ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆಗೆ ಕಾರಣಗಳೇನು? ಪ್ರಮುಖ ಅಂಶಗಳು ಇಲ್ಲಿವೆ
ಮಂಡ್ಯ, ಏಪ್ರಿಲ್ 04: ತೀವ್ರ ಕುತೂಹಲ ಮೂಡಿಸಿದ್ದ ಮಂಡ್ಯ ಕ್ಷೇತ್ರದ ಕುರಿತು ಮಹತ್ವದ ನಿರ್ಧಾರವನ್ನ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ಘೋಷಿಸಿದ್ದಾರೆ. ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ ಎಂದಿರುವ ಹಾಲಿ ಸಂಸದೆ ಸುಮಲತಾ ಅಂಬರೀಶ್,ನಾನು ನಿಂತ್ರೂ, ಸೋತ್ರೂ, ಗೆದ್ರೂ ಮಂಡ್ಯದಲ್ಲೇ. ಮಂಡ್ಯ ಬಿಟ್ಟು ನಾನು ರಾಜಕೀಯ ಮಾಡಲ್ಲ ಎಂದಿದ್ದಾರೆ.
ಬುಧವಾರ ಬೆಂಬಲಿಗರ ಸಭೆಯಲ್ಲಿ ಭಾವುಕರಾಗಿಯೇ ಮಾತನಾಡಿದ ಸುಮಲತಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದರು. ಆದರೆ, ಕುಮಾರಸ್ವಾಮಿ ಪರ ಪ್ರಚಾರ ಮಾಡುವ ಬಗ್ಗೆ ಒಂದೇ ಒಂದು ಮಾತನಾಡದಿರುವುದು ಅಚ್ಚರಿಕೆ ಕಾರಣವಾಗಿದೆ.

ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ, ಆದರೆ, ಮಂಡ್ಯವನ್ನ ನಾನು ಎಂದಿಗೂ ಬಿಡುವುದಿಲ್ಲ ಎಂದು ಸುಮಲತಾ ಅಂಬರೀಶ್ ಅವರು ಹೇಳಿದ್ದು, ಮುಂದಿನ ರಾಜಕೀಯ ಬೆಳವಣೆಗೆಗಳು ಮಂಡ್ಯದಿಂದಲೇ ಶುವಾಗಲಿದೆ ಎನ್ನುವ ಅನುಮಾನ ಮೂಡಿದೆ. ಹಾಗಾದ್ರೆ, ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರ್ಪಡೆಗೆ ಕಾರಣಗಳು ಏನು ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಬಿಜೆಪಿ ಸೇರಲು ಪ್ರಮುಖ ಕಾರಣಗಳು!
ಮಂಡ್ಯದಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದರೆ ಗೆಲುವು ಕಷ್ಟ.
ಕಳೆದ ಬಾರಿ ಹಾಲಿ ಸಿಎಂ ಪುತ್ರನ ಎದುರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 7,03,660 ಮತಗಳನ್ನ ಪಡೆದು ಭರ್ಜರಿ ಜಯಗಳಿಸಿದ್ದ ಸುಮಲತಾ ಅಂಬರೀಶ್ ಅವರಿಗೆ ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿದೆ.
ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ನಾಯಕರಿಗೆ ಪ್ರತಿಷ್ಠೆಯ ಕ್ಷೇತ್ರವಾಗಿದ್ದು, ಮಂಡ್ಯದಿಂದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕಣದಲ್ಲಿದ್ದಾರೆ. ಸುಮಲತಾ ಅಂಬರೀಶ್ ಅವರು ಮೈತ್ರಿ ಧರ್ಮ ಪಾಲನೆಯಿಂದ ಈ ಬಾರಿ ಕ್ಷೇತ್ರ ಬಿಟ್ಟುಕೊಟ್ಟು ಬಿಜೆಪಿ ಸೇರಲು ನಿರ್ಧರಿಸಿದ್ದಾರೆ.
ಇನ್ನೂ ಮಂಡ್ಯದಲ್ಲಿ ಈ ಬಾರಿ ಸುಮಲತಾ ಅಂಬರೀಶ್ ಅವರು ಪಕ್ಷೇತ್ರರವಾಗಿ ಸ್ಪರ್ಧೆ ಮಾಡಿದತೆ ಗೆಲುವು ಕಷ್ಟ ಎಂಬುದು ಹಲವು ಸಮೀಕ್ಷೆಗಳಿಂದ ತಿಳಿದು ಬಂದಿದ್ದು, ಬಿಜೆಪಿ ಹೈಕಮಾಂಡ್ ನಾಯಕರ ತೀರ್ಮಾನದಂತೆ ಕ್ಷೇತ್ರ ಬಿಟ್ಟು, ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದಾರೆ.
