Lok Sabha Election 2024: INDIA ನಾಯಕರಿಗೆ ಗೆಲುವಿನ ವಿಶ್ವಾಸ ಬಂದಿದ್ದೇಗೆ ಗೊತ್ತಾ?

ಬೆಂಗಳೂರು, ಮೇ 31: ಏಳು ಹಂತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ಕೊನೆಯ ಹಂತಕ್ಕೆ ಬಂದು ತಲುಪಿದ್ದು, ಶನಿವಾರ(ಜೂ.1)ರಂದು ಏಳನೇ ಹಂತದ ಚುನಾವಣೆ ನಡೆಯುವುದರೊಂದಿಗೆ ಚುನಾವಣಾ ಪ್ರಕ್ರಿಯೆಗೆ ತೆರೆಬೀಳಲಿದೆ. ಇನ್ನೇನಿದ್ದರೂ ಜೂ.4ರ ಫಲಿತಾಂಶದತ್ತ ಎಲ್ಲರ ಚಿತ್ತ ಹರಿದಿರುವ ಕಾರಣ ಆಯ್ಕೆ ಬಯಸಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಎದೆ ಬಡಿತ ಹೆಚ್ಚಲಾರಂಭಿಸಿದೆ. ಹಾಗೆಯೇ ಎನ್ ಡಿಎ ಮತ್ತು ಐಎನ್ ಡಿಐಎ ನಡುವೆ ಅಧಿಕಾರ ಯಾರಿಗೆ ಎಂಬುದು ಗೊತ್ತಾಗಲಿದೆ.

ಈ ಬಾರಿಯ ಲೋಕಸಭಾ ಚುನಾವಣೆ ಇದುವರೆಗೆ ನಡೆದಿರುವ ಚುನಾವಣೆಗಿಂತ ಭಿನ್ನವಾಗಿದೆ. ಒಂದೆಡೆ ಬಿಜೆಪಿ ನೇತೃತ್ವದ ಎನ್ ಡಿಎ ಮತ್ತೊಂದೆಡೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಐಎನ್ ಡಿಐಎ ಚುನಾವಣೆಗೆ ಹೋಗಿದ್ದು, ಸದ್ಯ ಎನ್ ಡಿಎ ಮತ್ತು ಐಎನ್ ಡಿಐಎ ನಡುವಿನ ಸಮರವಾಗಿ ಬಿಂಬಿತವಾಗಿದೆ. ಐಎನ್‌ಡಿಐಎ ನಾಯಕರು ನಮ್ಮದು ಸಾಮೂಹಿಕ ನಾಯಕತ್ವದ ಹೋರಾಟ ಎಂದು ಹೇಳುತ್ತಿದ್ದರೂ ಮತದಾರರು ಮಾತ್ರ ರಾಹುಲ್ ಗಾಂಧಿ ಮತ್ತು ನರೇಂದ್ರಮೋದಿ ನಡುವಿನ ಯುದ್ಧ ಎಂಬಂತೆಯೇ ಈ ಚುನಾವಣೆಯನ್ನು ನೋಡಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Lok Sabha Election 2024 How INDIA Leaders Are Confident Of Victory

ಐಎನ್ ಡಿಐಎ ಅರ್ಥಾತ್ ಇಂಡಿಯಾ ಒಕ್ಕೂಟದಲ್ಲಿ ರಾಹುಲ್ ಗಾಂಧಿಯೇ ಹೆಚ್ಚಾಗಿ ಬಿಂಬಿತವಾಗಿರುವುದರಿಂದ ಮತ್ತು ರಾಹುಲ್ ಗಾಂಧಿ ಹೋದಲ್ಲಿ ಬಂದಲ್ಲಿ ನರೇಂದ್ರಮೋದಿ ಅವರನ್ನು ಟೀಕೆ ಮಾಡುತ್ತಾ ಬಂದ ಕಾರಣದಿಂದಾಗಿ ಎಲ್ಲರೂ ಮತ್ತೆ ರಾಹುಲ್ ಗಾಂಧಿಯೇ ಪ್ರಧಾನಿ ಅಭ್ಯರ್ಥಿ ಎಂಬುದನ್ನು ಮನದಟ್ಟು ಮಾಡಿಕೊಂಡಿದ್ದಾರೆ. ಚುನಾವಣೆಗೆ ಮುನ್ನ ಇಂಡಿಯಾ ಒಕ್ಕೂಟ ಪ್ರಧಾನಿ ಅಭ್ಯರ್ಥಿಯನ್ನು ಘೋಷಣೆ ಮಾಡಲೇ ಇಲ್ಲ. ನಾವೇನಿದ್ದರೂ ಸಾಮೂಹಿಕವಾಗಿ ಚುನಾವಣೆಗೆ ಹೋಗುತ್ತೇವೆ ನಮ್ಮ ಉದ್ದೇಶ ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ತಡೆಯುವುದು ಎಂಬುದನ್ನು ನಾಯಕರು ಹೇಳುತ್ತಾ ಬಂದಿದ್ದಾರೆ.

