ಡಾ.ಕೆ.ಸುಧಾಕರ್ ಗೆಲ್ಲಿಸಿ ನರೇಂದ್ರ ಮೋದಿ ಅವರಿಗೆ ಶಕ್ತಿ ನೀಡಿ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ
ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರಿಗೆ ಭರ್ಜರಿ ಬೆಂಬಲ ಸಿಗುತ್ತಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಡಾ. ಕೆ. ಸುಧಾಕರ್ ಅವರು ಭರ್ಜರಿ ರೋಡ್ ಶೋ ನಡೆಸಿ, ತಮ್ಮ ಗೆಲುವಿಗಾಗಿ ರಣಕಹಳೆಯ ಮೊಳಗಿಸಿದ್ದಾರೆ. ದೇವನಹಳ್ಳಿಗೆ ತೆರಳಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ನಮನ ಸಲ್ಲಿಸಿದ ಅವರು, ವಿಕಸಿತ ಚಿಕ್ಕಬಳ್ಳಾಪುರ ನಿರ್ಮಾಣ ಸಂಕಲ್ಪ ಮಾಡಿದರು.
ಚಿಕ್ಕಬಳ್ಳಾಪುರದ ಯೋಗಿನಾರೇಯಣ ದೇಗುಲಕ್ಕೆ ತೆರಳಿ ಬ್ರಹ್ಮಜ್ಞಾನಿ ಕೈವಾರ ತಾತಯ್ಯ ಅವರ ಆಶೀರ್ವಾದ ಪಡೆದರು. ಆ ನಂತರ ವೀರಾಂಜನೇಯ ದೇವಸ್ಥಾನಕ್ಕೆ ಭೇಟಿ ಕೊಟ್ಟು ಗೋಪೂಜೆ ನೆರವೇರಿಸಿದರು. ಆ ಬಳಿಕ, ಜೈ ಭೀಮ್ ಮೆಮೊರಿಯಲ್ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಆಟೋ ಚಾಲಕರೊಂದಿಗೆ ಚರ್ಚೆ ನಡೆಸಿದರು. ಈ ಮೂಲಕ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರತಿ ಸಮುದಾಯಗಳ ನಾಡಿ ಮಿಡಿತ ಅರಿತು ತಾರತಮ್ಯವಿಲ್ಲದೆ ಎಲ್ಲರನ್ನ ಒಂದಾಗಿ ಕರೆದೊಯ್ಯುವ ಸಂದೇಶವನ್ನು ಸಾರಿದರು. ಬಳಿಕ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

'ಡಾ.ಕೆ.ಸುಧಾಕರ್ ಉತ್ತಮ ವಾಗ್ಮಿ'
ನಾಮಪತ್ರ ಸಲ್ಲಿಕೆ ಬಳಿಕ ಅಭ್ಯರ್ಥಿ ಡಾ. ಕೆ. ಸುಧಾಕರ್ ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಹಿರಿಯ ನಾಯಕರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಾತನಾಡಿ, ಮೊದಲ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಆಗಿರುವುದು ವೈಯಕ್ತಿಕ ಹಿತಾಸಕ್ತಿಗಾಗಿ ಅಲ್ಲ. ನರೇಂದ್ರ ಮೋದಿಯಂತಹ ಸುಭದ್ರ ನಾಯಕನನ್ನು ನೀಡಲು ನಾವು ಶ್ರಮಿಸುತ್ತಿದ್ದೇವೆ. ಡಾ. ಕೆ. ಸುಧಾಕರ್ ಅವರನ್ನು ಆಶೀರ್ವದಿಸಲು ಸಾವಿರಾರು ಕಾರ್ಯಕರ್ತರು, ಬೆಂಬಲಿಗರು ಬಂದಿದ್ದಾರೆ. ಡಾ. ಕೆ. ಸುಧಾಕರ್ ಅವರು ಕ್ರಿಯಾಶೀಲ, ಅಭಿವೃದ್ಧಿಯ ಚಿಂತನೆ, ಉತ್ತಮ ವಾಗ್ಮಿ ಹಾಗೂ ಸಂಸತ್ತಿಗೆ ಹೋಗುವಂತಹ ಎಲ್ಲ ಅರ್ಹತೆ ಗಳಿಸಿದ್ದಾರೆ. ಈಗ ಅವರನ್ನು ಗೆಲ್ಲಿಸಿ ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.
ಎಲ್ಲರನ್ನೂ ಸಮಾನರಾಗಿ ಕಾಣುತ್ತೇನೆ
ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರು ಮಾತನಾಡಿ ಬಯಲು ಸೀಮೆಗೆ ಶಾಶ್ವತ ಕುಡಿವ ನೀರಿನ ಯೋಜನೆ ಬೇಕಿದೆ. ನಾವು & ಜೆಡಿಎಸ್ ಸೇರಿ ಖಂಡಿತ ಉತ್ತಮ ಯೋಜನೆ ನೀಡುತ್ತೇವೆ ಎಚ್‌ಎನ್ ವ್ಯಾಲಿ, ಕೆಸಿ ವ್ಯಾಲಿ ತೃತೀಯ ಹಂತದ ಯೋಜನೆಗೆ ಬಿಜೆಪಿ ಸರ್ಕಾರ ಅನುದಾನ ಮೀಸಲಿಟ್ಟಿದೆ. ಅದನ್ನು ಕಾಂಗ್ರೆಸ್ ಸರ್ಕಾರವು ಜಾರಿ ಮಾಡಿಲ್ಲ. ಕಾಂಗ್ರೆಸ್ ನಾಯಕರು ಯಾವುದೇ ಅಭಿವೃದ್ಧಿ ಮಾಡಿಲ್ಲ, ಆದ್ದರಿಂದ ಕೇವಲ ನಿಂದನೆ ಮೂಲಕ ಉತ್ತರ ಕೊಡುತ್ತಿದ್ದಾರೆ. ನಾನು, ಸಾಮಾನ್ಯ ರೈತನ ಮನೆಯಲ್ಲಿ ಹುಟ್ಟಿ ಬಂದಿದ್ದೇನೆ. ನಾನು ಸಾಮಾನ್ಯ ಮೇಷ್ಟ್ರ ಮಗ. ಈ ಸಮಾಜವನ್ನು ತಿದ್ದುವ ಶಿಕ್ಷಕನ ಮಗನಾಗಿ ಬೆಳೆದಿದ್ದೇನೆ ಎಂದರು. ಅಲ್ಲದೆ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಮಾತು ನೀಡಿದರು.

ನಾನು ಜಾತಿ ರಾಜಕಾರಣ ಮಾಡಿಲ್ಲ. ಆದರೆ ಕಾಂಗ್ರೆಸ್‌ನವರು ಜಾತಿಯನ್ನೇ ತಮ್ಮ ಬಂಡವಾಳ ಮಾಡಿಕೊಂಡಿದ್ದಾರೆ. ಒಬ್ಬ ಒಕ್ಕಲಿಗ ಅಂದ್ರೆ ಎಲ್ಲ ಸಮುದಾಯಗಳನ್ನ ಒಟ್ಟಿಗೆ ತೆಗೆದುಕೊಂಡು ಹೋಗುವ ಅನ್ನದಾತ ಎನ್ನುತ್ತಾರೆ. ನಾನು, ಎಲ್ಲ ಮತದಾರರನ್ನ ಸಮಾನವಾಗಿ ಕಾಣುತ್ತೇನೆ. ಕಳೆದ 10 ತಿಂಗಳಲ್ಲಿ ನಾನು, ಅಜ್ಞಾತವಾಸ ಅನುಭವಿಸಿದ್ದೇನೆ. ನಾನೇನೂ ತಪ್ಪು ಮಾಡಿಲ್ಲ, ಜನರ ಸೇವೆಯನ್ನು ನಾನು ಮಗನಂತೆ ಮಾಡುತ್ತೇನೆ ಎಂದು ಹೇಳಿ ಭಾವುಕರಾದರು. ಈ ವೇಳೆ ಮಾಜಿ ಸಚಿವರಾದ ಎಂಟಿಬಿ ನಾಗರಾಜ್, ಬೈರತಿ ಬಸವರಾಜು, ಶಾಸಕ ಧೀರಜ್ ಮುನಿರಾಜು, ಸಂಸದ ಮುನಿಸ್ವಾಮಿ ಮತ್ತಿತರ ಪ್ರಮುಖರು ಇದ್ದರು.












Click it and Unblock the Notifications