Lok Sabha Election 2024: ಲೋಕ ಗ್ಯಾರಂಟಿ ಸಮರ: ರಾಜ್ಯ ಮತದಾರರ ಚಿತ್ತ ಯಾವುದರತ್ತ?
ಬೆಂಗಳೂರು, ಏಪ್ರಿಲ್ 13: ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಲೆಕ್ಕಾಚಾರಗಳು ಕೂಡ ಬದಲಾಗುತ್ತಾ ಹೋಗುತ್ತಿವೆ. ಕಳೆದ ಬಾರಿ ಸುಮಾರು ಇಪ್ಪತೈದು ಲೋಕಸಭಾ ಸ್ಥಾನಗಳನ್ನು ಕಸಿದಿದ್ದ ಬಿಜೆಪಿಗೆ ಈ ಸಲ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡುವ ಎಲ್ಲ ಲಕ್ಷಣಗಳು ಕಂಡು ಬಂದಿದ್ದು, ಮೋದಿಯ ಗ್ಯಾರಂಟಿ ಮತ್ತು ಸಿದ್ದರಾಮಯ್ಯರ ಗ್ಯಾರಂಟಿಗಳ ನಡುವಿನ ಕದನದಲ್ಲಿ ರಾಜ್ಯದ ಮತದಾರರ ಚಿತ್ತ ಯಾವುದರತ್ತ ಹೋಗುತ್ತದೆ ಎಂಬುದೇ ಈಗಿರುವ ಕುತೂಹಲವಾಗಿದೆ.
ಚುನಾವಣೆಗೆ ಮುನ್ನ ಮತದಾರರು ಏನೇ ಹೇಳಿದರೂ ಚುನಾವಣೆ ದಿನ ಮತಕೇಂದ್ರದಲ್ಲಿ ಮತಯಂತ್ರದ ಮುಂದೆ ನಿಂತು ತೆಗೆದು ಕೊಳ್ಳುವ ಕೊನೆಯ ನಿರ್ಧಾರಗಳು ಅಂತಿಮವಾಗಿರುತ್ತದೆ. ಮತದಾರರು ಮತ ನೀಡುವ ಸಂದರ್ಭದಲ್ಲಿ ಎಲ್ಲವನ್ನು ಗಮನಿಸಿಯೇ ಮತವನ್ನು ನೀಡುತ್ತಾರೆ. ಈಗ ಮೊದಲಿನಂತಿಲ್ಲ ಎಲ್ಲ ವಿಚಾರವನ್ನು ಅರಿತುಕೊಳ್ಳುವ, ವಿಶ್ಲೇಷಿಸುವ ಶಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ಹೀಗಾಗಿ ಲಾಭ ನಷ್ಟದ ಜೊತೆಗೆ ದೇಶದ ಹಿತಾಸಕ್ತಿಯ ಬಗ್ಗೆಯೂ ಚಿಂತೆ ಮಾಡುತ್ತಾರೆ. ಆದ್ದರಿಂದ ರಾಜಕೀಯ ನಾಯಕರು ಹೇಳುವುದೆಲ್ಲವನ್ನು ಸತ್ಯವೆಂದು ನಂಬಿ ಮತಚಲಾಯಿಸುವ ಅಮಾಯಕರು ಮತದಾರರಲ್ಲ.

ಜಾತಿ, ಧರ್ಮ, ಯಾವುದೂ ಇಲ್ಲ ನಾವು ಜಾತ್ಯಾತೀತರು ಎನ್ನುವವರು ಚುನಾವಣೆ ವಿಚಾರ ಬಂದಾಗ ತಮ್ಮ ಅನುಕೂಲಕ್ಕೆ ತಕ್ಕಂತೆ ಜಾತಿಯನ್ನು ಎಳೆದು ತರುತ್ತಿರುವುದು ಗುಟ್ಟಾಗಿಯೇನು ಉಳಿದಿಲ್ಲ. ಜಾತಿ ಮೇಲೆಯೇ ಮತ ಸೆಳೆಯುವ ತಂತ್ರವನ್ನು ರಾಜಕೀಯ ಪಕ್ಷಗಳ ನಾಯಕರು ಮಾಡುತ್ತಿದ್ದಾರೆ. ಇದು ಇವತ್ತಿನದಲ್ಲ. ಯಾವ ಕ್ಷೇತ್ರದಲ್ಲಿ ಯಾವ ಜಾತಿ ಧರ್ಮದ ಮತದಾರರು ಹೆಚ್ಚಿದ್ದಾರೋ ಅದೇ ಸಮುದಾಯದ ವ್ಯಕ್ತಿಯನ್ನು ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದು ರಾಜಕೀಯ ತಂತ್ರದ ಒಂದು ಭಾಗವೂ ಹೌದು.
