ಆಡಳಿತರೂಢ ಕಾಂಗ್ರೆಸ್ ವಿರುದ್ಧ ಜೆಡಿಎಸ್-ಬಿಜೆಪಿ ಹೋರಾಟ: ಕೈಗೆ ದುಸ್ವಪ್ನವಾದ ಕಮಲದಳ!
ಬೆಂಗಳೂರು, ಆಗಸ್ಟ್ 10: ವಿಧಾನಸಭಾ ಚುನಾವಣೆ ಕಳೆದು ಕೇವಲ ಮೂರು ತಿಂಗಳಾಗುತ್ತಿದ್ದು, ರಾಜ್ಯದಲ್ಲಿ ಬಹುಮತ ಪಡೆದಿರುವ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಲು ಆರಂಭಿಸಿದೆ. ಆದರೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದತ್ತ ಹೆಚ್ಚಿನ ಒತ್ತು ನೀಡಿ ಆಡಳಿತ ನಡೆಸುತ್ತಿರುವ ಸರ್ಕಾರಕ್ಕೆ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಹೆಜ್ಜೆ ಹೆಜ್ಜೆಗೂ ಮುಳ್ಳಾಗಿ ಚುಚ್ಚುತ್ತಿರುವುದಂತು ನಿಜ.
2019ರಲ್ಲಿ ರಾಜ್ಯದಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಅಧಿಕಾರ ಹಿಡಿದಿದ್ದ ಬಿಜೆಪಿಯನ್ನು ಅವತ್ತು ವಿಪಕ್ಷಗಳಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಹೆಚ್ಚು ಕಾಡಲೇ ಇಲ್ಲ. ಸಮ್ಮಿಶ್ರ ಸರ್ಕಾರ ಉರಳಿ ಬೀಳುತ್ತಿದ್ದಂತೆಯೇ ಮಿತ್ರರಾಗಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಬದ್ಧ ವೈರಿಗಳಾಗಿ ಬಿಟ್ಟರು. ಅದರಲ್ಲೂ ಸಿದ್ದರಾಮಯ್ಯ ಮತ್ತು ಹೆಚ್.ಡಿ.ಕುಮಾರಸ್ವಾಮಿ ನಡುವೆ ಆರೋಪ ಮತ್ತು ಪ್ರತ್ಯಾರೋಪಗಳ ದೊಡ್ಡ ಯುದ್ಧವೇ ನಡೆದು ಹೋಯಿತು.
ವಿಪಕ್ಷಗಳು ತಮ್ಮ ನಡುವೆ ಕಿತ್ತಾಡಿಕೊಳ್ಳುವುದರಲ್ಲಿಯೇ ಕಾಲ ಕಳೆದು ಬಿಟ್ಟವು. ಅವು ಯಾವತ್ತೂ ಒಟ್ಟಾಗಿ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಸಮರ ಸಾರಲೇ ಇಲ್ಲ. ಬದಲಾಗಿ ತಮ್ಮ ನಡುವೆ ಆರೋಪಗಳನ್ನು ಮಾಡುತ್ತಲೇ ಸಾಗಿದವು. 2020ರ ವೇಳೆಗೆ ಕೋರೊನಾ ಕಾಡಿತ್ತು. ಹೀಗಾಗಿ ಆಡಳಿತದಲ್ಲಿ ಬಿಜೆಪಿ ವಿರುದ್ಧ ಯಾವುದೇ ಅಂತಹ ಯಾವುದೇ ಹೋರಾಟಗಳು ನಡೆಯಲಿಲ್ಲ. ತದ ನಂತರ ಕಾಂಗ್ರೆಸ್ ಮೈಕೊಡವಿ ಎದ್ದು ನಿಂತಿತು. 2021ರಲ್ಲಿ ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜಕೀಯ ಶುರು ಮಾಡಿದರು.

ಕಾಂಗ್ರೆಸ್‌ನ ಹೋರಾಟಕ್ಕೆ ಪಾದಯಾತ್ರೆಯ ಮುನ್ನುಡಿ
ಈ ವೇಳೆ ಅದರ ಬಗ್ಗೆ ಆಡಳಿತ ಪಕ್ಷ ಬಿಜೆಪಿ ಮಾತನಾಡಿದ್ದಕ್ಕಿಂತ ಹೆಚ್ಚಾಗಿ ವಿಪಕ್ಷವಾಗಿದ್ದ ಜೆಡಿಎಸ್ ಮಾತನಾಡಿತ್ತು. ಡಿ.ಕೆ.ಶಿವಕುಮಾರ್ ಅವರ ಪಾದಯಾತ್ರೆಯನ್ನು ಜೆಡಿಎಸ್ ಪರವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದರು. ಇದು ರಾಜಕೀಯ ಗಿಮಿಕ್ ಎಂದಿದ್ದರು. ಆದರೆ ಕೋರೊನಾದ ನಡುವೆಯೂ ಕಾಂಗ್ರೆಸ್ ನಾಯಕರನ್ನು ಒಂದೆಡೆ ಸೇರಿಸಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ಡಿಕೆಶಿ ರವಾನಿಸಿದ್ದರು. ಅಷ್ಟೇ ಅಲ್ಲದೆ, ಎರಡು ಹಂತದಲ್ಲಿ ಪಾದಯಾತ್ರೆಯನ್ನು ಮುಗಿಸಿ ಯಶಸ್ಸು ಸಾಧಿಸಿದ್ದರು.
ಅವತ್ತು ಅವರ ಪಕ್ಷ ಸಂಘಟನೆಗೆ ಮತ್ತು ರಾಜಕೀಯವಾಗಿ ಚುನಾವಣೆಯನ್ನು ಎದುರಿಸಲು, ಜನರನ್ನು ಅದರಲ್ಲೂ ರೈತರನ್ನು ಸೆಳೆಯಲು ಮೇಕೆದಾಟು ಪಾದಯಾತ್ರೆ ವೇದಿಕೆಯಾಗಿತ್ತು. ಅಷ್ಟೇ ಅಲ್ಲದೆ ವಿಧಾನಸಭಾ ಚುನಾವಣೆಯ ಹೋರಾಟಕ್ಕೆ ಮುನ್ನುಡಿಯೂ ಆಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. (ಅವತ್ತಿನ ಮೇಕೆದಾಟು ಪಾದಯಾತ್ರೆ ಚುನಾವಣೆಯ ಗಿಮಿಕ್ ಎನ್ನುವುದಂತು ನಿಜ ಏಕೆಂದರೆ ಇವತ್ತು ಅಧಿಕಾರ ಹಿಡಿದಿರುವ ಕಾಂಗ್ರೆಸ್ ನಾಯಕರು ಅದರ ಬಗ್ಗೆ ಮಾತನಾಡುತ್ತಿಲ್ಲ. ಜೊತೆಗೆ ಬಜೆಟ್‌ನಲ್ಲಿಯೂ ಯಾವುದೇ ಅನುದಾನ ಘೋಷಿಸಿಲ್ಲ)

ಕೈಗೆ ಪ್ರಬಲ ಅಸ್ತ್ರವಾದ 40 ಪರ್ಸೆಂಟ್
ಚುನಾವಣೆಗೆ ಹತ್ತಿರವಿರುವಾಗಲೇ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣರವರು ಅಂದಿನ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮೀಷನ್ ಕೇಳುತ್ತಿದೆ ಎಂಬ ಆರೋಪ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಅದು ಕಾಂಗ್ರೆಸ್‌ಗೆ ಪ್ರಬಲ ಅಸ್ತ್ರವಾಯಿತು. ಅದನ್ನು ಸಮರ್ಪಕವಾಗಿ ಬಳಸಿಕೊಂಡ ಕಾಂಗ್ರೆಸ್ ನಾಯಕರು ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ ಎಂದು ಬಿಂಬಿಸುವಲ್ಲಿಯೂ ಯಶಸ್ವಿಯಾದರು. ಅಷ್ಟೇ ಅಲ್ಲದೆ ಅದು ಚುನಾವಣೆ ವೇಳೆ ಕಾಂಗ್ರೆಸ್‌ಗೆ ಲಾಭ ತಂದಿತು ಎನ್ನುವುದರಲ್ಲಿಯೂ ಎರಡು ಮಾತಿಲ್ಲ.
ಚುನಾವಣೆ ಮುಗಿದಿದೆ. ಕಾಂಗ್ರೆಸ್ ನ ಹೋರಾಟ ಮತ್ತು ತಂತ್ರಗಳು ಫಲಿಸಿವೆ 135 ಸ್ಥಾನಗಳನ್ನು ಪಡೆದು ಅಧಿಕಾರ ಹಿಡಿದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ನಡೆಯುತ್ತಿದೆ. ಆದರೆ ಸರ್ಕಾರಕ್ಕೆ ಜೆಡಿಎಸ್ ಮತ್ತು ಬಿಜೆಪಿ ಪ್ರತಿ ಹಂತದಲ್ಲಿಯೂ ನಿದ್ದೆಗೆಡಿಸುವಂತೆ ಮಾಡುತ್ತಿದ್ದಾರೆ. ಮೇಲಿಂದ ಮೇಲೆ ಆರೋಪ, ಪ್ರತಿಭಟನೆಗಳನ್ನು ನಡೆಸುತ್ತಲೇ ಬರುತ್ತಿದ್ದಾರೆ. ವರ್ಗಾವಣೆ, ಕಮೀಷನ್ ದಂಧೆ, ಲಂಚದ ಆರೋಪಗಳನ್ನು ಸರ್ಕಾರದ ವಿರುದ್ಧ ಅಸ್ತ್ರವಾಗಿ ಪ್ರಯೋಗಿಸುತ್ತಿದ್ದಾರೆ.

ಸರ್ಕಾರದ ವಿರುದ್ಧ ಜೆಡಿಎಸ್ ಬಿಜೆಪಿ ಹೋರಾಟ
ಹಿಂದೆ ಚುನಾವಣೆಗಳು ನಡೆದು ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ವಿಪಕ್ಷಗಳು ಮೌನಕ್ಕೆ ಶರಣಾಗಿ ಬಿಡುತ್ತಿದ್ದವು. ಆಡಳಿತ ಪಕ್ಷವನ್ನು ಅಷ್ಟೊಂದಾಗಿ ಕಾಡುತ್ತಿರಲಿಲ್ಲ. ಆದರೆ ಈ ಬಾರಿ ಹಾಗಿಲ್ಲ. ವಿಪಕ್ಷವಾದ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದ ವೈಫಲ್ಯವನ್ನು ಬಯಲಿಗೆಳೆಯುತ್ತಾ ಪ್ರತಿಭಟನೆಗೆ ಮುಂದಾಗುತ್ತಿವೆ. ಇದು ಮುಂಬರುವ ಲೋಕಸಭಾ ಚುನಾವಣೆ ಇರುವ ಕಾರಣಕ್ಕೋ ಅಥವಾ ಆಡಳಿತ ರೂಢ ಕಾಂಗ್ರೆಸ್‌ನ್ನು ಇಕ್ಕಟ್ಟಿಗೆ ಸಿಲುಕಿಸಿ ಜನಾಕ್ರೋಶವನ್ನುಂಟು ಮಾಡುವ ಪ್ರಯತ್ನವೋ? ಗೊತ್ತಿಲ್ಲ. ಅದು ಏನೇ ಇರಲಿ ಸರ್ಕಾರ ಎಂದ ಮೇಲೆ ಪ್ರಬಲ ವಿರೋಧ ಪಕ್ಷಗಳು ಇರಲೇ ಬೇಕು. ಅದು ಕರ್ನಾಟಕದ ಮಟ್ಟಿಗೆ ನಿಜವಾಗಿದೆ.
ಇಲ್ಲಿ ನಾವು ಗಮನಿಸಬೇಕಾದ ವಿಚಾರ ಏನೆಂದರೆ ಯಾವುದೇ ರಾಜಕೀಯ ಪಕ್ಷಗಳು ಏನೇ ಮಾಡಿದರೂ ಅದರಲ್ಲಿ ರಾಜಕೀಯ ಉದ್ದೇಶ ಇದ್ದೇ ಇರುತ್ತದೆ. ಇನ್ನೊಂದು ಹತ್ತು ತಿಂಗಳಲ್ಲಿ ಲೋಕಸಭಾ ಚುನಾವಣೆ ಬರುತ್ತಿದ್ದು, ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವುದು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನ ಗುರಿಯಾಗಿದೆ. ಹೀಗಾಗಿ ಎಲ್ಲ ವಿಚಾರಗಳು ರಾಜಕೀಯ ಸ್ವರೂಪ ಪಡೆಯುತ್ತಿವೆ. ಅದು ಏನೇ ಇರಲಿ ರಾಜಕಾರಣಿಗಳ ರಾಜಕೀಯದ ಬಡಿದಾಟದಲ್ಲಿ ಜನಸಾಮಾನ್ಯರು ತಬ್ಬಲಿಯಾಗದಿದ್ದರೆ ಅಷ್ಟೇ ಸಾಕು.












Click it and Unblock the Notifications