ಲೋಕಸಭೆ ಚುನಾವಣೆ ಕಾರ್ಯ: ಶಿಕ್ಷಕರು, ಉಪನ್ಯಾಸಕರಿಗೆ ವಿನಾಯಿತಿ
ಬೆಂಗಳೂರು, ಮಾರ್ಚ್ 20: ಲೋಕಸಭೆ ಚುನಾವಣೆ 2024ರ ವೇಳಾಪಟ್ಟಿ ಪ್ರಕಟವಾಗಿದೆ. ಕರ್ನಾಟಕದಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳ ಜೊತೆಗೆ ಚುನಾವಣೆಯೂ ನಿಗದಿಯಾಗಿದೆ. ಪರೀಕ್ಷೆ, ಮೌಲ್ಯ ಮಾಪನ ಕಾರ್ಯವೂ ನಡೆಯಲಿದೆ.
ಚುನಾವಣಾ ಆಯೋಗ ಈಗಾಗಲೇ ವೇಳಾಪಟ್ಟಿ ಪ್ರಕಟವಾಗಿದೆ. ಕರ್ನಾಟಕ 28 ಕ್ಷೇತ್ರಗಳಿಗೆ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣೆ ಕಾರ್ಯದ ಜೊತೆ ಪರೀಕ್ಷೆ ಮೌಲ್ಯ ಮಾಪನ ಕಾರ್ಯವೂ ನಡೆಯಬೇಕಿದೆ.

ಯಾರಿಗೆ ವಿನಾಯಿತಿ?; ಎಸ್‌ಎಸ್‌ಎಲ್‌ಸಿ ಪರೀಕ್ಷೆ, ಪಿಯುಸಿ ಮೌಲ್ಯ ಮಾಪನ ಕಾರ್ಯದಲ್ಲಿ ತೊಡಗುವ ಸಿಬ್ಬಂದಿಗಳಿಗೆ ಚುನಾವಣಾ ಕಾರ್ಯದಿಂದ ವಿನಾಯಿತಿ ನೀಡುವ ಕುರಿತು ಆದೇಶ ಹೊರಡಿಸಲಾಗಿದೆ.
ಈ ಕುರಿತು ರಿತೇಶ್ ಕುಮಾರ್ ಸಿಂಗ್, ಸರ್ಕಾರದ ಪ್ರಧಾನ ಕಾರ್ಯದರ್ಶಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದ್ದಾರೆ. ಈ ಕುರಿತು ಎಲ್ಲಾ ಜಿಲ್ಲೆಗಳ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಿರ್ದೇಶ ನೀಡಲಾಗಿದೆ.
ಆದೇಶ ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಎಸ್. ಎಸ್.ಎಲ್.ಸಿ/ ಪಿಯುಸಿ ಮೌಲ್ಯಮಾಪನ ಕಾರ್ಯಕ್ಕೆ ನಿಯೋಜನೆಗೊಂಡಿರುವ ಪ್ರಾಂಶುಪಾಲರು/ ಉಪನ್ಯಾಸಕರು/ ಶಿಕ್ಷಕರಿಗೆ ಚುನಾವಣೆ ಕಾರ್ಯದಿಂದ ವಿನಾಯಿತಿ ನೀಡುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರು ಮತ್ತು ಶಿಕ್ಷಕರನ್ನು ಚುನಾವಣೆ ಕಾರ್ಯಗಳಿಗೆ ನಿಯೋಜನೆ ಮಾಡಿಕೊಳ್ಳಲಾಗುತ್ತಿದೆ.
ಸರ್ಕಾರದ ಆದೇಶ ದಿನಾಂಕ 20/10/2022ರಲ್ಲಿ ಪಿಯು ಪರೀಕ್ಷಾ ವಿಭಾಗವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯೊಂದಿಗೆ ವಿಲೀನಗೊಳಿಸಿ ಆದೇಶಿಸಲಾಗಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆ-1, 2 ಮತ್ತು 3 ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆ-1, 2 ಮತ್ತು 3 ಪರೀಕ್ಷೆಗಳನ್ನು ಮಂಡಲಿಯಿಂದ ನಡೆಸಬೇಕಾಗಿರುತ್ತದೆ ಎಂದು ಹೇಳಿದೆ.
ಪ್ರಸ್ತುತ ದ್ವಿತೀಯ ಪಿಯುಸಿ ಪರೀಕ್ಷೆಗಳು ವಾರಂಭವಾಗಿದ್ದು, ಇನ್ನೇನು ಅಂತಿಮವಾಗಲಿದ್ದು, ಇದರ ಹಿಂದಯೇ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಪ್ರಾರಂಭವಾಗುತ್ತದೆ. ನಂತರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ತ್ವರಿತವಾಗಿ ಅಂತಿಮಗೊಳಿಸಿ ಫಲಿತಾಂಶ ಪ್ರಕಟಿಸ ಬೇಕಾಗಿರುವುದರಿಂದ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಮೌಲ್ಯಮಾಪನ ಕಾರ್ಯಕ್ಕೆ ನಿಯೋಜನೆಗೊಂಡಿರುವ ಪ್ರಾಂಶುಪಾಲರು/ ಉಪನ್ಯಾಸಕರು/ ಶಿಕ್ಷಕರನ್ನು ಮೌಲ್ಯಮಾವನ ಕಾರ್ಯ ಮುಗಿಯುವವರೆಗೂ ಚುನಾವಣಾ ಕಾರ್ಯದಿಂದ ವಿನಾಯಿತಿ ನೀಡಿ ತದನಂತರ ಚುನಾವಣಾ ಕಾರ್ಯಕ್ಕೆ ನಿಯೋಜಿಸಿಕೊಳ್ಳುವಂತೆ ಕೋರಿದೆ ಎಂದು ತಿಳಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಈಗ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯುತ್ತಿವೆ. ಮಾರ್ಚ್ 25ರಿಂದ ಏಪ್ರಿಲ್ 6ರ ತನಕ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ನಡೆಯಲಿವೆ. ಶಾಂತಿ-ಸುವ್ಯವಸ್ಥೆ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144 ಅನ್ವಯ ನಿರ್ಭಂದಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಅಲ್ಲದೇ ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಲಿನ ಝೆರಾಕ್ಸ್, ಕಂಪ್ಯೂಟರ್, ಸೈಬರ್ ಸೆಂಟರ್‌ಗಳು ಕಾರ್ಯನಿರ್ವಹಿಸುವಂತಿಲ್ಲ ಮತ್ತು ಅನಧೀಕೃತ ವ್ಯಕ್ತಿ ಮತ್ತು ವ್ಯಕ್ತಿಗಳ ಗುಂಪುಗಳಿಗೆ ಪ್ರವೇಶ ನಿಷೇಧಿಸಿದೆ.
ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಕ್ತಾಯಗೊಂಡ ಬಳಿಕ ಮೌಲ್ಯ ಮಾಪನ ಕಾರ್ಯಗಳು ಆರಂಭವಾಗಲಿದೆ. ಬಳಿಕ ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ನಡೆಯಬೇಕಿದೆ. ಆದ್ದರಿಂದ ಚುನಾವಣಾ ಕಾರ್ಯದಿಂದ ಪರೀಕ್ಷಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗೆ ವಿನಾಯಿತಿ ನೀಡಬೇಕು ಎಂದು ತಿಳಿಸಲಾಗಿದೆ.












Click it and Unblock the Notifications