ಚುನಾವಣಾ ಫಲಿತಾಂಶ; ಕಾಂಗ್ರೆಸ್ ನಾಯಕರಿಗೆ ಆರ್. ಅಶೋಕ ಸಲಹೆ ಏನು?
ಬೆಂಗಳೂರು, ಜೂನ್ 03; ಮಂಗಳವಾರ ಲೋಕಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆಯಾಗಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಕರ್ನಾಟಕದಲ್ಲಿ ಯಾರು, ಎಷ್ಟು ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿಯೇ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಆರ್. ಅಶೋಕ ಸಲಹೆಯೊಂದನ್ನು ನೀಡಿದ್ದಾರೆ.
ಪ್ರತಿಪಕ್ಷ ನಾಯಕರಾದ ಆರ್. ಅಶೋಕ ಸೋಮವಾರ ಫಲಿತಾಂಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿ, ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ. ಈ ಮೂಲಕ ಮಂಗಳವಾರದ ಫಲಿತಾಂಶ ಎದುರಿಸಲು ಸಿದ್ಧರಾಗಿ ಎಂದು ಸಂದೇಶ ಕೊಟ್ಟಿದ್ದಾರೆ.

ತಮ್ಮ ಪೋಸ್ಟ್‌ನಲ್ಲಿ ಆರ್. ಅಶೋಕ, 'ನಾಳೆ ಬರುವ ಫಲಿತಾಂಶದಲ್ಲಿ ಬಿಜೆಪಿಗೆ ಬಹುಮತ ಬರುತ್ತೆ, ಶ್ರೀ ನರೇಂದ್ರ ಮೋದಿ ಅವರು ಮತ್ತೊಮ್ಮೆ ಈ ದೇಶದ ಪ್ರಧಾನಿ ಆಗುತ್ತಾರೆ ಅಂತ ಸ್ವತಃ ಕಾಂಗ್ರೆಸ್ ಶಾಸಕ ಶ್ರೀ ಕೊತ್ತೂರು ಮಂಜುನಾಥ ಅವರೇ ಒಪ್ಪಿಕೊಂಡಿದ್ದಾರೆ' ಎಂದು ಹೇಳಿದ್ದಾರೆ.
'ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರೇ, ಇವಿಎಂ ಸರಿಯಿಲ್ಲ, ಮತ್ತೊಂದಿಲ್ಲ ಅಂತ ಕುಂಟು ನೆಪ ಹೇಳಿ ಇನ್ನೆಷ್ಟು ದಿನ ನಿಮ್ಮ ನಾಯಕ ರಾಹುಲ್ ಗಾಂಧಿ ಅವರ ಅಸಮರ್ಥತೆ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತೀರಿ?. ನಿಮ್ಮ ಶಾಸಕ ಮಿತ್ರರಂತೆ ಸತ್ಯ ಒಪ್ಪಿಕೊಂಡು ಜನಾದೇಶಕ್ಕೆ ತಲೆಬಾಗಿ' ಎಂದು ಅಶೋಕ ಕರೆ ನೀಡಿದ್ದಾರೆ.
ಅಶೋಕ ಪೋಸ್ಟ್ ಹಾಕಿದ್ದು ಏಕೆ?; ಸೋಮವಾರ ಆರ್. ಅಶೋಕ ಇಂತಹ ಪೋಸ್ಟ್ ಹಾಕಲು ಸಹ ಕಾರಣ ಕೋಲಾರದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್. ಇಂದು ಮಾತನಾಡಿದ ಅವರು, "ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. ನಾನು ಕಾಂಗ್ರೆಸ್ ಶಾಸಕನಾದರೂ ನಿಜ ಮಾತನಾಡಬೇಕು. 2029ಕ್ಕೆ ಕಾಂಗ್ರೆಸ್ ಸರ್ಕಾರ ಬರಲಿದೆ" ಎಂದು ಹೇಳಿದರು.
ಆರ್. ಅಶೋಕ ಈ ಹೇಳಿಕೆಯನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಈಗಾಗಲೇ ಎಕ್ಸಿಟ್ ಪೋಲ್ ಫಲಿತಾಂಶಗಳು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿವೆ. ಆದ್ದರಿಂದ ಕಾಂಗ್ರೆಸ್ ನಾಯಕರ ಉತ್ಸಾಹವೂ ಕಡಿಮೆಯಾಗಿದೆ.
ಶಾಸಕ ಕೊತ್ತೂರು ಮಂಜುನಾಥ್, "ಮತಗಟ್ಟೆ ಸಮೀಕ್ಷೆಯು ಬಿಜೆಪಿ ಎಂದು ಹೇಳುತ್ತಿದೆ. ಎಲ್ಲರ ರೀತಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ನಾನು ಸುಳ್ಳು ಹೇಳಲ್ಲ. ಬಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಿದೆ ಎಂಬುದು ಮೊದಲೇ ಗೊತ್ತಿದ್ದ ವಿಚಾರ" ಎಂದರು.
"ಈ ಸಲ ಅವರೇ ಬರಲಿ, ನಮ್ಮ ಗುರಿ 2029ಕ್ಕೆ. ಮುಂದಿನ ಚುನಾವಣೆಯಲ್ಲಿ ಗೆಲ್ಲಲು ನಾವು ಈಗಿನಿಂದಲೇ ತಯಾರಿ ನಡೆಸುತ್ತೇವೆ. ರಾಜ್ಯದಲ್ಲಿ 50-50 ಇದೆ. ಕೋಲಾರ ಕ್ಷೇತ್ರದಲ್ಲಿ ನಾವು 29 ಸಾವಿರ ಮತಗಳಿಂದ ಗೆಲ್ಲುತ್ತೇವೆ" ಎಂದು ಶಾಸಕ ಕೊತ್ತೂರು ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.
ಜೂನ್ 1ರ ಶನಿವಾರ ಚುನಾವಣೋತ್ತರ ಸಮೀಕ್ಷೆ ಪ್ರಕಟವಾದ ಬಳಿಕ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರನ್ನು ಫಲಿತಾಂಶದ ಕುರಿತು ಟೀಕಿಸುತ್ತಿದ್ದಾರೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ, "ಮತಗಟ್ಟೆ ಸಮೀಕ್ಷೆ ನಡೆಸಿದ ಎಲ್ಲಾ ಏಜೆನ್ಸಿಗಳಲ್ಲೂ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರು ತ್ರಿವಿಕ್ರಮ ಸಾಧನೆಗೈಯುವುದು ಖಾತ್ರಿಯಾಗಿದೆ, ಎನ್.ಡಿ.ಎ ಮೈತ್ರಿಕೂಟ ಹ್ಯಾಟ್ರಿಕ್ ಗೆಲುವಿನೊಂದಿಗೆ ಮತ್ತೊಮ್ಮೆ ಮೋದಿ ಜೀ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎನ್ನುವ ಸಮೀಕ್ಷಾ ವರದಿ ಬಹಿರಂಗವಾಗಿರುವುದು ಭಾರತವನ್ನು ಗೆಲ್ಲಿಸುವ ಸಂಕಲ್ಪ ತೊಟ್ಟಿದ್ದ ಮತದಾರ ಬಂಧುಗಳ ರಾಷ್ಟ್ರ ವಿಜಯವನ್ನು ಸಂಕೇತಿಸಿದೆ' ಎಂದು ಹೇಳಿದ್ದರು.
'ಕರ್ನಾಟಕದಲ್ಲಿ ಕೆಲವು ರಾಜಕೀಯ ಪಂಡಿತರ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗುವಂತೆ ಸಮೀಕ್ಷಾ ವರದಿಗಳು ನಮ್ಮ ನಿರೀಕ್ಷಿತ ಫಲಿತಾಂಶದ ಸೂಚನೆ ಪ್ರಕಟಿಸಿದ್ದು, ಕರ್ನಾಟಕ ರಾಜ್ಯದ ಜನತೆ ಮೋದಿ ಜೀ ಅವರನ್ನು ಬೆಂಬಲಿಸುವ ನಿಟ್ಟಿನಲ್ಲಿ ಸದಾ ಮುಂದೆ ಎನ್ನುವ ವರದಿ ಬಿಜೆಪಿ ಕಾರ್ಯಕರ್ತರ ಪರಿಶ್ರಮದ ಹೋರಾಟಕ್ಕೆ ಸಾರ್ಥಕ ಭಾವ ಮೂಡಿಸಿದೆ' ಎಂದು ವಿಜಯೇಂದ್ರ ಪೋಸ್ಟ್ ಹಾಕಿದ್ದರು.
'ಮತ ಬ್ಯಾಂಕ್ ಆಧಾರಿತ ಯೋಜನೆಗಳಿಗೆ ಮತದಾರ ಬಂಧುಗಳು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ ಎನ್ನುವುದೂ ಸ್ಪಷ್ಟವಾಗಿದೆ. ಸಮಗ್ರ ಭಾರತದ ಸುರಕ್ಷತೆ ಹಾಗೂ ಅಭಿವೃದ್ಧಿಯ ವಿಷಯದಲ್ಲಿ ಕರ್ನಾಟಕದ ಮತದಾರರು ರಾಜಿಯಾಗುವ ಪ್ರಶ್ನೆಯೇ ಇಲ್ಲ ಎನ್ನುವುದನ್ನು ಈ ಎಕ್ಸಿಟ್ ಪೋಲ್ ವರದಿ ಸಾಕ್ಷೀಕರಿಸಿದೆ' ಎಂದು ವಿಜಯೇಂದ್ರ ತಿಳಿಸಿದ್ದರು.












Click it and Unblock the Notifications