ಯಾವುದೆಲ್ಲ ಕಾಂಗ್ರೆಸ್‌ಗೆ ಮತ ತಂದುಕೊಡಲಿದೆ?
ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಜಾತಿ, ಧರ್ಮ ಮತ್ತು ಗ್ಯಾರಂಟಿ ಈ ಮೂರು ಲಾಭ ತಂದುಕೊಡಲಿದೆ ಎನ್ನುವುದು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತುಗಳಾಗಿವೆ. ಮುಖ್ಯವಾಗಿ ಅಲ್ಪಸಂಖ್ಯಾತರು, ದಲಿತರು ಹಿಂದಿನಿಂದಲೂ ಕಾಂಗ್ರೆಸ್ ನ ಮುಖ್ಯ ಮತಬ್ಯಾಂಕ್ ಆಗಿದೆ. ಅವರ ಜತೆಗೆ ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಯ ಜಾತಿಯೂ ಮತ ತಂದುಕೊಡಲಿದ್ದು, ಇದರೊಂದಿಗೆ ಮಹಿಳೆಯರಿಗೆ ನೀಡಿರುವ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ನ ಕೈಹಿಡಿಯಲಿರುವುದರಿಂದ ಕಾಂಗ್ರೆಸ್ ಗೆ ಹಿಂದಿನ ಚುನಾವಣೆಗಳಿಗಿಂತಲೂ ಹೆಚ್ಚಿನ ಮತಗಳು ಬೀಳಲಿದೆ ಎಂಬುದು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿರುವ ಆತ್ಮವಿಶ್ವಾಸದ ಮಾತುಗಳಾಗಿವೆ.

ಈಗಾಗಲೇ ರಾಜ್ಯ ಕಾಂಗ್ರೆಸ್ ಪಕ್ಷವು ವಿಧಾನಸಭಾ ಚುನಾವಣೆ ವೇಳೆ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಬಳಿಕ ಜಾರಿ ಮಾಡಿದೆ. ಹೀಗಾಗಿ ಲೋಕ ಸಭಾ ಚುನಾವಣೆ ವೇಳೆ ಕಾಂಗ್ರೆಸ್ ನೀಡುತ್ತಿರುವ 25 ಗ್ಯಾರಂಟಿಗಳ ಪೈಕಿ ಮಹಿಳಾ ನ್ಯಾಯ್ ಗ್ಯಾರಂಟಿಯಾಗಿರುವ ವಾರ್ಷಿಕ ಒಂದು ಲಕ್ಷ ರೂ ನೀಡುವ ಯೋಜನೆ ಮಹಿಳೆಯರ ಗಮನಸೆಳೆದರೂ ಅಚ್ಚರಿಯಿಲ್ಲ. ಆದರೆ ರಾಜ್ಯದಲ್ಲಿ ಮೇಲ್ನೋಟಕ್ಕೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ನೀಡಿರುವ ಭರವಸೆಗಳ ಗ್ಯಾರಂಟಿಗಿಂತ ರಾಜ್ಯ ಸರ್ಕಾರದ ಗ್ಯಾರಂಟಿ ಮೇಲೆಯೇ ನಾಯಕರು ಮತಕೇಳುತ್ತಿರುವುದು ಎದ್ದು ಕಾಣಿಸುತ್ತಿದೆ.
