Mysore Candidate : ಮೈಸೂರಿನಲ್ಲಿ ಬಿಜೆಪಿಯಿಂದ ರಾಜವಂಶಸ್ಥ- ಕಾಂಗ್ರೆಸ್ ಲೆಕ್ಕಾಚಾರವೇನು?
ಮೈಸೂರು, ಮಾರ್ಚ್ 19: ಎರಡು ಬಾರಿ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ನಿರಾಕರಿಸಿ, ರಾಜ ವಂಶಸ್ಥ ಯದುವೀರ್ ಒಡೆಯರ್‌ಗೆ ಮಣೆ ಹಾಕಿದೆ. ಇದೆ ಹಿನ್ನೆಲೆಯಲ್ಲಿ ಮೈಸೂರಿನ ಕಾಂಗ್ರೆಸ್ ಒಕ್ಕಲಿಗ ಸಮುದಾಯದ ಮತಗಳನ್ನು ತನ್ನ ಪರವಾಗಿ ಸೆಳೆಯಲು ಮುಂದಾಗಿದೆ.
ಬಿಜೆಪಿ ಅಭ್ಯರ್ಥಿ ಘೋಷಣೆಗೂ ಮುನ್ನ ಹಾಲಿ ಸಂಸದರಿಗೆ ಟಿಕೆಟ್ ನೀಡಬೇಕು ಎಂದು ಅವರ ಬೆಂಬಲಿಗರು ಮೈಸೂರು ಮತ್ತು ಕೊಡಗಿನ ವಿವಿಧ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡದೆ ಇರುವುದು ಒಕ್ಕಲಿಗ ಸಮುದಾಯಕ್ಕೆ ಬಿಜೆಪಿ ಮಾಡಿದ ಅನ್ಯಾಯ ಎಂಬ ಚರ್ಚೆ ನಡೆಯುತ್ತಿದೆ. ಇದೇ ವೇಳೆ ಮಾಜಿ ಸಿಎಂ ಡಿವಿ ಸದಾನಂದಗೌಡರಿಗೂ ಟಿಕೆಟ್ ನೀಡದೆ ಇರುವುದು ಒಕ್ಕಲಿಗ ಸಮುದಾಯಕ್ಕೆ ನುಂಗಲಾರದ ತುತ್ತಾಗಿದ್ದು, ಇದನ್ನು ಲಾಭ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.

ಮೈಸೂರು-ಕೊಡಗು ಟಿಕೆಟ್ ಯಾರ 'ಕೈ'ಗೆ?
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿದೆ. ಆದರೆ, ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬ ಕುತೂಹಲ ಇನ್ನೂ ಕೊನೆಯಾಗಿಲ್ಲ. ಬಿಜೆಪಿ ರಾಜ ವಂಶಸ್ಥ ಯದುವೀರ್ ಒಡೆಯರ್‌ಗೆ ಮಣೆ ಹಾಕಿರುವ ಕಾರಣ ಕಾಂಗ್ರೆಸ್ ಟಿಕೆಟ್ ಹಂಚಿಕೆ ಈ ಸಕತ್ ಕುತೂಹಲ ಕೆರಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕ್ಷೇತ್ರದ ಚುನಾವಣೆ ಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಸದ್ಯಕ್ಕೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರಿಗೆ ಅದೃಷ್ಟ ಒಲಿಯುವ ಸಾಧ್ಯತೆ ಹೆಚ್ಚಿದೆ. ಪಕ್ಷದಲ್ಲಿಯೂ ಅವರ ಹೆಸರು ಕೇಳಿಬರುತ್ತಿದೆ. ಆದರೆ, ಹೊಸ ಅಭ್ಯರ್ಥಿ ಅಥವಾ ಹೊಸ ಮುಖಕ್ಕೂ ಮಣೆ ಹಾಕುವ ಸಾಧ್ಯತೆಯಿದೆ.
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರಕ್ಕೆ 14 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರೂ ಅಂತಿಮವಾಗಿ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್ ನೀಡಲು ತೀರ್ಮಾನ ಮಾಡಲಾಗಿದೆ. ಹೀಗಾಗಿ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಬಳಿಕ ಕೊಡಗು ಜಿಲ್ಲೆಯಿಂದ ಕೆಪಿಸಿಸಿ ವಕ್ತಾರ ಚಂದ್ರಮೌಳಿ ಹೆಸರು ಸೇರಿಸಿ ಹೈಕಮಾಂಡ್‌ಗೆ ಶಿಫಾರಸು ಮಾಡಲಾಗಿದೆ.

ಇನ್ನು, ಯದುವೀರ್ ಒಡೆಯರ್ ವಿರುದ್ಧ ಪ್ರಬಲ ಅಭ್ಯರ್ಥಿ ಕಾಂಗ್ರೆಸ್‌ಗೆ ಸಿಗುತ್ತಿಲ್ಲ. ಇದೆ ಕೈ ಪಕ್ಷಕ್ಕೆ ಸಮಸ್ಯೆ ಆಗಿದೆ. ಸಿಎಂ ತವರು ಕ್ಷೇತ್ರದಲ್ಲಿಯೇ ಅಭ್ಯರ್ಥಿ ಸಿಗದೆ ಇರುವುದು ಕಾಂಗ್ರೆಸ್‌ಗೆ ಮೊದಲ ಹಿನ್ನೆಡೆ ಎನ್ನಲಾಗುತ್ತಿದೆ. ಹೀಗಾಗಿಯೇ ಕಾಂಗ್ರೆಸ್ ಅಭ್ಯರ್ಥಿ ಹುಡುಕುವಲ್ಲಿ ನಿಧಾನಗತಿ ಅನುಸರಿಸುತ್ತಿದೆ. ನಿಧಾನವಾಗುಯಾದರೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಯತ್ನಿಸುತ್ತಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಚ್.ವಿಶ್ವನಾಥ್ ಸಂಸದರಾಗಿದ್ದರೂ ಕಳೆದ ಬಾರಿ ಸೋಲು ಕಂಡಿದ್ದಾರೆ. ಆದರೂ ಒಬ್ಬ ಗಟ್ಟಿ ಅಭ್ಯರ್ಥಿಯನ್ನು ಕೈ ಪಡೆ ಬೆಳೆಸಲಿಲ್ಲ. ಬಿಜೆಪಿ ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿದ್ದರೂ ಕೂಡ ಕಾಂಗ್ರೆಸ್ ತನ್ನ ಮೌನ ಮುಂದುವರೆಸಿದೆ. ಅಭ್ಯರ್ಥಿ ಯಾರು ಎಂದು ಘೋಷಿಸದೆ ಚುನಾವಣಾ ಪ್ರಚಾರ ಮಾಡುವುದು ಹೇಗೆ ಎಂಬುದನ್ನು ಕೈ ಕಾರ್ಯಕರ್ತರ ತರ್ಕ. ಇನ್ನು, ಮೈಸೂರು- ಕೊಡಗು ಕ್ಷೇತ್ರ ಸೇರಿದಂತೆ ಉಳಿದ 21 ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಬಾಕಿಯಿದೆ. ದೆಹಲಿಯಲ್ಲಿ ಮಾರ್ಚ್ 19ರಂದು ಸಿಇಸಿ ಸಭೆ ನಡೆಯುತ್ತಿದ್ದು, ಅಭ್ಯರ್ಥಿಗಳ ಪಟ್ಟಿ ಮಾರ್ಚ್ 20ರಂದು ಪ್ರಕಟವಾಗುವ ಸಾಧ್ಯತೆ ಇದೆ.
ಚುನಾವಣಾ ಪ್ರಚಾರ ಆರಂಭಿಸಿದ ಯದುವೀರ್ ಒಡೆಯರ್
ಇನ್ನು, ಬಿಜೆಪಿ ಅಭ್ಯರ್ಥಿಯಾಗಿರುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅರಮನೆಯಿಂದ ರಸ್ತೆಗಿಳಿದು ಪ್ರಚಾರಕ್ಕೆ ಚಾಲನೆ ಕೊಟ್ಟಿದ್ದಾರೆ. ಮಠಗಳ ಸ್ವಾಮೀಜಿಗಳು, ಧಾರ್ಮಿಕ ಮುಖಂಡರ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ. ಜನ ಸಾಮಾನ್ಯರಂತೆ ಬೀದಿಗೆ ಇಳಿಯುತ್ತಿದ್ದು, ಜನರ ಜೊತೆಗೆ ಒಡನಾಟ ಹೆಚ್ಚಿಸಿಕೊಳ್ಳುತ್ತಿದ್ದಾರೆ.












Click it and Unblock the Notifications