೆಸಿದರು. ಈ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದರು. ಇದೀಗ ಮತ್ತೊಮ್ಮೆ ಕರ್ನಾಟಕ ಬಂದ್ ಮಾಡಲು ಸಿದ್ಧತೆ ನಡೆಯುತ್ತಿದೆ. ಮುಂದಿನ ವಾರದಲ್ಲೇ ಅಖಂಡ ಕರ್ನಾಟಕ ಬಂದ್ ಆಗುವ ಸಾಧ್ಯತೆ ಇದೆ. ಇಷ್ಟಕ್ಕೂ ಬಂದ್‌ಗೆ ಕರೆ ನೀಡುತ್ತಿರುವುದು ಯಾರು ಹಾಗೂ ಯಾವ ಕಾರಣಕ್ಕೆ ಎನ್ನುವ ಮಾಹಿತಿ ಇಲ್ಲಿದೆ.
ಕಳೆದ ಬಾರಿ ಕನ್ನಡಿಗರ ಮೇಲಿನ ಹಲ್ಲೆ ಖಂಡಿಸಿ ಬಂದ್‌ಗೆ ಕರೆ ನೀಡಲಾಗಿತ್ತು. ಆದರೆ ಈಗ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಂದ್‌ಗೆ ಕರೆ ನೀಡಲು ತಯಾರಿ ನಡೆದಿದೆ. ಇತ್ತೀಚೆಗೆ ರಾಜ್ಯ ಸರ್ಕಾರವು ಏಪ್ರಿಲ್ ಮೊದಲ ದಿನದಿಂದಲೇ ಡೀಸೆಲ್ ದರ ಏರಿಸುವ ಮೂಲಕ ವಾಹನ ಮಾಲೀಕರ ಕೆಂಗಣ್ಣಿಗೆ ಗುರಿಯಾಗಿದೆ. ಇದು ಸರಕು ಸಾಗಾಟ ಮಾಡುವ ವಾಹನಗಳಿಗೆ ಭಾರಿ ಹೊಡೆತ ನೀಡಿರುವ ಹಿನ್ನೆಲೆ ಲಾರಿ ಮಾಲೀಕರು ಬಂದ್‌ಗೆ ಕರೆ ನೀಡಲು ಮುಂದಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಎರಡು ಬಾರಿ ಡೀಸೆಲ್ ಬೆಲೆ ಹೆಚ್ಚಳವಾಗಿದೆ. ಇದರಿಂದ ಲಾರಿ ಮಾಲೀಕರ ಮೇಲೆ ಹೊರೆ ಹೆಚ್ಚಾಗಿದೆ. ಈ ಸಂಬಂಧ ಶನಿವಾರದಂದು ಮಹತ್ವದ ಸಭೆ ನಡೆಸಲಿದ್ದೇವೆ. ಡೀಸೆಲ್ ದರ ಏರಿಕೆ ಖಂಡಿಸಿ ಮುಂದಿನ ವಾರವೇ ಮುಷ್ಕರಕ್ಕೆ ಕರೆ ನೀಡಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಲಾರಿ ಮಾಲೀಕರು ಮುಷ್ಕರ ನಡೆಸಿದರೆ, ಭಾರಿ ಪ್ರಮಾಣದ ಸರಕು ಸಾಗಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಡೀಸೆಲ್ ದರವನ್ನು ರಾಜ್ಯ ಸರ್ಕಾರ ಪ್ರತಿ ಲೀಟರ್ ಮೇಲೆ 2 ರೂಪಾಯಿ ಹೆಚ್ಚಳ ಮಾಡಿದೆ. ಇದಕ್ಕೆ ವಾಹನ ಮಾಲೀಕರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಕೂಡ ರಾಜ್ಯ ಸರ್ಕಾರದ ಈ ನಡೆಯನ್ನು ಖಂಡಿಸಿವೆ. ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿರುವಾಗಲೇ ಡೀಸೆಲ್ ಬೆಲೆ 2 ರೂಪಾಯಿ ಹೆಚ್ಚಿಸಿ ಗಾಯದ ಮೇಲೆ ಬರೆ ಎಳೆದಿದೆ ಕಾಂಗ್ರೆಸ್ ಸರ್ಕಾರ. ಶಕ್ತಿ ಯೋಜನೆಯಿಂದ ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳಿಗೆ, ಡೀಸೆಲ್ ಬೆಲೆ ಹೆಚ್ಚಳ ಮತ್ತಷ್ಟು ಶಕ್ತಿಹೀನವಾಗಿಸಿದೆ. ಪ್ರತಿ ನಿತ್ಯ ಬಿಎಂಟಿಸಿಗೆ 1.50 ಕೋಟಿ ರೂ. ಹೊರೆಯಾಗುತ್ತಿದೆ ಎಂದು ಜೆಡಿಎಸ್ ಕೂಡ ತರಾಟೆಗೆ ತೆಗೆದುಕೊಂಡಿತ್ತು.

ಇದರ ಪರಿಣಾಮ ಮತ್ತೆ ಬಸ್ ಪ್ರಯಾಣ ದರ ಏರಿಸಿ, ಜನರ ಜೇಬಿಗೆ ಕತ್ತರಿ ಹಾಕುವ ಸಮಯ ಸನ್ನಿಹಿತವಾಗುವಂತೆ ಕಾಣುತ್ತಿದೆ. 10 ತಿಂಗಳ ಹಿಂದೆಯಷ್ಟೇ ಪೆಟ್ರೋಲ್ 3 ರೂ, ಡೀಸೆಲ್ 3.5 ರೂಪಾಯಿ ಏರಿಕೆಯಾಗಿತ್ತು. ಜನವರಿಯಲ್ಲಿ ಬಸ್ ಪ್ರಯಾಣ ದರವನ್ನು ಶೇ 15ರಷ್ಟು ಹೆಚ್ಚಿಸಲಾಗಿತ್ತು. ಇದೀಗ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಇಡೀ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದ್ದು, ಅಗತ್ಯ ವಸ್ತುಗಳು ಸೇರಿದಂತೆ ಎಲ್ಲ ಬೆಲೆಗಳು ಗಗನಮುಖಿಯಾಗಿದೆ ಎಂದು ವಾಗ್ದಾಳಿ ನಡೆಸಿತ್ತು.

ಬಡ್ಡಿ ಸಮೇತ ಕಸಿಯುತ್ತಿದೆ: ಡೀಸೆಲ್ ದರ ಏರಿಕೆ ಸಂಬಂಧ ಬಿಜೆಪಿ ಸಂಸದ ಸಿಎನ್ ಮಂಜುನಾಥ್ ಕೂಡ ಖಂಡನೆ ವ್ಯಕ್ತಪಡಿಸಿದ್ದಾರೆ. ಹಾಲು, ವಿದ್ಯುತ್, ಬಸ್ ದರ ಏರಿಕೆ, ನೋಂದಣಿ ಶುಲ್ಕ ಹೆಚ್ಚಳ ನಂತರ ಇದೀಗ ರಾಜ್ಯ ಸರ್ಕಾರ ಡೀಸೆಲ್ ಬೆಲೆ ಏರಿಸಿರುವುದು ಸಾರ್ವಜನಿಕರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದಿದ್ದಾರೆ.












Click it and Unblock the Notifications