13 ಅಧಿಕಾರಿಗಳ ಮನೆ ಬಾಗಿಲು ತಟ್ಟಿದ ಲೋಕಾಯುಕ್ತರು
ಬೆಂಗಳೂರು, ಆ.7 : ಗುರುವಾರ ಬೆಳ್ಳಂಬೆಳಗ್ಗೆ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. 13 ಅಧಿಕಾರಿಗಳ ಮನೆ ಮತ್ತು ಕಚೇರಿ ಸೇರಿದಂತೆ ಒಟ್ಟು 32 ಕಡೆ ಏಕಕಾಲಕ್ಕೆ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರೆದಿದೆ.
ಗುರುವಾರ ಲೋಕಾಯುಕ್ತ ಪೊಲೀಸರು ಬೆಂಗಳೂರು, ಹುಬ್ಬಳ್ಳಿ, ಬಳ್ಳಾರಿ, ಮಂಡ್ಯ, ಶಿವಮೊಗ್ಗ ಸೇರಿದಂತೆ ಒಟ್ಟು 32 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಕ್ರೈಂ ಬ್ಯೂರೋ ಇನ್ಸ್ ಪೆಕ್ಟರ್ ಶ್ರೀನಿವಾಸ್ ರೆಡ್ಡಿ, ಹೊಸೂರು ಎಸಿಪಿ ಸಿದ್ದರಾಮಯ್ಯ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

ಬನ್ನೇರುಘಟ್ಟದಲ್ಲಿರುವ ಬೆಂಗಳೂರು ಜಿಲ್ಲಾ ಪಂಚಾಯತ್ ಸದಸ್ಯ ಜಯರಾಂ ಅವರ ನಿವಾಸ ಹಾಗೂ ಕಛೇರಿಗಳ ಮೇಲೆ ದಾಳಿ ನಡೆದಿದೆ. ಮಂಡ್ಯದಲ್ಲಿ ಬೆಸ್ಕಾಂ ಜಾಗೃತ ದಳದ ಅಧಿಕಾರಿ ಪುಟ್ಟಸ್ವಾಮಿ ನಿವಾಸದ ಮೇಲೆ ಲೋಕಾಯುಕ್ತ ಡಿವೈಎಸ್ಪಿ ನಾರಾಯಣಸ್ವಾಮಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. [ಲೋಕಾಯುಕ್ತ ಬಲೆಗೆ ಬಿದ್ದರೆ ಅಧಿಕಾರಿಗಳು ಅಮಾನತು]
ಇನ್ನು ಬಳ್ಳಾರಿಯಲ್ಲಿ ಡಿವೈಎಸ್ಪಿ ಮಹಾಂತರೆಡ್ಡಿ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಉಪವಿಭಾಗದ ಎಫ್ ಡಿಸಿ ಅವರ ಹೊಸಪೇಟೆಯಲ್ಲಿನ ನಿವಾಸ, ಬೆಂಗಳೂರಿನ ಯಲಹಂಕದಲ್ಲಿನ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಬಳ್ಳಾರಿಯ ಕಾರ್ಮಿಕ ಇಲಾಖೆಯ ಎಫ್ ಡಿಸಿ ನಿರಂಜನ್ ಮೂರ್ತಿ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.












Click it and Unblock the Notifications