ಗ್ಯಾರಂಟಿ ಕೈನಾಯಕರಿಗೆ ಗೆಲುವಿನ ಅಸ್ತ್ರ
ಈಗಾಗಲೇ ರಾಜ್ಯ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಸ್ಥಾನಗಳು ಬಾರದೆ ಹೋದರೆ ಗ್ಯಾರಂಟಿ ಯೋಜನೆಗಳು ನಿಂತು ಹೋಗಿಬಿಡಬಹುದೇನೋ ಎಂಬ ಭಯವೂ ಇಲ್ಲದಿಲ್ಲ. ಹೀಗಾಗಿ ಅವರು ಕಾಂಗ್ರೆಸ್ ನ್ನು ಬೆಂಬಲಿಸುತ್ತಾರೆ ಎಂಬ ಮಾತುಗಳು ಚರ್ಚೆಯಲ್ಲಿದೆ. ಇನ್ನು ಕಾಂಗ್ರೆಸ್ ವಿರೋಧಿಗಳು ರಾಜ್ಯ ಸರ್ಕಾರದ ಗ್ಯಾರಂಟಿಗಳೆಲ್ಲವೂ ಲೋಕಸಭಾ ಚುನಾವಣೆವರೆಗೆ ಮಾತ್ರ ಆ ನಂತರ ಮುಂದುವರೆಸಲ್ಲ ಎಂಬಂತಹ ಮಾತುಗಳನ್ನಾಡುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಎಲ್ಲಿ ಗ್ಯಾರಂಟಿ ಯೋಜನೆಗಳು ನಿಂತು ಹೋಗಬಹುದೇನೋ ಎಂಬ ಭಯದಲ್ಲಿ ಮತದಾರರು ಕಾಂಗ್ರೆಸ್ ನತ್ತ ಒಲವು ತೋರಿದರೆ ಅಚ್ಚರಿಪಡಬೇಕಾಗಿಲ್ಲ. ರಾಜ್ಯದ ಮಟ್ಟಿಗೆ ಮೋದಿ ಅಲೆಯ ನಡುವೆಯೂ ಕಾಂಗ್ರೆಸ್ ನ ಗ್ಯಾರಂಟಿಗಳು ಸದ್ದು ಮಾಡುತ್ತಿವೆ. ಅದು ಕೊನೆಗಳಿಗೆಯಲ್ಲಿ ಮತವಾಗಿ ಪರಿವರ್ತನೆಯಾದರೆ ಕಾಂಗ್ರೆಸ್ ಗೆ ಗೆಲುವು ತಂದುಕೊಟ್ಟಂತೆಯೇ... ರಾಜ್ಯ ಕಾಂಗ್ರೆಸ್ ನಾಯಕರು ಕೂಡ ನಾವು ನೀಡಿದ ಗ್ಯಾರಂಟಿ ಯೋಜನೆಗಳಿಂದಲೇ ರಾಜ್ಯದಲ್ಲಿ ಇಪ್ಪತ್ತು ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸದ ಮಾತುಗಳನ್ನಾಡುತ್ತಿದ್ದಾರೆ.
ಗ್ಯಾರಂಟಿ ಸಮರದಲ್ಲಿ ಗೆಲ್ಲುವವರು ಯಾರು?
ರಾಜ್ಯದಲ್ಲಿ ಮತದಾರರೆಲ್ಲರೂ ಕಾಂಗ್ರೆಸ್ ನೀಡಿರುವ ಪಂಚ ಗ್ಯಾರಂಟಿಗಳನ್ನು ಮನಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ. ಅದರಿಂದಲೇ ಮತಗಳೆಲ್ಲವೂ ಬಂದು ಬಿಡುತ್ತವೆ ಎನ್ನುವುದನ್ನು ಒಪ್ಪಲಾಗದು. ಈಗಾಗಲೇ ಈ ಗ್ಯಾರಂಟಿಗಳ ಬಗ್ಗೆ ವಿಶ್ಲೇಷಣೆಗಳು ಕೂಡ ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ. ಸರ್ಕಾರ ಗ್ಯಾರಂಟಿಯನ್ನು ಎಲ್ಲಿಂದ ಕೊಡುತ್ತಿದೆ? ನಮ್ಮ ಜೇಬಿನಿಂದ ಕಿತ್ತುಕೊಡುತ್ತಿದೆ ಎಂಬ ಆರೋಪಗಳನ್ನು ಪುರುಷ ಮತದಾರರು ಮಾಡುತ್ತಿದ್ದಾರೆ.
ಪ್ರತಿಯೊಂದಕ್ಕೂ ಬೆಲೆ ಏರಿಕೆ ಮಾಡಿ ಉಚಿತವಾಗಿ ಕೊಡುವುದರಿಂದ ಏನು ಲಾಭ ಬಂತು ಎಂಬುದಾಗಿ ಪ್ರಶ್ನಿಿಸುವವರು ಇಲ್ಲದಿಲ್ಲ
ಒಟ್ಟಾರೆ ಉಚಿತ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಕಾಂಗ್ರೆಸ್ ಕೈಹಿಡಿಯುತ್ತಾ ಎಂಬುದು ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗಲಿದೆ. ಅಷ್ಟೇ ಅಲ್ಲದೆ, ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ನ್ನು ಒಂದಂಕಿಯಿಂದ ಎರಡು ಅಂಕಿಗಳತ್ತ ಕರೆದೊಯ್ಯುತ್ತಾ ಎಂಬುದನ್ನು ತೋರಿಸಿಕೊಡಲಿದೆ. ಅಂತಿಮವಾಗಿ ಮೋದಿಯ ಗ್ಯಾರಂಟಿ ಮತ್ತು ಕಾಂಗ್ರೆಸ್ ನ ಗ್ಯಾರಂಟಿ ನಡುವಿನ ಸಮರದಲ್ಲಿ ಮತದಾರರು ಯಾವುದನ್ನು ಬೆಂಬಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications