ಇದೇ ಪ್ರಜಾಪ್ರಭುತ್ವದ ಸೌಂದರ್ಯ: ಸೋಲು ಸ್ವೀಕರಿಸಿದ ಸಿದ್ದರಾಮಯ್ಯ
ಬೆಂಗಳೂರು, ಮೇ 23: ಈ ಬಾರಿಯ ಲೋಕಸಭೆ ಚುನಾವಣೆ ಕರ್ನಾಟಕದಲ್ಲಿ ಆಡಳಿತಾರೂಢ ಸಮ್ಮಿಶ್ರ ಸರ್ಕಾರ ಮತ್ತು ವಿರೋಧಪಕ್ಷ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಉಳಿದಿರಲಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ವೈಯಕ್ತಿಕವಾಗಿ ಇದು ಪ್ರತಿಷ್ಠೆಯಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿಯೇ ಸೋಲು ಅನುಭವಿಸಿ ಮುಖಭಂಗಕ್ಕೊಳಗಾಗಿದ್ದ ಸಿದ್ದರಾಮಯ್ಯ, ಲೋಕಸಭೆ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳ ಗೆಲುವು ಸಾಧಿಸುವ ಮೂಲಕ ಮತ್ತೆ ಬೀಗುವ ನಿರೀಕ್ಷೆ ಹೊಂದಿದ್ದರು.
ಆದರೆ, ಅವರ ಬಯಕೆ ಹಾಗೂ ನಿರೀಕ್ಷೆಗಳು ಹುಸಿಗೊಂಡಿವೆ. ಸಿದ್ದರಾಮಯ್ಯ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಮುಖ್ಯವಾಗಿ ಅವರ ಆಪ್ತರ ಬಳಗದಲ್ಲಿರುವ ಅಭ್ಯರ್ಥಿಗಳು ಕೂಡ ಹೀನಾಯ ಸೋಲು ಅನುಭವಿಸಿದ್ದಾರೆ. ಅವರ ತವರು ಕ್ಷೇತ್ರ ಮೈಸೂರಿನಲ್ಲಿ ಕೂಡ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಈ ಸೋಲನ್ನು ವಿನಯಪೂರ್ವಕವಾಗಿ ಸ್ವೀಕರಿಸಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ ಸೋಲನ್ನು ಅವರು ಸಹಜವಾಗಿ ಸ್ವೀಕರಿಸಿರುವುದಾಗಿ ಅವರು ತಿಳಿಸಿದ್ದಾರೆ. ಅದನ್ನು ಪ್ರಜಾಪ್ರಭುತ್ವದ ಸೌಂದರ್ಯ ಎಂದೂ ಅವರು ಕರೆದಿದ್ದಾರೆ.
ಚುನಾವಣೆಯಲ್ಲಿ ಅಮೋಘ ಗೆಲುವು ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿರುವ ಸಿದ್ದರಾಮಯ್ಯ, ಜನರು ಮೆಚ್ಚುವ ಆಡಳಿತ ನೀಡುವಂತೆ ಕೋರಿದ್ದಾರೆ.
|
ಪ್ರಜಾಪ್ರಭುತ್ವದ ಸೌಂದರ್ಯ
ಸೋಲು-ಗೆಲುವುಗಳು ರಾಜಕೀಯ ಜೀವನದ ಅವಿಭಾಜ್ಯ ಅಂಗ. ಇದೇ ಪ್ರಜಾಪ್ರಭುತ್ವದ ಸೌಂದರ್ಯ. ನಮ್ಮ ಪಕ್ಷದ ಸೋಲು ಅನಿರೀಕ್ಷಿತವಾಗಿದ್ದರೂ ಜನಾಭಿಪ್ರಾಯಕ್ಕೆ ತಲೆ ಬಾಗಿ ವಿನಯಪೂರ್ವಕವಾಗಿ ಸ್ವೀಕರಿಸಿದ್ದೇವೆ. ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿದ ಮತದಾರ ಬಂಧುಗಳಿಗೆ ಅಭಿನಂದನೆಗಳು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
|
ರಾಜ್ಯದ ಪರವಾಗಿ ಕೆಲಸ ಮಾಡಲಿ
ರಾಜ್ಯದಿಂದ ಆಯ್ಕೆಯಾದ ಎಲ್ಲ ಸಂಸದರೂ ಚುನಾವಣೆ ಮುಗಿದ ಮೇಲೆ ಪಕ್ಷಾತೀತವಾಗಿ ನಮ್ಮ ರಾಜ್ಯದ ಪ್ರತಿನಿಧಿಗಳಾಗಿರುತ್ತಾರೆ. ಅವರೆಲ್ಲರಿಗೂ ಅಭಿನಂದನೆಗಳು. ಲೋಕಸಭೆಯಲ್ಲಿ ರಾಜ್ಯದ ದನಿ ಕೇಳಿಸುವಂತೆ ಮತ್ತು ಹಿತರಕ್ಷಿಸುವಂತೆ ಅವರೆಲ್ಲರೂ ಕೆಲಸ ಮಾಡಲಿ ಎಂದು ಹಾರೈಸುತ್ತೇನೆ.

