ಲೋಕಸಭಾ ಚುನಾವಣೆ: ಕರ್ನಾಟಕದ ಮೇಲೆ ಕೈ-ಕಮಲ ಹೈಕಮಾಂಡ್ ಕಣ್ಣು!
ಬೆಂಗಳೂರು, ಜನವರಿ 16: ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಹೊರತು ಪಡಿಸಿದರೆ ಉಳಿದ ಯಾವ ರಾಜ್ಯದಲ್ಲಿಯೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ಮರೀಚಿಕೆಯಾಗಿದೆ. ಹೀಗಾಗಿ ಎರಡು ಪಕ್ಷಗಳ ಕಣ್ಣು ಕರ್ನಾಟಕದ ಮೇಲಿದ್ದು, ಇಲ್ಲಿನ ನಾಯಕರಿಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿಕೊಡುವಂತೆ ಕೇಂದ್ರದ ನಾಯಕರು ದುಂಬಾಲು ಬಿದ್ದಿರುವುದು ಎದ್ದು ಕಾಣಿಸುತ್ತಿದೆ.
ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಹೊರತುಪಡಿಸಿದರೆ ಉಳಿದ ರಾಜ್ಯಗಳಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಪಡೆಯುವುದು ಸಾಧ್ಯವಾಗದ ಮಾತಾಗಿದೆ. ಕಾಂಗ್ರೆಸ್ ತೆಲಂಗಾಣದಲ್ಲಿ ಅಧಿಕಾರ ಹಿಡಿದ ಕಾರಣದಿಂದ ಅಲ್ಲೊಂದಷ್ಟು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಮಾಡಬಹುದಾಗಿದೆ. ಉಳಿದಂತೆ ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲಿ ಹೆಚ್ಚಿನ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಜತೆಗೆ ಐಎನ್ ಡಿಐಎ (ಇಂಡಿಯಾ) ಒಕ್ಕೂಟದಲ್ಲಿರುವ ಕಾರಣ ಧೈರ್ಯ ಬಂದಿದೆ. ಅದರಲ್ಲೂ ತಮಿಳುನಾಡಿನಲ್ಲಿ ಆಡಳಿತದಲ್ಲಿರುವ ಡಿಎಂಕೆ ಇಂಡಿಯಾ ಒಕ್ಕೂಟಕ್ಕೆ ಬೆಂಬಲ ನೀಡುತ್ತಿರುವುದರಿಂದ ಕಾಂಗ್ರೆಸ್ ಗೆ ಅಲ್ಲಿ ಯಾವುದೇ ಭಯವಿಲ್ಲದಂತಾಗಿದೆ.

ಸದ್ಯಕ್ಕೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಂದರ್ಭ ಇಲ್ಲದಷ್ಟು, ಭಯ, ಆತಂಕ ಕಾಂಗ್ರೆಸ್ ಗೆ ಈಗ ಶುರುವಾಗಿದೆ. ಅದರಲ್ಲೂ ಪ್ರಭಾವಿ ನಾಯಕರೆನಿಸಿಕೊಂಡವರ ಎದೆ ಢವ ಢವ ಬಡಿದುಕೊಳ್ಳಲಾರಂಭಿಸಿದೆ. 135 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿರುವ ಕಾಂಗ್ರೆಸ್ ನಿಂದ ಹೈಕಮಾಂಡ್ 20 ಸ್ಥಾನಗಳನ್ನು ನಿರೀಕ್ಷೆ ಮಾಡುತ್ತಿದೆ. ಸದ್ಯ ಒಂದು ಸ್ಥಾನ ಹೊಂದಿರುವ ಕಾಂಗ್ರೆಸ್ ಗೆ ಅದಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದರೆ ಅದನ್ನು ಸಾಧನೆ ಎಂದೇ ಪರಿಗಣಿಸಬಹುದಿತ್ತು. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಿಂದ ಹೈಕಮಾಂಡ್ ಕನಿಷ್ಟ 20 ಸ್ಥಾನಗಳನ್ನು ನಿರೀಕ್ಷಿಸುತ್ತಿದೆ. ಅಷ್ಟೇ ಅಲ್ಲದೆ ಅಷ್ಟು ಸ್ಥಾನಗಳನ್ನು ಗೆದ್ದುಕೊಂಡು ಬರಲೇ ಬೇಕೆಂಬ ಸೂಚನೆಯನ್ನು ನೀಡಿರುವುದು ಸವಾಲ್ ಆಗಿ ಪರಿಣಮಿಸಿದೆ.