ನಾಲ್ಕು ಸಾವಿರ ಕೋಟಿ ಅನುದಾನ ನೀಡಿದ ಬಿಜೆಪಿ ಸರ್ಕಾರ
2019 ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಗೆಲುವು ಕಂಡು ಸಂಸದೆಯಾಗಿದ್ದರೂ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರ ಬಿಜೆಪಪಿ ಸರ್ಕಾರ ಸುಮಾರು ನಾಲ್ಕು ಸಾವಿರ ಕೋಟಿ ರೂ. ಅನುದಾನವನ್ನು ನೀಡಿದೆ. ಈ ಕುರಿತು ಮಾತನಾಡಿರುವ ಸುಮಲತಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಅನುದಾನದಿಂದ ಮಂಡ್ಯದ ಅಭಿವೃದ್ದಿಯಾಗಿದೆ ಎಂದು ಹೊಗಳಿದ್ದಾರೆ. ಇದು ಕೂಡ ಸುಮಲತಾ ಅಂಬರೀಶ್ ಅವರು ಬಿಜೆಪಿ ಕಡೆ ಆಕರ್ಷಿತರಾಗಲು ಪ್ರಮುಖ ಕಾರಣವಾಗಿದೆ.
ಕಾಂಗ್ರೆಸ್ನವರೇ ನನ್ನ ಬೇಡ ಎಂದು ಹೇಳಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮುನ್ನ ಕಾಂಗ್ರೆಸ್ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದರು. ಆದರೆ, ಟಿಕೆಟ್ ನೀಡಲು ಕಾಂಗ್ರೆಸ್ ನಿರಾಕರಿಸಿತ್ತು. ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ಮಂಡ್ಯ ಕ್ಷೇತ್ರವನ್ನ ಕಾಂಗ್ರೆಸ್‌ನವರು ಜೆಡಿಎಸ್ ಗೆ ಬಿಟ್ಟು ಕೊಟ್ಟಿದ್ದರು. ಹೀಗಾಗಿ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ಕೈ ತಪ್ಪಿತ್ತು. ಅಲ್ಲದೇ ಈ ಬಾರಿಯೂ ಬಿಜೆಪಿಯಿಂದ ಸುಮಲತಾ ಅವರಿಗೆ ಟಿಕೆಟ್ ಕೈ ತಪ್ಪುತ್ತೇ ಎನ್ನುವುದು ಗೊತ್ತಿತ್ತು. ಆದರೆ, ಕಾಂಗ್ರೆಸ್ ನ ಪ್ರಮುಖ ನಾಯಕರೊಬ್ಬರು ಸುಮಲತಾ ಅವಶ್ಯಕತೆ ನಮಗಿಲ್ಲ ಎಂದು ಹೇಳಿದ್ದು, ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಗೌವರ
ದೇಶದ ಪ್ರಧಾನಿ ನರೇಂದ್ರ ಮೋದಿ ಪ್ರತಿ ವಿಚಾರದಲ್ಲೂ ನನ್ನ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ ಎಂದು ಬುಧವಾರ ನಡೆದ ಬೆಂಬಲಿಗರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನ ಸುಮಲತಾ ಅವರು ಹಾಡಿ ಹೊಗಳಿದ್ದಾರೆ. 2019 ರಲ್ಲಿ ಬಿಜೆಪಿ ನನಗೆ ಬಾಹ್ಯ ಬೆಂಬಲ ನೀಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ರು. ಅಲ್ಲದೇ , 2023 ವಿಧಾನಸಭಾ ಚುನಾವಣೆಯಲ್ಲಿ ನಾನು ಬಾಹ್ಯ ಬೆಂಬಲ ಕೊಟ್ಟು ನಾನು ಪ್ರಚಾರ ಮಾಡಿದೆ. ಯಾವುದೇ ವಿಚಾರದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ತಿರ್ಮಾನವನ್ನ ಮಾಡುತ್ತಾರೆ ಎಂದು ಸುಮಲತಾ ಹೇಳಿದ್ದು, ಇದು ಸಹ ಬಿಜೆಪಿ ಸೇರ್ಪಡೆಗೆ ಪ್ರಮುಖ ಕಾರಣವಾಗಿದೆ.
ಬಿಜೆಪಿ ಪಕ್ಷದಲ್ಲಿ ಉಜ್ವಲ ಭವಿಷ್ಯವಿದೆ
ಈ ಬಾರಿ ಮಂಡ್ಯ ಕ್ಷೇತ್ರವನ್ನ ಜೆಡಿಎಸ್ ಗೆ ಬಿಟ್ಟು ಕೊಟ್ಟಿದ್ದರಿಂದ ಸುಮಲತಾ ಅಂಬರೀಶ್ ಅವರಿಗೆ ಮುಂದಿನ ದಿನಗಳಲ್ಲಿ ರಾಜ್ಯಸಭೆ ಸ್ಥಾನವನ್ನ ನೀಡುವ ಭರವಸೆಯನ್ನ ಬಿಜೆಪಿ ಹೈಕಮಾಂಡ್ ನೀಡಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಇನ್ನೂ ಸುಮಲತಾ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರ ರಾಜಕೀಯ ಭವಿಷ್ಯವನ್ನ ರೂಪಿಸುವ ನಿಟ್ಟಿನಲ್ಲಿ ಬಿಜೆಪಿ ನಾಯಕರ ಜೊತೆ ಚರ್ಚೆಯಾಗಿದೆ. ಮಂಡ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಅವರ ಪುತ್ರನಿಗೂ ಟಿಕೆಟ್ ನೀಡಬಹುದು ಎನ್ನಲಾಗಿದೆ. ಹೀಗಾಗಿ ಬಿಜೆಪಿ ಪಕ್ಷ ಸೇರ್ಪಡೆಯಿಂದ ಉಜ್ವಲ ಭವಿಷ್ಯವಿದೆ.












Click it and Unblock the Notifications