ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಆಗಬಾರದಾ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಬೆಂಗಳೂರು, ಡಿಸೆಂಬರ್‌ 29: ಪ್ರಧಾನಿ ನರೇಂದ್ರಮೋದಿ ಎದುರು ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡು ಲೋಕಸಭಾ ಚುನಾವಣೆಗೆ ಹೋದ ಕಾಂಗ್ರೆಸ್ ನೇತೃತ್ವದ ಯುಪಿಎ 2014 ಮತ್ತು 2019ರ ಚುನಾವಣೆಗಳಲ್ಲಿ ಸೋಲು ಕಂಡಿದೆ. ಅದಕ್ಕಿಂತ ಹೆಚ್ಚಾಗಿ 2019ರಲ್ಲಿ ಸ್ಪರ್ಧೆ ಮಾಡಿದ್ದ ಎರಡು ಕ್ಷೇತ್ರಗಳ ಪೈಕಿ ಒಂದರಲ್ಲಿ ರಾಹುಲ್ ಗಾಂಧಿ ಸೋಲು ಕಂಡಿದ್ದಾರೆ.

ಹೀಗಾಗಿ ಅವರ ಬದಲಿಗೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿ ಎಂಬ ಒತ್ತಾಯವನ್ನು ಇಂಡಿಯಾ ಒಕ್ಕೂಟದಲ್ಲಿರುವ ಕಾಂಗ್ರೆಸ್ಸೇತರ ಪಕ್ಷಗಳು ಮಾಡುತ್ತಿವೆ. ಆದರೆ ಅದನ್ನು ಕಾಂಗ್ರೆಸ್ಸಿಗರೇ ಒಪ್ಪಲು ತಯಾರಿಲ್ಲ ಎಂಬುದು ಸಿಎಂ ಸಿದ್ದರಾಮಯ್ಯ ಅವರ ಆ ಹೇಳಿಕೆಯಿಂದ ಗೊತ್ತಾಗಿದೆ.

Lok Sabha Election 2024: Who Is The Prime Minister Candidate In INDIA Union

ಮಲ್ಲಿಕಾರ್ಜುನ ಖರ್ಗೆ ಐಎನ್‍ ಡಿಐಎ(ಇಂಡಿಯಾ) ಒಕ್ಕೂಟದಿಂದ ಪ್ರಧಾನಿ ಅಭ್ಯರ್ಥಿಯಾಗಲಿ ಎಂಬ ಸಲಹೆಯನ್ನು ಅರವಿಂದ್ ಕೇಜ್ರಿವಾಲ್ ಹಾಗೂ ಮಮತಾ ಬ್ಯಾನರ್ಜಿ ನೀಡಿದಾಗ ಬಹುತೇಕ ಪಕ್ಷಗಳ, ಸಂಘಟನೆಗಳ ನಾಯಕರು ಖುಷಿಪಟ್ಟಿದ್ದರು. ಅಷ್ಟೇ ಅಲ್ಲದೆ ಒಬ್ಬ ಹಿರಿಯ ದಲಿತ ನಾಯಕ ಪ್ರಧಾನಿ ಅಭ್ಯರ್ಥಿಯಾದರೆ ಮತದಾರರು ಕೂಡ ಬೆಂಬಲಿಸುತ್ತಾರೆ ಎಂಬ ಲೆಕ್ಕಾಚಾರವಿತ್ತು. ಈ ವಿಚಾರದಲ್ಲಿ ರಾಜ್ಯದ ಜನರು ಕೂಡ ಹರ್ಷ ವ್ಯಕ್ತಪಡಿಸಿದ್ದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಕೆಲವು ಕಾಂಗ್ರೆಸ್ ನಾಯಕರು ಇದೊಂದು ಒಳ್ಳೆಯ ಬೆಳವಣಿಗೆ ಎಂಬಂತೆ ಮಾತನಾಡಿದ್ದರು. ಆದರೆ ಇದು ಕಾಂಗ್ರೆಸ್ ನಲ್ಲಿ ಸಾಧ್ಯವಾಗದ ಮಾತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ಹೊರತುಪಡಿಸಿ ಬೇರೆ ನಾಯಕರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ನೋಡಲು ಬಯಸಲ್ಲ ಎಂಬುದು ಈಗ ಸ್ಪಷ್ಟವಾಗುತ್ತಿದ್ದು, ಇದೀಗ ಸಿಎಂ ಸಿದ್ದರಾಮಯ್ಯ ಅವರಿಗೂ ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿಯಾಗುವುದು ಇಷ್ಟವಿಲ್ಲ ಎಂಬುದು ಅವರ ಮಾತಿನಿಂದಲೇ ಅರ್ಥವಾಗಿದೆ.