ಲೋಕಸಭಾ ಚುನಾವಣೆ ಅಷ್ಟು ಸುಲಭವಿಲ್ಲ
ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದಿರುವ ಕಾಂಗ್ರೆಸ್ ಗೆ ಲೋಕಸಭಾ ಚುನಾವಣೆ ಅಷ್ಟೊಂದು ಸುಲಭವಾಗಿ ಕಾಣುತ್ತಿಲ್ಲ. ವಿಧಾನಸಭಾ ಚುನಾವಣೆ ಸಂದರ್ಭ ರಾಜ್ಯ ಬಿಜೆಪಿ ನಾಯಕರ ದೌರ್ಬಲ್ಯಗಳು ಕಾಂಗ್ರೆಸ್ ನಾಯಕರಿಗೆ ಆಹಾರವಾಗಿದ್ದವು. ಅದನ್ನು ಹೇಗೆ ಬಡಿಸಬಹುದೋ ಹಾಗೆಲ್ಲ ಬಡಿಸಿ ಮತವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಲೋಕಸಭಾ ಚುನಾವಣೆ ಹಾಗಿಲ್ಲ. ಇದನ್ನು ವಿಧಾನಸಭಾ ಚುನಾವಣೆಯಂತೆ ನಡೆಸಲು ಸಾಧ್ಯವಿಲ್ಲ. ಸ್ಥಳೀಯವಾಗಿ ಅಂದರೆ ರಾಜ್ಯಮಟ್ಟದಲ್ಲಿ ಏನೇ ಯೋಜನೆ ತಂದರೂ ಅದರ ಬಗ್ಗೆ ಮತದಾರರು ತಲೆಕೆಡಿಸುವುದಿಲ್ಲ.

ರಾಜ್ಯ ಸರ್ಕಾರದ ಸಾಧನೆಯನ್ನು ನೋಡಿ ಮತನೀಡುವವರ ಸಂಖ್ಯೆಯೂ ಕಡಿಮೆ ಇರಲಿದೆ. ಇಲ್ಲಿ ಕೇಂದ್ರದ ಆಡಳಿತ ಹೇಗಿತ್ತು? ನಾಯಕತ್ವ ವಹಿಸಿದ್ದ ಪ್ರಧಾನಿಯ ಸಾಧನೆ ಹೇಗಿದೆ? ಎಂದು ಜನ ನೋಡುತ್ತಾರೆ. ಜತೆಗೆ ಈಗಿರುವ ಪ್ರಧಾನಿ ನರೇಂದ್ರಮೋದಿಗೆ ಪ್ರತಿಸ್ಪರ್ಧಿ ನಾಯಕ ಯಾರು? ನಾವು ಗೆಲ್ಲಿಸಿದರೆ ಮುಂದೆ ಪ್ರಧಾನಿ ಆಗುವವರು ಯಾರು? ಎಂಬ ಪ್ರಶ್ನೆಗಳನ್ನು ಕಾಂಗ್ರೆಸ್ ಗೆ ಜನ ಕೇಳುತ್ತಾರೆ. ಇವತ್ತಿನ ಪರಿಸ್ಥಿತಿಯಲ್ಲಿ ಮೊದಲು ಗೆಲ್ಲೋಣ ಆಮೇಲೆ ಪ್ರಧಾನಿ ಆಯ್ಕೆ ಬಗ್ಗೆ ಮಾತಾಡೋಣ ಎಂದು ಪಕ್ಷದೊಳಗಿನ ನಾಯಕರಿಗಷ್ಟೆ ಹೇಳಬಹುದು. ಆದರೆ ಮತದಾರರ ಮುಂದೆ ಹೋದಾಗ ಕಾಂಗ್ರೆಸ್ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಘೋಷಿಸಲೇ ಬೇಕಾಗುತ್ತದೆ.