ಜನರ ತೀರ್ಪು ರಾಜ್ಯ ಸರ್ಕಾರಕ್ಕಲ್ಲ
ಸೋಲಿನ ಬಗ್ಗೆ ಎಲ್ಲ ಜಿಲ್ಲೆಗಳಿಂದ ಮಾಹಿತಿ ತರಿಸಿಕೊಂಡು ಚರ್ಚೆ ನಡೆಸಬೇಕು. ವರದಿ ಬಂದ ಬಳಿಕ ವಿಶ್ಲೇಷಣೆ ಮಾಡುತ್ತೇವೆ. ಕೇಂದ್ರದಲ್ಲಿ ಯಾರು ಸರ್ಕಾರ ಮಾಡಬೇಕು ಎಂದು ಮತ ಕೊಟ್ಟಿದ್ದಾರೆ, ಕರ್ನಾಟಕದಲ್ಲಿ ಯಾರು ಸರ್ಕಾರ ರಚಿಸಬೇಕು ಎಂದು ಮತ ಕೊಟ್ಟಿದ್ದಾರೆ. ಜನರ ತೀರ್ಪು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ, ಕೇಂದ್ರ ಸರ್ಕಾರಕ್ಕೆ. ರಾಜ್ಯ ಕಾಂಗ್ರೆಸ್‌ನಲ್ಲಿ ಅಸಮಾಧಾನಗೊಂಡವರು ಯಾರಿದ್ದಾರೆ. ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಡೊಲ್ಲ. ಸೋತವರಲ್ಲಿ ಹಿರಿಯ ನಾಯಕರು ಯಾರೇ ಆಗಲಿ, ಜನರ ತೀರ್ಪು ಒಪ್ಪಿಕೊಳ್ಳಬೇಕು. ಇದರ ಬಗ್ಗೆ ಆತ್ಮಾವಲೋಕನ ಮಾಡುತ್ತೇವೆ. ಮೋದಿ ವರ್ಚಸ್ಸು, ಕಾಂಗ್ರೆಸ್‌ನ ದೌರ್ಬಲ್ಯದ ಬಗ್ಗೆ ಈಗ ಹೇಳುವುದಿಲ್ಲ ಎಂದರು.
|
ನರೇಂದ್ರ ಮೋದಿಗೆ ಅಭಿನಂದನೆ
ಈ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಮತ್ತು ಮುಖ್ಯಪಾತ್ರ ವಹಿಸಿದ್ದ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಮುಂದಿನ ಐದು ವರ್ಷ ಜನ ಮೆಚ್ಚುವಂತಹ, ಇಡೀ ದೇಶವನ್ನು ಕುವೆಂಪು ಅವರು ಹೇಳಿರುವಂತೆ ''ಸರ್ವಜನಾಂಗದ ಶಾಂತಿಯ ತೋಟ''ವನ್ನಾಗಿ ಮಾಡುವ ರೀತಿಯಲ್ಲಿ ಆಡಳಿತ ನೀಡಲಿ ಎಂದು ಹಾರೈಸುತ್ತೇನೆ.

ಜನರ ತೀರ್ಪು ಒಪ್ಪಿಕೊಳ್ಳಲೇಬೇಕು
ಚುನಾವಣೆಯಲ್ಲಿ ಜನರ ತೀರ್ಪನ್ನು ಒಪ್ಪಿಕೊಳ್ಳಲೇಬೇಕು. ಬಿಜೆಪಿಗೆ ಹೆಚ್ಚು ಸ್ಥಾನಗಳು ಕರ್ನಾಟಕದಲ್ಲಿ ಮಾತ್ರವಲ್ಲ ಎಲ್ಲಡೆ ಹೆಚ್ಚು ಸ್ಥಾನಗಳು ಬಂದಿವೆ. ಜನರ ತೀರ್ಪನ್ನು ತಲೆಬಾಗಿ ಒಪ್ಪಿಕೊಳ್ಳಬೇಕು. ಅದನ್ನು ನಿರಾಕರಿಸುವ ಪ್ರಶ್ನೆಯೇ ಇಲ್ಲ. ಬಿಜೆಪಿಗೆ ಸುಮಾರು ಶೇ 56 ಬಿಜೆಪಿಗೆ ಹಾಕಿದ್ದಾರೆ. ಶೇ 40ರಷ್ಟು ಜನರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ, ಆ ಎಲ್ಲ ಜನರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.












Click it and Unblock the Notifications