ಮೋದಿಯನ್ನು ಎದುರಿಸುವ ನಾಯಕ ಬೇಕು

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್ ಸುಮಾರು ಇಪ್ಪತ್ತಾರಕ್ಕೂ ಹೆಚ್ಚು ಪಕ್ಷಗಳನ್ನು ಸೇರಿಸಿಕೊಂಡು ಐಎನ್‌ಡಿಐಎ(ಇಂಡಿಯಾ) ಒಕ್ಕೂಟ ಕಟ್ಟಿಕೊಂಡು 2024ರ ಲೋಕಸಭಾ ಚುನಾವಣೆ ಎಂಬ ರಣರಂಗಕ್ಕೆ ಧುಮುಕಲು ಸಜ್ಜಾಗುತ್ತಿದೆ. ಹೀಗೆ ರಣರಂಗಕ್ಕೆ ಧುಮುಕ ಬೇಕಾದರೆ ಅದಕ್ಕೊಬ್ಬ ನಾಯಕ ಬೇಕಲ್ಲವೆ? ಆ ನಾಯಕನ ಆಯ್ಕೆಯೇ ಈಗ ಸವಾಲ್ ಆಗಿ ಪರಿಣಮಿಸಿದೆ.

Lok Sabha Election 2024: Who Is The Prime Minister Candidate In INDIA Union

ಸದ್ಯ ಈ ದೇಶ ನರೇಂದ್ರ ಮೋದಿಯಂತಹ ಬಲಿಷ್ಠ ನಾಯಕನನ್ನು ನೋಡಿದೆ. ಹೀಗಿರುವಾಗ ಅವರಿಗೆ ಎಲ್ಲದರಲ್ಲೂ ಪೈಪೋಟಿ ನೀಡ ಬಲ್ಲ ಸಮರ್ಥ ಎದುರಾಳಿಯನ್ನು ದೇಶದ ಜನ ನೋಡಬೇಕೆಂದು ಬಯಸುತ್ತಾರೆ. ಅಷ್ಟೇ ಅಲ್ಲದೆ ಆ ನಾಯಕನನ್ನು ನೋಡಿಕೊಂಡೇ ಮತ ಚಲಾಯಿಸುತ್ತಾರೆ. ಹೀಗಿರುವಾಗ ಐಎನ್‌ಡಿಐಎ ಒಕ್ಕೂಟದಿಂದ ಸಮರ್ಥ ಅಭ್ಯರ್ಥಿಯನ್ನು ಘೋಷಣೆ ಮಾಡಲೇ ಬೇಕಾಗುತ್ತದೆ. ಅದು ಮಲ್ಲಿಕಾರ್ಜು‍ನ ಖರ್ಗೆಯಾಗಿರಲಿ ಎಂದು ಕಾಂಗ್ರೆಸ್ಸೇತರ ನಾಯಕರು ಬಯಸಿದರೆ ಕಾಂಗ್ರೆಸ್‌ನ ನಾಯಕರು ಮಾತ್ರ ರಾಹುಲ್ ಗಾಂಧಿ ಹೊರತು ಪಡಿಸಿ ಮತ್ಯಾರನ್ನು ಒಪ್ಪಿಕೊಳ್ಳಲು ಬಯಸುತ್ತಿಲ್ಲ.

ರಾಹುಲ್ ಪರ ಸಿದ್ದರಾಮಯ್ಯ ಬ್ಯಾಟಿಂಗ್

ರಾಜ್ಯದ ಹಿರಿಯ ನಾಯಕರೊಬ್ಬರ ಹೆಸರು ಪ್ರಧಾನಿ ಅಭ್ಯರ್ಥಿಯ ರೇಸ್ ನಲ್ಲಿರುವಾಗಲೇ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಪರ ಬ್ಯಾಟಿಂಗ್ ಮಾಡಿದ್ದು, ದೇಶ ನಡೆಸುವ ಅಧಿಕಾರವನ್ನು ರಾಹುಲ್ ಗಾಂಧಿಗೆ ನೀಡಲು ಸಹಕರಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡಿರುವುದನ್ನು ನೋಡಿದರೆ ಎಲ್ಲೋ ಒಂದು ಕಡೆ ಮಲ್ಲಿಕಾರ್ಜು‍ನ ಖರ್ಗೆ ಅವರು ಪ್ರಧಾನಿ ಅಭ್ಯರ್ಥಿಯಾಗುವುದು ತಮಗೆ ಇಷ್ಟವಿಲ್ಲ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತೆ ಗೋಚರಿಸುತ್ತಿದೆ.

ರಾಜ್ಯದ ದಲಿತರಿಗೆ ಸಿಎಂ ಆಗುವ ಅವಕಾಶವನ್ನು ನೀಡಲಾಗುತ್ತಿಲ್ಲ ಎಂಬ ಆಕ್ರೋಶಗಳು ಇರುವ ಹೊತ್ತಿನಲ್ಲಿ, ಜತೆಗೆ ದಲಿತ ಡಿಸಿಎಂ ವಿಚಾರವೂ ಮುನ್ನಲೆಯಲ್ಲಿರುವಾಗಲೇ ಮಲ್ಲಿಕಾರ್ಜು‍ನ ಖರ್ಗೆ ಅವರ ಹೆಸರನ್ನು ಬದಿಗೆ ಸರಿಸಿ ರಾಹುಲ್ ಗಾಂಧಿ ಅವರ ಹೆಸರನ್ನು ರಾಜ್ಯದ ಮುಖ್ಯಮಂತ್ರಿಯೊಬ್ಬರು ಮುನ್ನಲೆಗೆ ತಂದಿರುವುದು ದಲಿತರಿಗೆ ಅಚ್ಚರಿಯನ್ನುಂಟು ಮಾಡಿದ್ದಂತು ನಿಜ. ಇಷ್ಟಕ್ಕೂ ನೆಹರು ಕುಟುಂಬವನ್ನು ಹೊರತು ಪಡಿಸಿ ಇನ್ಯಾವ ನಾಯಕರು ಮುನ್ನಲೆಗೆ ಬರಬಾರದಾ? ನಮ್ಮದೇ ರಾಜ್ಯದ ನಾಯಕರ ಹೆಸರು ಪ್ರಸ್ತಾಪವಾದಾಗ ಅದಕ್ಕೆ ಸಾಥ್ ನೀಡುವ ಕೆಲಸವನ್ನು ರಾಜ್ಯದ ನಾಯಕರೇಕೆ ಮಾಡುತ್ತಿಲ್ಲ? ಎಂಬಿತ್ಯಾದಿ ಚರ್ಚೆಗಳು ರಾಜಕೀಯವಾಗಿ ನಡೆಯುತ್ತಿದೆ.

Lok Sabha Election 2024: Who Is The Prime Minister Candidate In INDIA Union

ಫಲಕೊಡುತ್ತಾ ಸಾಮೂಹಿಕ ನಾಯಕತ್ವದ ಮಂತ್ರ?

ಈ ನಡುವೆ ಕಾಂಗ್ರೆಸ್ ನಾಯಕರು ಲೋಕಸಭಾ ಚುನಾವಣೆಗೆ ಬೇಕಾದ ತಯಾರಿಗಳನ್ನು ಮಾಡಿಕೊಳ್ಳುವತ್ತ ಹೆಜ್ಜೆ ಹಾಕಿದ್ದಾರೆ. ಆದರೆ ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆಗೆ ಹೋಗುವುದಾಗಿದ್ದರೆ ಯಾವುದೇ ಸಮಸ್ಯೆ ಇರಲಿಲ್ಲ. ಈಗ ಒಂದಷ್ಟು ಪ್ರಾದೇಶಿಕ ಪಕ್ಷಗಳನ್ನು ಜೊತೆಯಲ್ಲಿ ಎಳೆದುಕೊಂಡು ಹೋಗುತ್ತಿರುವ ಕಾರಣ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಮಾತುಗಳಿಗಿಂತ ಪ್ರಾದೇಶಿಕ ಪಕ್ಷಗಳ ನಾಯಕರ ಮಾತುಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕಾಗುತ್ತದೆ.

ಇವತ್ತಿನ ಪರಿಸ್ಥಿತಿಯಲ್ಲಿ ಪ್ರಧಾನಿ ಅಭ್ಯರ್ಥಿಯನ್ನು ಘೋಷಣೆ ಮಾಡದೆ ಚುನಾಣೆಗೆ ಹೋಗುವುದು ಸಾಧ್ಯವಾಗದ ಮಾತು. ಒಂದು ವೇಳೆ ಕಾಂಗ್ರೆಸ್ ಸಾಮೂಹಿಕ ನಾಯಕತ್ವದಡಿ ಚುನಾವಣೆಗೆ ಹೋಗುವ ಮನಸ್ಸು ಮಾಡಿದರೂ ಪ್ರಾದೇಶಿಕ ಪಕ್ಷಗಳು ಅದನ್ನು ಒಪ್ಪುವಂತೆ ಕಾಣುತ್ತಿಲ್ಲ. ಜೊತೆಗೆ ಚುನಾವಣೆಗೆ ಹೋಗಲು ನೇತೃತ್ವವೂ ಅಗತ್ಯವಾಗುತ್ತದೆ. ಅದು ಇಲ್ಲದೆ ಹೋದರೆ ಲಂಗುಲಗಾಮಿಲ್ಲದ ಕುದುರೆಯಂತಾಗಿ ಬಿಡುತ್ತದೆ. ಒಂದು ಪಕ್ಷದೊಳಗಿರುವ ನಾಯಕರಲ್ಲಿಯೇ ಭಿನ್ನಾಭಿಪ್ರಾಯಗಳು ಇರುತ್ತವೆ ಎನ್ನುವುದಾದರೆ ಸುಮಾರು 26 ಪಕ್ಷಗಳು ಕೂಡಿದ ಒಕ್ಕೂಟದಲ್ಲಿ ಒಗ್ಗಟ್ಟು ತರಲು ಸಾಧ್ಯವಾಗುತ್ತಾ?

ಮೈಕೊಡವಿಕೊಂಡು ಮೇಲೇಳುತ್ತಾರಾ ನಾಯಕರು?

ಒಕ್ಕೂಟದಲ್ಲಿರುವ ಪಕ್ಷಗಳು ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಚುನಾವಣೆಗೆ ಹೋಗಲು ಹೆಚ್ಚಿನ ಸಮಯವೇನು ಉಳಿದಿಲ್ಲ. ಹೀಗಾಗಿ ಆದಷ್ಟು ಬೇಗ ಒಮ್ಮತಕ್ಕೆ ಬರಬೇಕಾಗುತ್ತದೆ. ಅಷ್ಟೇ ಅಲ್ಲದೆ ಒಮ್ಮತದ ಪ್ರಧಾನಿ ಅಭ್ಯರ್ಥಿಯನ್ನು ಘೋಷಣೆ ಮಾಡಲೇ ಬೇಕಾಗುತ್ತದೆ. ಇಂಡಿಯಾ ಒಕ್ಕೂಟದ ಇತ್ತೀಚೆಗಿನ ಬೆಳವಣಿಗೆಯನ್ನು ನೋಡಿದರೆ ಒಕ್ಕೂಟ ರಚನೆಯ ವೇಳೆ ನಾಯಕರಲ್ಲಿದ್ದ ಹುಮ್ಮಸ್ಸು ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕುಗ್ಗಿದಂತೆ ಕಾಣಿಸುತ್ತಿದೆ. ಆದರೆ ಎಲ್ಲವನ್ನು ಬದಿಗೆ ಸರಿಸಿ ಮೈಕೊಡವಿಕೊಂಡು ಮೇಲೇಳುವುದು ಅನಿವಾರ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+