ಬಿಜೆಪಿ ಉರುಳಿಸಲು ಕಾಂಗ್ರೆಸ್ ಪ್ಲಾನ್
ಸದ್ಯಕ್ಕೆ ಬಿಜೆಪಿ ಮೋದಿ ಅಲೆಯಲ್ಲಿ ತೇಲುತ್ತಿದ್ದು, ಮೋದಿಯನ್ನು ಮುಂದಿಟ್ಟುಕೊಂಡೇ ಚುನಾವಣೆಗೆ ನಾಯಕರು ಹೋಗುತ್ತಾರೆ. ಅವರು ಸ್ಥಳೀಯ ಸಂಸದರನ್ನು ಫೋಕಸ್ ಮಾಡುವುದಕ್ಕಿಂತ ಹೆಚ್ಚಾಗಿ ಮೋದಿಯನ್ನು ತೋರಿಸುತ್ತಾರೆ. ಅವರನ್ನು ನೋಡಿ ಮತನೀಡಿ ಎಂದು ಬಹಿರಂಗವಾಗಿಯೇ ಹೇಳುತ್ತಾರೆ. ಜತೆಗೆ ಹಿಂದುತ್ವದ ಜಪದೊಂದಿಗೆ ಕಾಂಗ್ರೆಸ್ ನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಏನೆಲ್ಲ ಮಾಡಬಹುದೋ ಅದೆಲ್ಲವನ್ನೂ ಅಚ್ಚು ಕಟ್ಟಾಗಿ ಮಾಡುವುದಂತು ನಿಜ. ಹೀಗಿರುವಾಗ ದ್ವಂದ್ವದಲ್ಲಿರುವ ಕಾಂಗ್ರೆಸ್ ಇದನ್ನು ಮೀರಿ ಏನು ಮಾಡಬೇಕು ಎಂಬುದನ್ನು ಯೋಚಿಸಬೇಕಾಗಿದೆ.

ಅಲ್ಪಸಂಖ್ಯಾತ ಮತಗಳು ಸಂಪೂರ್ಣವಾಗಿ ಕಾಂಗ್ರೆಸ್ಸಿಗೆ ಬಂದರೂ ಕೂಡ ಬಹುಸಂಖ್ಯಾತರ ಮತಗಳೂ ಕೂಡ ಬೇಕಾಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರು ನಿರೀಕ್ಷೆಗಿಂತ ಹೆಚ್ಚಿನ ಶ್ರಮ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ರಾಜ್ಯದಲ್ಲಿ ತರಲಾದ ಗ್ಯಾರಂಟಿ ಯೋಜನೆಗಳನ್ನು ಮೆಚ್ಚಿದ್ದಾರೆ ಎನ್ನುವುದಾದರೆ ಕಾಂಗ್ರೆಸ್ ಗೆದ್ದಂತೆಯೇ. ಆದರೆ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯನ್ನು ಮತದಾರರು ಪ್ರತ್ಯೇಕವಾಗಿ ನೋಡುತ್ತಾರೆ ಎನ್ನುವುದಾದರೆ ಇಲ್ಲಿ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಹೆಚ್ಚಿನ ಹೆಣಗಾಟ ನಡೆಸಲೇ ಬೇಕಾಗಿದೆ.

ಯಾರ ಪಾಲಿಗೆ ಕರ್ನಾಟಕದ ಗೆಲುವು
ಈ ಬಾರಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತಿದ್ದರೆ ಬಿಜೆಪಿ ಮಾತ್ರ ಜೆಡಿಎಸ್ ಜೊತೆಗೆ ಅಖಾಡಕ್ಕಿಳಿಯುತ್ತಿದೆ. ಇದರ ಲಾಭ ಬಿಜೆಪಿಗೋ ಕಾಂಗ್ರೆಸ್ಸಿಗೋ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಮೈತ್ರಿ ಪಕ್ಷಗಳಾಗಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ತಣ್ಣಗಿದ್ದಾರೆ. ಅಷ್ಟೇ ಅಲ್ಲದೆ ಅಯೋಧ್ಯೆಯತ್ತ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇಡೀ ದೇಶ ರಾಮನ ಗುಂಗಿನಲ್ಲಿದೆ. ಅದು ಮುಗಿದ ಬಳಿಕ ಚುನಾವಣಾ ಅಖಾಡಕ್ಕೆ ಧುಮುಕುವ ಸಾಧ್ಯತೆಯಿದೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಕಾಂಗ್ರೆಸ್‌ಗೆ ಈಗಿರುವ ಒಂದು ಸ್ಥಾನದಿಂದ ಜಿಗಿದು 20 ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿದ್ದರೆ, ಬಿಜೆಪಿ ಮತ್ತು ಜೆಡಿಎಸ್ ಸೇರಿ ಹಿಂದಿನ ಸ್ಥಾನಗಳನ್ನು ಉಳಿಸಿಕೊಳ್ಳಲೇ ಬೇಕೆಂಬ ಹಠಕ್ಕೆ ಬಿದ್ದಿವೆ. ಇದೆಲ್ಲವನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜಿದ್ದಾಜಿದ್ದಿಯ ಹೋರಾಟಕ್ಕೆ ವೇದಿಕೆ ತಯಾರಾಗುವುದಂತು ನಿಶ್ಚಿತವಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳು ಹೈಕಮಾಂಡ್‌ಗೆ ಕರ್ನಾಟಕದಿಂದ ಯಾವ ರೀತಿಯ ಉಡುಗೊರೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications