ಬೆಂಗಳೂರಿನ ಈ ಮೂರು ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಾಗಿ ಕಾಂಗ್ರೆಸ್ ಹುಡುಕಾಟ- ಯಾರಿಗೆ ಸಿಗಲಿದೆ ಅವಕಾಶ?
ಬೆಂಗಳೂರು, ಮಾರ್ಚ್ 13: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ ನಡೆಸುತ್ತಿದೆ. ಕರ್ನಾಟಕದ ಏಳು ಕ್ಷೇತ್ರಗಳ ಅಭ್ಯರ್ಥಿಗಳನ್ನ ಕಾಂಗ್ರೆಸ್ ಹೈಕಮಾಂಡ್ ಪೈನಲ್ ಮಾಡಿದ್ದು, ಉಳಿದ 21 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳ ಹೆಸರನ್ನ ಅಂತಿಮಗೊಳಿಸಿದ್ದು, ಉಳಿದ ಕ್ಷೇತ್ರಗಳೇ ದೊಡ್ಡ ತಲೆನೋವಾಗಿದೆ.
ಹೌದು, ಸೋಮವಾರ ತಡರಾತ್ರಿ ಕಾಂಗ್ರೆಸ್ ಸಮಿತಿ ಸಭೆ ನಡೆಸಿದ್ದು, ಬೆಂಗಳೂರು ವ್ಯಾಪ್ತಿಯ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ಆಯ್ಕೆ ಮಾಡುವುದೇ ಕಾಂಗ್ರೆಸ್ ಗೆ ದೊಡ್ಡ ಸವಾಲ್ ಆಗಿದೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಕೇಂದ್ರ ಕ್ಷೇತ್ರಗಳಲ್ಲಿ ಅಭ್ಯರ್ಥಿಯ ಹೆಸರನ್ನ ಅಂತಿಮಗೊಳಿಸುವುದು ಕೈ ನಾಯಕರಿಗೆ ದೊಡ್ಡ ತಲೆನೋವಾಗಿದೆ. ಈ ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ
1991 ರಿಂದ ಬಿಜೆಪಿ ಹಿಡಿತದಲ್ಲಿರುವ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಲು ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ, ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಅವರನ್ನು ಮನವೊಲಿಸಲು ಪಕ್ಷವು ಪ್ರಯತ್ನಿಸುತ್ತಿದೆ. ಹಲವು ವರ್ಷಗಳಿಂದ ಬಿಜೆಪಿ ತನ್ನ ಭದ್ರಕೋಟೆಯಾಗಿರುವ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಾಂಗ್ರೆಸ್ ಹರಸಾಹಸ ಮಾಡುತ್ತಿದೆ. ಕಾಂಗ್ರೆಸ್‌ನ ಆಂತರಿಕ ಸಮೀಕ್ಷೆ ಸೌಮ್ಯ ಅವರಿಗೆ ಟಿಕೆಟ್‌ಗಾಗಿ ಒಲವು ತೋರುತ್ತಿದೆ.
ಮೂಲಗಳ ಪ್ರಕಾರ, ಸೋಮವಾರ ಸಂಜೆ ನಡೆಯಲಿರುವ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಗೆ ಹಾಜರಾಗುವಂತೆ ಸಚಿವ ರಾಮಲಿಂಗಾ ರೆಡ್ಡಿಗೆ ತಿಳಿಸಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಇತರ ಸಮಿತಿಯ ಸದಸ್ಯರು ಸೌಮ್ಯ ಅವರನ್ನು ಕಣಕ್ಕಿಳಿಸುವ ಬಗ್ಗೆ ರೆಡ್ಡಿ ಅವರ ಅಭಿಪ್ರಾಯವನ್ನು ಕೇಳಿದ್ದಾರೆ.
ಇನ್ನೂ ಕಾಂಗ್ರೆಸ್ ನಾಯಕರ ಮಾತಿಗೆ ಸ್ವಲ್ಪ ಕಾಲಾವಕಾಶ ಕೋರಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ರಾಮಲಿಂಗಾ ರೆಡ್ಡಿ ಅವರು ಬುಧವಾರ ಬೆಂಗಳೂರು ದಕ್ಷಿಣ ಭಾಗದ ಮುಖಂಡರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಮಗಳನ್ನು ಕಣಕ್ಕಿಳಿಸುವ ಬಗ್ಗೆಯೂ ಹಿರಿಯ ಸಚಿವರು ಎಚ್ಚರಿಕೆ ವಹಿಸಿದ್ದಾರೆ ಎನ್ನಲಾಗಿದೆ.
ಜಯನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಸೌಮ್ಯಾ ರೆಡ್ಡಿ ಅವರು 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸಿಕೆ ರಾಮಮೂರ್ತಿ ವಿರುದ್ಧ 16 ಮತಗಳಿಂದ ಸೋತಿದ್ದರು. ಸೌಮ್ಯಾ ರೆಡ್ಡಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪದಿದ್ದರೆ, ಗೋವಿಂದರಾಜನಗರ ಶಾಸಕ ಪ್ರಿಯಾ ಕೃಷ್ಣ, ಪಕ್ಷದ ವಕ್ತಾರ ನಿಕೇತ್ ರಾಜ್ ಮೌರ್ಯ ಮತ್ತು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಚಾರದ ಮಾಜಿ ಮುಖ್ಯಸ್ಥ ವೈ ಬಿ ಶ್ರೀವತ್ಸ ಅವರನ್ನು ಕಾಂಗ್ರೆಸ್ ಪರಿಗಣಿಸಬಹುದು ಎಂದು ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ
ಬಿಜೆಪಿಯ ಭದ್ರಕೋಟೆಯಾದ ಬೆಂಗಳೂರು ಉತ್ತರದಿಂದ ಸಮರ್ಥ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಕಾಂಗ್ರೆಸ್ ಉತ್ತಮ ಅಭ್ಯರ್ಥಿಗಾಗಿ ಶೋಧ ಕಾರ್ಯ ನಡೆಸಿದೆ. ಬೆಂಗಳೂರು ಉತ್ತರದಿಂದ ಕುಸುಮಾ ಹನುಮಂತರಾಯಪ್ಪ ಅವರಿಗೆ ಟಿಕೆಟ್ ನೀಡಲು ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಇತರ ನಾಯಕರು ಮುಂದಾಗಿದ್ದರು.ಈಗಾಗಲೇ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೇನೆ. ಗೆದ್ದರೆ ಸಮಸ್ಯೆ ಇಲ್ಲ. ಸೋಲು ಕಂಡರೆ ಮತ್ತೊಮ್ಮೆ ಆ ಹಣೆಪಟ್ಟಿ ಹೊರಬೇಕಾಗುತ್ತದೆ' ಎಂಬ ಕಾರಣಕ್ಕೆ ಕಣಕ್ಕಿಳಿಯಲು ಕುಸುಮಾ ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇನ್ನೂ ಆರ್‌ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕುಸುಮಾ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಅದನ್ನು ಬಿಟ್ಟು ಉತ್ತರ ಲೋಕಸಭಾ ಕ್ಷೇತ್ರ ಯಾಕೆ? ಎನ್ನುವ ಪ್ರಶ್ನೆ ಉದ್ಭವಿಸಿದ್ದು, ಸಚಿವ ಕೃಷ್ಣ ಬೈರೇಗೌಡ ಅವರನ್ನ ಕಣಕ್ಕಳಿಸಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ರೆ, ಈ ಕ್ಷೇತ್ರದಿಂದ ಸ್ಪರ್ಧೆಗೆ ಕೃಷ್ಣ ಬೈರೇಗೌಡರು ಹಿಂದೇಟು ಹಾಕುತ್ತಿದ್ದಾರೆ. ಬೆಂಗಳೂರು ಉತ್ತರಕ್ಕೆ ಪಕ್ಷವು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಎಂವಿ ರಾಜೀವ್ ಗೌಡ ಮತ್ತು ಒಕ್ಕಲಿಗರಾದ ಪ್ರಿಯಾ ಕೃಷ್ಣ ಅವರನ್ನು ಪರಿಗಣಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಶಾಂತಿ ನಗರ ಶಾಸಕ ಎನ್.ಎ. ಹ್ಯಾರಿಸ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್ ನಾಯಕರು ಅಸಕ್ತಿ ತೋರಿಸಿದ್ದಾರೆ. ಆದರೆ, ಹ್ಯಾರಿಸ್ ಕೂಡಾ ಅಖಾಡಕ್ಕೆ ಇಳಿಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳಿದರು. ಒಟ್ನಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕರಿಗೆ ಅಭ್ಯರ್ಥಿಗಳ ಆಯ್ಕೆ ದೊಡ್ಡ ಸವಾಲ್ ಆಗಿದ್ದು, ಯಾರಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕುತ್ತೇ ಎಂಬುದನ್ನ ಕಾದುನೋಡ್ಬೇಕಾಗಿದೆ.












Click it and Unblock the Notifications