ಡಿಸಿಎಂ, ಸಿಎಂ ಅಯೋಗ್ಯರು ಎಂದ ಸದಾನಂದ ಗೌಡ : ಡಿ ಕೆ ಶಿವಕುಮಾರ್ ಏನಂದ್ರು?
ಶಿವಮೊಗ್ಗ, ಏಪ್ರಿಲ್ 16: ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅಯೋಗ್ಯರು ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡರು ಹೇಳಿದ್ದು, ಸದಾನಂದಗೌಡರು ಹಿರಿಯರು ನನ್ನ ಅಯೋಗ್ಯ ಎಂದು ಕರೆಯಲಿ. ಆದರೆ ಅವರು ಸಂಸದರಾಗಿ ಏನು ಕೆಲಸ ಮಾಡಿದ್ದಾರೆ. ಬರಪರಿಹಾರ, ನಮ್ಮ ಪಾಲಿನ ನೀರಿನ ಬಗ್ಗೆ ಪ್ರಧಾನಿಗಳ ಬಳಿ ಕೇಳಿದ್ದಾರಾ? ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬಿಜೆಪಿ ಜೊತೆ ಕಾಂಗ್ರೆಸ್ ಸೇರಿಕೊಂಡಿದೆ ಎನ್ನುವ ಈಶ್ವರಪ್ಪ ಆರೋಪದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈಶ್ವರಪ್ಪ ಅವರ ಮಾತಿನ ಬಗ್ಗೆ ಮುಂದಕ್ಕೆ ಮಾತನಾಡುತ್ತೇನೆ. ಈಗ ಶಿವಮೊಗ್ಗದಲ್ಲಿ ಗೀತಕ್ಕನ ಕಾವು ಶುರುವಾಗಿದೆ. ಅವರ ಸುದ್ದಿಗೆ ನಾನು ಹೋಗುವುದಿಲ್ಲ. ಈಗ ಮಳೆ ಬಂದಿದ್ದು ಕಾವು ಎದ್ದ ನಂತರ ಅವರ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.
ಭದ್ರಾವತಿ ಎಂಪಿಎಂ ರಾಜ್ಯಸರ್ಕಾರದ ಅಡಿಯಲ್ಲಿ ಬರುತ್ತದೆ ಇನ್ನೂ ಅಭಿವೃದ್ಧಿ ಮಾಡಬಹುದಲ್ಲವೇ ಎಂಬ ಪ್ರಶ್ನೆ ಕುರಿತು ಮಾತನಾಡಿ, ಇದರ ಬಗ್ಗೆ ಈಗಾಗಲೇ ಚರ್ಚೆಯಾಗಿದ್ದು, ಉದ್ಯೋಗ ಸೃಷ್ಟಿಗೆ ಕೈಗಾರಿಕಾ ಮಂತ್ರಿಗಳು ಕ್ರಮ ತೆಗೆದುಕೊಳ್ಳುತ್ತಾರೆ. ಅರಗ ಜ್ಞಾನೇಂದ್ರ ಕಾರ್ಖಾನೆ ಅಭಿವೃದ್ಧಿಗೆ 500 ಕೋಟಿ ತೆಗೆದುಕೊಂಡು ಗೋವಿಂದ ಎಂದಿದ್ದಾರೆ. ನಮ್ಮ ಶಾಸಕ ಸಂಗಮೇಶ್ ಅವರು ಸಚಿವರ ಬಳಿ ಮಾತನಾಡಿ ಅಭಿವೃದ್ಧಿಗೆ ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ಮನವರಿಕೆ ಮಾಡಿದ್ದಾರೆ.

ಬಿ.ವೈ.ರಾಘವೇಂದ್ರ ಅವರೇ ರಾಜ್ಯದ ಪರವಾಗಿ ಒಂದೇ ಒಂದು ಕೆಲಸ ಮಾಡಿದ್ದೀರಾ? ಬರಗಾಲಕ್ಕೆ ದುಡ್ಡು ಕೇಳಿದ್ದೀರಾ. ಒಂದೇ ಒಂದು ಸಂಸತ್ ಸದನದಲ್ಲಿ ಮಾತನಾಡಲಿಲ್ಲ. ಏಕೆ ಜನ ನಿಮಗೆ ಮತ ಹಾಕಬೇಕು. ಬಿಜೆಪಿಯ ಹಾಲಿ ಸಂಸದನೊಬ್ಬ 400 ಸ್ಥಾನ ಕೊಡಿ ಸಂವಿಧಾನ ಬದಲಾವಣೆ ಮಾಡುತ್ತೇನೆ ಎಂದು ಹೇಳಿದ್ದರು. ಇದಕ್ಕೆ ಜನರ ಆಕ್ರೋಶ ವ್ಯಕ್ತವಾದ ಮೇಲೆ ಸಂವಿಧಾನ ಉಳಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಈತನನ್ನು ಬಿಜೆಪಿ ಇನ್ನೂ ಪಕ್ಷದಿಂದ ಉಚ್ಚಾಟಿಸದೆ ಇಟ್ಟುಕೊಂಡಿದೆ.
ಕಪ್ಪುಹಣ ತರುತ್ತೇವೆ, ಉದ್ಯೋಗ ಕೊಡುತ್ತೇವೆ, ರೈತರ ಆದಾಯ ಡಬಲ್ ಆಗುತ್ತೇ ಎಂದವರು ಕಾಣೆಯಾಗಿದ್ದಾರೆ. ಜನಧನ್ ಖಾತೆಯನ್ನು ಎಲ್ಲರ ಬಳಿ ತೆರೆಸಿದರು. ಆ ಖಾತೆಗೆ ಒಂದೇ ಒಂದು ರುಪಾಯಿ ಬರಲಿಲ್ಲ. ಉದ್ಯೋಗ ಕೊಡಲಿಲ್ಲ. ಪರಿಸ್ಥಿತಿ ಹೀಗಿದ್ದಾಗ ಜನ ಮತ ಹಾಕುತಾರೆಯೇ ಬಿಜೆಪಿಗೆ. ಇದು ಬಸವಣ್ಣನ ನಾಡು, ನಮ್ಮ ಧರ್ಮ, ಸಂಸ್ಕೃತಿಯೇ ಈ ದೇಶದ ಜೀವಾಳ. ಸ್ವಾತಂತ್ರ್ಯ ಬಂದಾಗಿನಿಂದ ನಮ್ಮ ಪಕ್ಷ ದೇಶದ, ರಾಜ್ಯದ ಏಳಿಗೆಗೆ ಕೆಲಸ ಮಾಡುತ್ತಿದೆ. ಬಿಜೆಪಿ ಅಭಿವೃದ್ಧಿ ವಿಚಾರದಲ್ಲಿ ಏನೂ ಮಾಡಿಲ್ಲ. ಬಿಜೆಪಿಯವರು ಮತ ಕೇಳುವುದೇ ತಪ್ಪು, ಚುನಾವಣೆಗೆ ನಿಂತಿರುವುದೇ ತಪ್ಪು.
ಅಕ್ಬರ್ ತನ್ನ ಆಸ್ಥಾನದಲ್ಲಿದ್ದ ಬೀರ್ ಬಲ್ ಗೆ ಕೇಳುತ್ತಾರೆ. ಸತ್ಯಕ್ಕೂ ಸುಳ್ಳಿಗೂ ಇರುವ ಅಂತರವೆಷ್ಟು ಎಂದು. ಅದಕ್ಕೆ ಬೀರ್ ಬಲ್ ಕೇವಲ ನಾಲ್ಕು ಬೆರಳಿನ ಅಂತರ ಎಂದು ಹೇಳುತ್ತಾನೆ. ಹೇಗೆ ಎಂದು ಕೇಳಿದಾಗ, ನಾವು ಕಣ್ಣಲ್ಲಿ ನೋಡುವುದು ಸತ್ಯ, ಕಿವಿಯಲ್ಲಿ ಕೇಳುವುದು ಸುಳ್ಳು. ಇವೆರಡರ ನಡುವೆ ಇರುವುದು ನಾಲ್ಕು ಬೆರಳಿನ ಅಂತರ. ಅದೇ ರೀತಿ ನೀವು ನಮ್ಮ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿರುವುದನ್ನು ಕಣ್ಣಾರೆ ನೋಡಬಹುದು. ಆದರೆ ಬಿಜೆಪಿಯವರ ಭರವಸೆಗಳನ್ನು ಕೇವಲ ಕಿವಿಯಲ್ಲಿ ಮಾತ್ರ ಕೇಳಬಹುದು. ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ. ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ವಿದ್ಯಾನಿಧಿ, ಅನ್ನಭಾಗ್ಯ ಯೋಜನೆಗಳು ರಾಜ್ಯದ ಮಕ್ಕಾಲುಪಾಲು ಜನರಿಗೆ ತಲುಪಿವೆ.
ಯಾವುದೇ ದೇವರ ಹೆಸರು ಹೇಳುವಾಗ ಹೆಣ್ಣು ದೇವರನ್ನು ನೆನಪಿಸಿಕೊಂಡು ಮುನ್ನಡೆಯುತ್ತೇವೆ. ಇದು ಭಾರತೀಯ ಸಂಸ್ಕೃತಿ. ಕಾಂಗ್ರೆಸ್ ಸರ್ಕಾರ ರಾಜ್ಯದ ಹೆಣ್ಣುಮಕ್ಕಳು ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ನೀಡಿದರೆ ಹೀಯಾಳಿಸುವುದು ನಿಮ್ಮ ಕೀಳು ಸಂಸ್ಕೃತಿ. ಅತ್ತೆ, ಸೊಸೆಯ ಮದ್ಯೆ ಕಾಂಗ್ರೆಸ್ ಜಗಳ ತಂದಿಟ್ಟಿದೆ ಎಂದು ಸುನೀಲ್ ಕುಮಾರ್ ಹೇಳಿದ್ದರು. ಒಂದೇ ಒಂದು ಕಾಳು ಕಮ್ಮಿ ಕೊಟ್ಟರು ನಾನು ಸುಮ್ಮನೆ ಇರುವುದಿಲಲ್ ಎಂದು ಯಡಿಯೂರಪ್ಪ ಅವರು ಹೇಳಿದ್ದರು. ಯಡಿಯೂರಪ್ಪ ಅವರು ಅಕ್ಕಿ ಕೊಡಿಸಬೇಕಿತ್ತು. ಅರಗ ಜ್ಞಾನೇಂದ್ರನಿಗೆ ಜ್ಞಾನವೇ ಇಲ್ಲ ಎಂದರು.












Click it and Unblock the Notifications