ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ, ನೀತಿ ಸಂಹಿತೆ ಉಲ್ಲಂಘನೆ ಮಾಡುವ ಮುನ್ನ ಇರಲಿ ಎಚ್ಚರ!
ಬೆಂಗಳೂರು, ಏಪ್ರಿಲ್.03: ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಚುನಾವಣಾ ಆಯೋಗ ಹಲವು ನಿಯಮಾವಳಿಗಳನ್ನು ಹೊರಡಿಸಿದೆ. ಎಲ್ಲರ ಕೈಗೂ ತುಂಬಾ ಸುಲಭವಾಗಿ ದೊರೆಯುವ ಸಾಮಾಜಿಕ ಮಾಧ್ಯಮಗಳು, ಸುಳ್ಳು ಸುದ್ದಿಗಳ ಮೇಲೆ ನಿಗಾ ಇಡುವಂತೆ ರಾಜ್ಯ ಸರ್ಕಾರಗಳಿಗೆ ತಿಳಿಸಿದೆ. ಇದರ ಬೆನ್ನಲ್ಲೇ ವಿಶೇಷ ಘಟಕಗಳನ್ನು ತೆರೆಯಲಾಗಿದೆ.
ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಮತ್ತು ವಿಷಯಗಳು ಅತ್ಯಧಿಕವಾಗಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಕಾನೂನುಬಾಹಿರ ಮತ್ತು ಸುಳ್ಳು ಸುದ್ದಿಗಳು ಹರಡುವುದನ್ನು ನಿಯಂತ್ರಿಸಲು ಭಾರತ ಚುನಾವಣಾ ಆಯೋಗದ ನಿರ್ದೇಶನ ನೀಡಿದೆ. ಇದರ ಆದೇಶದಂತೆ ಸಾಮಾಜಿಕ ಜಾಲತಾಣಗಳ ಉಸ್ತುವಾರಿ ಕೋಶವನ್ನು ಎಲ್ಲಾ ಜಿಲ್ಲಾ ಚುನಾವಣಾ ನಿಯಂತ್ರಣ ಕೇಂದ್ರದಲ್ಲಿ ತೆರೆಯಲಾಗಿದೆ.

ಇಂಟರ್‌ನೆಟ್‌ನಲ್ಲಿ ಪ್ರಕಟಗೊಳ್ಳುವ ಸುದ್ದಿಗಳು, ಪ್ರಸಕ್ತ ವಿದ್ಯಮಾನಗಳು ಮತ್ತು ಓಟಿಟಿ ಪ್ಲಾಟ್‍ಫಾರಂನಲ್ಲಿ (ಉತ್ತೇಕ್ಷಿತ) ಸುದ್ದಿಗಳು ಹರಡುವುದನ್ನು ಪರಿಶೀಲಿಸಿ, ಉಲ್ಲಂಘನೆ ಆಗುವ ವರದಿಗಳನ್ನು ನಿಯಂತ್ರಿಸಲು ವಿಷಯ ಪರಿಣಿತ ಅಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಸೋಷಿಯಲ್ ಮೀಡಿಯಾ ಘಟಕವನ್ನು ರಚಿಸಲಾಗಿದೆ.
ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಸುಳ್ಳು ಸುದ್ದಿಗಳನ್ನು ಹರಡುವುದು ಹಾಗೂ ಚುನಾವಣೆ ನೀತಿ ಸಂಹಿತೆ ಉಲಂಘನೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವವರ ಮೇಲೆ ನಿಗಾ ಇಡಲು ಸಾಮಾಜಿಕ ಜಾಲತಾಣ ಕೋಶವನ್ನು ಜಿಲ್ಲಾ ಮಟ್ಟದಲ್ಲಿ ರಚನೆ ಮಾಡಲಾಗಿದೆ. ಈ ಪ್ರತ್ಯೇಕ ಘಟಕಗಳು ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತವೆ.

ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕರು ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ತಾಂತ್ರಿಕ ಸಮಾಲೋಚಕರು, ನುರಿತ ಶಿಕ್ಷಕರು ತಂಡದಲ್ಲಿದ್ದಾರೆ. ತಂಡವು ಸೋಶಿಯಲ್ ಮೀಡಿಯಾ ಪ್ಲಾಟ್‍ಪಾರ್ಮ್ ಮೇಲೆ ನಿರಂತರ ನಿಗಾವಹಿಸಿಲಿದೆ .
ಈ ಘಟಕವು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಪ್, ಟ್ವಿಟರ್, ಟೆಲಿಗ್ರಾಂ, ಯೂಟ್ಯೂಬ್, ವೆಬ್ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಎಲ್ಲಾ ಬಗೆಯ ಸುದ್ದಿ ಮತ್ತು ಆಡಿಯೋ, ವಿಡಿಯೋ ಸಂದೇಶಗಳ ಮೇಲೆ ಹದ್ದಿನ ಕಣ್ಣು ಇಡುವ ಮೂಲಕ ಸುಳ್ಳು ಸುದ್ದಿಗಳನ್ನು ನಿಯಂತ್ರಣ ಮಾಡಲಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವ ಪ್ರಕರಣಗಳು ಕಂಡು ಬಂದಲ್ಲಿ, ಸಂಬಂಧಪಟ್ಟ ಸುದ್ದಿ ಅಥವಾ ವಿಡಿಯೋ ಪ್ರಸಾರದ ಮೂಲವನ್ನು ಪತ್ತೆ ಹಚ್ಚಲಾಗುತ್ತದೆ. ಬಳಿಕ ಸಂಬಂಧಿಸಿದ ಲಿಂಕ್, ಸ್ಕ್ರಿನ್‍ಶಾಟ್‍ಗಳ ದಾಖಲೆ ಸಹಿತ, ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಪಡಿಸುವವರ ವಿರುದ್ಧ ಪ್ರಜಾ ಪ್ರತಿನಿಧಿ ಕಾಯ್ದೆ ಹಾಗೂ ಪೊಲೀಸ್ ಕಾಯ್ದೆ ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.












Click it and Unblock the Notifications