ಬೆದರಿಕೆ ಹಾಕಿದ ವರ್ತೂರು ವಿರುದ್ಧ ಲೋಕಾಯುಕ್ತ ತನಿಖೆ
ಬೆಂಗಳೂರು, ಮಾ. 30 : ಅಕ್ರಮ ಮರಳು ಸಾಗಣೆ ಕುರಿತು ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿದ ಕೋಲಾರ ಕ್ಷೇತ್ರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ವಿರುದ್ಧ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಡಾ.ವೈ.ಭಾಸ್ಕರರಾವ್ ಪೊಲೀಸರಿಗೆ ಆದೇಶಿಸಿದ್ದಾರೆ. ವರ್ತೂರು ಪ್ರಕಾಶ್ ವಿರುದ್ಧ ಕಳೆದವಾರ ದೂರು ದಾಖಲಾಗಿತ್ತು.
ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿದ ಶಾಸಕರ ವಿರುದ್ಧ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಣಧೀರ ಪಡೆ ಅಧ್ಯಕ್ಷ ಬಿ.ಹರೀಶ್ ಕುಮಾರ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ಮೊಕದ್ದಮೆ ದಾಖಲಿಸಲು ಡಾ.ವೈ.ಭಾಸ್ಕರರಾವ್ ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಿದ್ದಾರೆ. [ಬೆದರಿಕೆ ಹಾಕಿದ್ದು ಹೇಗೆ?]

ವರ್ತೂರು ಪ್ರಕಾಶ್ ವಿರುದ್ಧ ಸಲ್ಲಿಕೆಯಾಗಿದ್ದ ದೂರಿನ ವಿಚಾರಣೆ ನಡೆಸಿದ ಲೋಕಾಯುಕ್ತ ಹೆಚ್ಚುವರಿ ರಿಜಿಸ್ಟ್ರಾರ್ ಎಂ.ಎಸ್.ಬಾಲಕೃಷ್ಣ ಅವರು ಲೋಕಾಯುಕ್ತರಿಗೆ ಪ್ರಾಥಮಿಕ ವರದಿ ಸಲ್ಲಿಸಿದ್ದರು. ವರದಿ ಅನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರೇಮ್ ಶಂಕರ್ ಮೀನಾ ಅವರಿಗೆ ಭಾಸ್ಕರ್ ರಾವ್ ಆದೇಶ ನೀಡಿದ್ದಾರೆ. [ವರ್ತೂರು ಪ್ರಕಾಶ್ ವಿರುದ್ಧ ದೂರು]
ಕುಮಾರಸ್ವಾಮಿ ಸಿಡಿ ಬಿಡುಗಡೆ : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ವರ್ತೂರು ಪ್ರಕಾಶ್ ಅಧಿಕಾರಿಗೆ ಬೆದರಿಕೆ ಹಾಕುವ ಸಿಡಿಯನ್ನು ಬಿಡುಗಡೆ ಮಾಡಿದ್ದರು. ಮರಳು ಮಾಫಿಯಾಗೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಯೊಬ್ಬರಿಗೆ ಶಾಸಕರು ಬೆದರಿಕೆ ಹಾಕುವ ಧ್ವನಿ ಇದರಲ್ಲಿತ್ತು.
ಈ ಸಿಡಿಯನ್ನು ಬಿಡುಗಡೆ ಮಾಡಿದ್ದ ಕುಮಾರಸ್ವಾಮಿ ಅವರು ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿಗೂ ಈ ದೂರವಾಣಿ ಸಂಭಾಷಣೆಗೂ ಸಂಬಂಧವಿದೆ ಎಂದು ಆರೋಪಿಸಿದ್ದರು. ಕರ್ನಾಟಕ ರಣಧೀರ ಪಡೆ ಅಧ್ಯಕ್ಷ ಬಿ.ಹರೀಶ್ ಕುಮಾರ್ ಲೋಕಾಯುಕ್ತರಿಗೆ ದೂರಿನ ಜೊತೆ ಆಡಿಯೋ ಸಿಡಿಯನ್ನು ನೀಡಿದ್ದರು.












Click it and Unblock the Notifications