Lok Sabha Election 2024: ಕರ್ನಾಟಕದಲ್ಲಿ ಮೋದಿ, ಯೋಗಿ, ಅಮಿತ್ ಶಾ ಪ್ರಚಾರ: ಯಾವಾಗ, ಎಲ್ಲೆಲ್ಲಿ? ಇಲ್ಲಿದೆ ಮಾಹಿತಿ
ಬೆಂಗಳೂರು, ಏಪ್ರಿಲ್ 18: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಜ್ಯಕ್ಕೆ ಬಿಜೆಪಿ ಹೈಕಮಾಂಡ್ ನಾಯಕರ ಭೇಟಿ ಜೋರಾಗಿದೆ. 2024ರ ಲೋಕಸಭಾ ಚುನಾವಣೆ ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ಮಾಸ್ಟರ್ ಪ್ಲಾನ್ ನಡೆಸಿದ್ದು, ಚುನಾವಣೆ ಘೋಷಣೆಯಾಗ ಬಳಿಕ ಪ್ರಧಾನಿ ಮೋದಿ ಸೇರಿದಂತೆ ಹಲವು ಬಿಜೆಪಿ ಹೈಕಮಾಂಡ್ ನಾಯಕರು ರಾಜ್ಯಕ್ಕೆ ಆಗಮಿಸುವ ಕುರಿತು ಮಹಾ ರಣತಂತ್ರ ನಡೆಸಿದೆ.
ರಾಜ್ಯಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವು ನಾಯಕರು ಚುನಾವಣಾ ಅಖಾಡ ಎಂಟ್ರಿ ನೀಡುವ ಕುರಿತು ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಮಾಹಿತಿ ನೀಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸುವ ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರ ಸಭೆಯು ಇದೇ 20ರಂದು ಮಧ್ಯಾಹ್ನ ಚಿಕ್ಕಬಳ್ಳಾಪುರದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಸುಮಾರು 1 ಲಕ್ಷ ಜನರ ನಿರೀಕ್ಷೆ ಇದೆ. ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ಏರ್ಪಡಿಸಲಾಗುತ್ತದೆ. ಬೆಂಗಳೂರು ದಕ್ಷಿಣ, ಬೆಂಗಳೂರು ಮಧ್ಯ, ಬೆಂಗಳೂರು ಉತ್ತರ ಕ್ಷೇತ್ರಗಳು, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಸಭೆ ಇದಾಗಿರುತ್ತದೆ. 2 ಕಡೆ ವಿಜಯ ಸಂಕಲ್ಪ ಸಮಾವೇಶ ನಡೆಯಲಿದ್ದು, ಸಿದ್ಧತಾ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರವಾಸವೂ ಕೂಡ ನಿಗದಿಯಾಗಿದೆ. 23, 24ರಂದು ಕರ್ನಾಟಕದಲ್ಲಿ ವಿವಿಧ ಚುನಾವಣಾ ಪ್ರಚಾರ ಸಭೆಗಳಲ್ಲಿ ಅವರು ಭಾಗವಹಿಸುತ್ತಾರೆ. 23ರಂದು ಬೆಳಿಗ್ಗೆ ಯಶವಂತಪುರದಲ್ಲಿ ರೋಡ್ ಷೋ, ಬಳಿಕ ಯಲಹಂಕದಲ್ಲಿ ಸಾರ್ವಜನಿಕ ಸಭೆ ಇರುತ್ತದೆ. ಸಂಜೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ ಇರುತ್ತದೆ. ನಂತರ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ ಇರಲಿದೆ ಎಂದು ವಿವರಿಸಿದರು.
24ರಂದು ಬೆಳಿಗ್ಗೆ ಚಿಕ್ಕಮಗಳೂರಿನಲ್ಲಿ ಸಾರ್ವಜನಿಕ ಸಭೆ, ಮಧ್ಯಾಹ್ನ ತುಮಕೂರಿನಲ್ಲಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಂಜೆ ಹುಬ್ಬಳ್ಳಿ ರೋಡ್ ಷೋದಲ್ಲಿ ಪಾಲ್ಗೊಳ್ಳುತ್ತಾರೆ.
ಇದೇ 24ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕರ್ನಾಟಕದಲ್ಲಿ ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತಾರೆ. ಬೆಳಿಗ್ಗೆ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ, ಮಧ್ಯಾಹ್ನ ಮಡಿಕೇರಿಯಲ್ಲಿ ಸಾರ್ವಜನಿಕ ಸಭೆ, ಸಂಜೆ ಉಡುಪಿಯ ಮಲ್ಪೆಯಲ್ಲಿ ಸಾರ್ವಜನಿಕ ಸಭೆ ಇರುತ್ತದೆ ಎಂದು ಮಾಹಿತಿ ನೀಡಿದರು. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಏಪ್ರಿಲ್ 21ರಂದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 24ರಂದು ರಾಜ್ಯ ಪ್ರವಾಸ ಮಾಡಲಿದ್ದಾರೆ ಎಂದು ತಿಳಿಸಿದರು.












Click it and Unblock the Notifications