Lok Sabh Election: 'ಬಿಜೆಪಿ ಗ್ರಾಮ ಪರಿಕ್ರಮ ಯಾತ್ರೆ'ಗೆ ಚಾಲನೆ, ಮಾಹಿತಿ
ಬೆಂಗಳೂರು, ಫೆಬ್ರವರಿ 12: ಲೋಕಸಭಾ ಚುನಾವಣೆ 2024 ಪ್ರಯುಕ್ತ ರಾಜ್ಯ ಬಿಜೆಪಿಯು ಕರ್ನಾಟಕದಲ್ಲಿ 'ಬಿಜೆಪಿ ಗ್ರಾಮ ಪರಿಕ್ರಮ ಯಾತ್ರೆ' ಕೈಗೊಂಡಿದ್ದಾರೆ. ಈ ಯಾತ್ರೆಗೆ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ದಿಬ್ಬಲೂರಿನಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು 'ಪರಿಕ್ರಮ ಯಾತ್ರೆ'ಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಇದೇ ವೇಳೆ 32 ಸಂಘಟನಾತ್ಮಕ ಜಿಲ್ಲೆಗಳಲ್ಲಿಯೂ ಚಾಲನೆ ದೊರೆಯಲಿದೆ. ಲೋಕಸಭಾ ಚುನಾವಣೆ ಪ್ರಯುಕ್ತ ಈ ಯಾತ್ರೆಯು ರಾಜ್ಯದ ಉದ್ದಗಲಕ್ಕೂ ಸಂಚರಿಲಿದೆ.

ದಿನವೊಂದಕ್ಕೆ ಐದು ಹಳ್ಳಿಗಳಂತೆ ಒಂದು ತಿಂಗಳ ಕಾಲ ಈ ಬಿಜೆಪಿ ಯಾತ್ರೆ ಸಂಚರಿಸಲಿದೆ. ಈ ವೇಳೆ ಮಾತನಾಡಿದ, ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು, ಈ ಭಾಗದ ಬಿಜೆಪಿ ಕಾರ್ಯಕರ್ತರು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಕ್ಷೇತ್ರಗಳನ್ನು ಗೆಲ್ಲಿಸಿ ಕೊಡಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ
ಲೋಕಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು 28 ಕ್ಷೇತ್ರಗಳನ್ನು ಗೆಲ್ಲಿಸುವುದಾಗಿ ಹೇಳಿದ್ದಾರೆ. ಅವರೊಂದಿಗೆ ನಾವು ನಿಲ್ಲಬೇಕು. ರೈತರ ಕಲ್ಯಾಣಕ್ಕಾಗಿ ಮತ್ತೆ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ತೆಗೆದು ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ರೈತರ ಆರ್ಥಿಕ ಸ್ಥಿತಿ ಬಲಪಡಿಸಲು ಕೆಲಸ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಅಮಾಯಕ ರೈತರ ಮತ ಗಳಿಸಿ ಅಪಚಾರ ಎಸಗುತ್ತಿದೆ. ಕೋವಿಡ್ ವೇಳೆ ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ ಯೋಜನೆಯಡಿ 5 ಕೆಜಿ ಅಕ್ಕಿ ನೀಡಿದೆ. ಮುಂದೆಯೂ ಅಕ್ಕಿ ನೀಡಲಿದೆ. ಅದನ್ನು ತಾವು (ಅನ್ನಭಾಗ್ಯ) ಕೊಟ್ಟೆವು ಎಂದು ಅವರು ಹೇಳಿಕೊಳ್ಳಲಿಲ್ಲ. ಆದರೆ ಅಕ್ಕಿ ವಿತರಣೆಯ ಕ್ರೆಡಿಟ್ ತೆಗೆದುಕೊಳ್ಳುತ್ತಿದೆ.

ಕೇಂದ್ರ ಸರ್ಕಾರ ಪ್ರತಿ ಕೇಜಿಗೆ 29ರೂ.ನಲ್ಲಿ ಅಕ್ಕಿ ನೀಡುತ್ತಿದೆ. ಕಿಸಾನ್ ಸಮ್ಮಾನ್‌ನಡಿ ಕೇಂದ್ರ ಸರ್ಕಾರ 6 ಸಾವಿರ ರೂ. ನೀಡಿದರೆ, ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ 4 ಸಾವಿರ ರೂ. ಸೇರಿಸಿ ನೀಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯದಲ್ಲಿನ ಪಿಎಂ ಕಿಸಾನ್ ಅನ್ನು ರದ್ದುಗೊಳಿಸಿದರು.
ಸರ್ಕಾರದ ವಿರುದ್ಧ ದಲಿತರು ಪ್ರತಿಭಟಿಸಲಿ
ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ 11 ಸಾವಿರ ಕೋಟಿ ರೂಪಾಯಿಯನ್ನು ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗೆ ಬಳಸಿಕೊಂಡಿದೆ. ಇದು ದಲಿತರ ವಿಚಾರದಲ್ಲಿ ಸರ್ಕಾರ ಮಾಡಿದ ದೊಡ್ಡ ಅಪರಾಧ. ದಲಿತರ ಹಣವನ್ನು ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡಿದ್ದು, ದಲಿತ ಸಂಘಟನೆಗಳು ಪ್ರತಿಭಟಿಸಬೇಕು ಎಂದು ಮನವಿ ಮಾಡಿದರು.
ಚಿಕ್ಕಬಳ್ಳಾಪುರಕ್ಕೆ ಬಿಜೆಪಿ ಸರ್ಕಾರ ಪ್ರತ್ಯೇಕ ಹಾಲು ಒಕ್ಕೂಟ ನೀಡಿದ್ದರೆ, ಕಾಂಗ್ರೆಸ್ ಸರ್ಕಾರ ಅದನ್ನು ರದ್ದುಪಡಿಸಿದೆ. ಪ್ರೋತ್ಸಾಹಧನ ಹೆಚ್ಚಳ ಮಾಡುತ್ತೇವೆ ಎಂದು ಹೇಳಿ 715 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದಾರೆ. ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕೂಡ ನೀಡಿಲ್ಲ. ಗ್ಯಾರಂಟಿ ಕಾರ್ಯಕ್ರಮಕ್ಕೆ ಮಾಡಿದ ವೆಚ್ಚದಷ್ಟೂ ಯುವನಿಧಿಗೆ ಹಣ ನೀಡಿಲ್ಲ ಎಂದು ಡಾ.ಕೆ.ಸುಧಾಕರ್ ಆರೋಪಿಸಿದರು.
ಬಿಜೆಪಿಯಲ್ಲಿ ಹೊಸ ಚೈತನ್ಯ
ಬಿ.ವೈ.ವಿಜಯೇಂದ್ರ ಅವರಿಗೆ ಸಣ್ಣ ವಯಸ್ಸಿನಲ್ಲಿ ಉತ್ತಮ ಅವಕಾಶ ದೊರೆತಿದ್ದು, ಅದನ್ನು ಪಡೆಯಲು ಅವರಿಗೆ ಯೋಗವೂ ಇದೆ, ಯೋಗ್ಯತೆಯೂ ಇದೆ. ಬಿ.ಎಸ್.ಯಡಿಯೂರಪ್ಪ ಅವರ ಗುಣ ರಕ್ತಗತವಾಗಿ ವಿಜಯೇಂದ್ರ ಅವರಿಗೆ ಬಂದಿದೆ. ಅವರು ರಾಜ್ಯಾಧ್ಯಕ್ಷರಾದ ಬಳಿಕ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಬಂದಿದೆ ಎಂದು ತಿಳಿಸಿದರು.
ಹೈನುಗಾರಿಕೆ ಮತ್ತು ತೋಟಗಾರಿಕೆ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಎರಡು ಕಣ್ಣುಗಳಿದ್ದಂತೆ. ಇಲ್ಲಿ ಡೇರಿ ಸ್ಥಾಪನೆಯಾಗಲು ಬಿ.ಎಸ್.ಯಡಿಯೂರಪ್ಪನವರೇ ಕಾರಣ. ಅವರು ಮುಖ್ಯಮಂತ್ರಿಯಾಗಿದ್ದಾಗ ಮೆಗಾ ಡೇರಿ ಆರಂಭಿಸಲು 15 ಎಕರೆ ಜಮೀನು ಹಾಗೂ 10 ಕೋಟಿ ರೂ. ಅನುದಾನ ನೀಡಿದ್ದರು. ಜೊತೆಗೆ ಸರ್ಕಾರಿ ವೈದ್ಯಕೀಯ ಕಾಲೇಜನ್ನು ನೀಡಿದ್ದಾರೆ. ಅವರ ಸಂಪುಟದಲ್ಲಿ ಅತಿ ಕಿರಿಯ ಸಚಿವನಾಗಿ ಕಾರ್ಯನಿರ್ವಹಿಸಿದ್ದು, ಈಗ ಅವರ ಪುತ್ರನ ಜೊತೆಗೂ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇನೆ ಎಂದರು.












Click it and Unblock the Notifications