ಕಾಂಗ್ರೆಸ್ ನ ಕಾರ್ಯತಂತ್ರ ಗೆಲುವು ತರುತ್ತಾ?

ಚುನಾವಣೆ ಸಂದರ್ಭದಲ್ಲಿಯೂ ಕೇವಲ ನರೇಂದ್ರಮೋದಿಯನ್ನು ಟೀಕಿಸುವುದನ್ನು ಬಿಟ್ಟರೆ ಇಡೀ ಸರ್ಕಾರವನ್ನು ಅಲ್ಲಾಡಿಸುವಂತಹ ಮತ್ತು ಜನ ವಿರೋಧಿ ಅಲೆಯನ್ನು ಸೃಷ್ಟಿಸುವ ಯಾವ ಅಸ್ತ್ರವೂ ವಿರೋಧಪಕ್ಷದವರಿಗೆ ಸಿಗದಿರುವುದು ದುರಂತವೇ ಸರಿ. ಆದರೂ ನರೇಂದ್ರಮೋದಿಯನ್ನು ವಿರೋಧಿಸುವ ನಾಯಕರೆಲ್ಲರೂ ಒಟ್ಟಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಿರುವುದು ಮತ್ತು ಕಾಂಗ್ರೆಸ್ ಚುನಾವಣಾ ಇತಿಹಾಸದಲ್ಲಿಯೇ ಕಡಿಮೆ ಸ್ಥಾನದಲ್ಲಿ ಸ್ಪರ್ಧಿಸಿ ಹೆಚ್ಚಿನ ಸ್ಥಾನಗಳನ್ನು ಮಿತ್ರ ಪಕ್ಷದವರಿಗೆ ಬಿಟ್ಟುಕೊಟ್ಟಿದ್ದು ಇದೇ ಮೊದಲು.

Lok Sabha Election 2024 How INDIA Leaders Are Confident Of Victory

ಕಾಂಗ್ರೆಸ್ ನ ಈ ಕಾರ್ಯತಂತ್ರ ಎಷ್ಟರ ಮಟ್ಟಿಗೆ ಲಾಭ ತಂದುಕೊಡುತ್ತದೆ ಎಂಬುದು ಈ ಬಾರಿಯ ಫಲಿತಾಂಶದಲ್ಲಿ ಗೊತ್ತಾಗಲಿದೆ. ಆದರೆ ಇಂಡಿಯಾ ಒಕ್ಕೂಟದ ನಾಯಕರು ಮಾತ್ರ ನಾವೇ ಗೆಲ್ಲೋದು ಎಂಬ ಆತ್ಮವಿಶ್ವಾನಸದಲ್ಲಿದ್ದಾರೆ. ಇದಕ್ಕೆ ಕಾರಣ ಪ್ರಣಾಳಿಕೆಯಲ್ಲಿ ಘೋಷಿಸಲಾಗಿರುವ ಗ್ಯಾರಂಟಿ ಯೋಜನೆಗಳು ನಮ್ಮ ಕೈಹಿಡಿಯುತ್ತದೆ. ಮಹಿಳಾ ಮತದಾರರು ಒಕ್ಕೂಟವನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವೂ ನಾಯಕರಲ್ಲಿದೆ. ಹೀಗಾಗಿಯೇ ಫಲಿತಾಂಶ ಬಂದ ಎರಡು ದಿನದಲ್ಲಿ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ ಎಂಬ ಮಾತುಗಳನ್ನು ಕಾಂಗ್ರೆಸ್ ನ ನಾಯಕರು ಹೇಳುತ್ತಿದ್ದಾರೆ.

ದ.ಭಾರತದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ

ಕಾಂಗ್ರೆಸ್ ಸೇರಿದಂತೆ ಮಿತ್ರಕೂಟ ಅರ್ಥಾತ್ ಇಂಡಿಯಾ ಒಕ್ಕೂಟ ತಮ್ಮ ಗೆಲುವಿಗೆ ಪೂರಕವಾದ ಹತ್ತಾರು ಅಂಶಗಳನ್ನು ಮುಂದಿಡುತ್ತಿದ್ದಾರೆ. ಈ ಬಾರಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದು ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆಸಲಾಗಿದೆ ಎಂದು ಹೇಳಲಾಗದು. ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿಗಿಂತ ಹೆಚ್ಚಾಗಿ ಪ್ರಿಯಾಂಕ ವಾದ್ರಾ ಕಾಣಿಸಿಕೊಂಡರು. 2019ರ ಚುನಾವಣೆಗೆ ಹೋಲಿಸಿದರೆ 2024ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಹೆಚ್ಚಿನ ಪ್ರಚಾರ ಸಭೆ, ರಾಲಿಗಳಲ್ಲಿ ಪಾಲ್ಗೊಂಡಿದ್ದು ಕಡಿಮೆಯೇ ಎನ್ನಬೇಕು.

Lok Sabha Election 2024 How INDIA Leaders Are Confident Of Victory

ಹಿಂದಿನ ಚುನಾವಣೆಗಿಂತ ಈ ಬಾರಿಯ ಚುನಾವಣೆ ಕಾಂಗ್ರೆಸ್ ನಾಯಕರಿಗೆ ಹೆಚ್ಚು ಹುಮ್ಮಸ್ಸು ಮೂಡಿಸಿದೆ. ಉತ್ತರ ಭಾರತಕ್ಕಿಂತ ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡು ಬರುವ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಅದರಲ್ಲೂ ಕರ್ನಾಟಕ ಮತ್ತು ತೆಲಂಗಾಣದಿಂದ ನಿರೀಕ್ಷೆಗೂ ಮೀರಿದ ಸ್ಥಾನಗಳು ಬರುತ್ತವೆ ಎಂಬ ಬಲವಾದ ನಂಬಿಕೆಯೂ ನಾಯಕರಲ್ಲಿದೆ. ಹೀಗಾಗಿಯೇ ಗೆಲುವಿನ ಹುಮ್ಮಸ್ಸು ಐಎನ್ ಡಿಐಎ ನಾಯಕರಿಗೆ ಹೆಚ್ಚಾಗಿದೆ.

ಫಲಿತಾಂಶಕ್ಕೆ ಮುನ್ನವೇ ಐಎನ್‌ಡಿಐಎ ಸಭೆ

ಗೆಲುವಿನ ವಿಶ್ವಾಸದಲ್ಲಿರುವ ಐಎನ್ ಡಿಐಎ ನಾಯಕರು ಇದೀಗ ಫಲಿತಾಂಶ ಬರುವ ಮುನ್ನವೇ ಸಭೆ ಸೇರಿ ಮುಂದೆ ಮಾಡಬೇಕಾಗಿರುವ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಜೂ.1ರಂದು ಸಭೆ ಕರೆದಿರುವುದು ಅಚ್ಚರಿ ಮೂಡಿಸಿದೆ. ಇಷ್ಟರ ಮಟ್ಟಿಗೆ ಅವರಿಗೆ ವಿಶ್ವಾಸ ಮೂಡಲು ಕಾರಣ ಕಾಂಗ್ರೆಸ್ ನ ಗ್ಯಾರಂಟಿ ಪ್ರಣಾಳಿಕೆ ಎಂದರೆ ತಪ್ಪಾಗಲಾರದು. ಈಗಾಗಲೇ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ ಕೈ ಹಿಡಿದಿದೆ. ಅದರಂತೆ ದೇಶದಲ್ಲಿಯೂ ಮತದಾರರು ಕೈ ಹಿಡಿಯುತ್ತಾರೆ ಎಂಬ ವಿಶ್ವಾಸ ನಾಯಕರದ್ದಾಗಿದೆ.

ಒಟ್ಟಾರೆ ಹೇಳಬೇಕೆಂದರೆ ಈ ಬಾರಿಯ ಲೋಕಸಭಾ ಚುನಾವಣೆ ಪ್ರಧಾನಿ ನರೇಂದ್ರಮೋದಿ ವಿರೋಧಿಗಳಲ್ಲಿ ಗೆಲುವಿನ ವಿಶ್ವಾಸವನ್ನು ತಂದಿದ್ದು, ಫಲಿತಾಂಶಕ್ಕೂ ಮುನ್ನವೇ ನಾಯಕರು ಗೆಲುವಿನ ಕುರಿತಂತೆ ಮಾತುಗಳನ್ನಾಡುತ್ತಿದ್ದಾರೆ. ಪ್ರತಿ ರಾಜಕೀಯ ಪಕ್ಷ ಮತ್ತು ನಾಯಕರು ಗೆಲುವು ನಮ್ಮದೇ ಎನ್ನುವುದು ಸಾಮಾನ್ಯ. ಯಾರು ಏನೇ ಹೇಳಿದರೂ ಮತದಾರರು ಯಾರತ್ತ ಒಲವು ತೋರಿದ್ದಾರೆ? ಯಾರಿಗೆ ಅಧಿಕಾರದ ಪಟ್ಟ ಕಟ್ಟುತ್ತಾರೆ? ಎಂಬುದು ಗೊತ್ತಾಗಬೇಕಾದರೆ ಜೂ.4ರ ಫಲಿತಾಂಶ ಬರುವ ತನಕ ಕಾಯುವುದು ಅನಿವಾರ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+