ರಾಷ್ಟ್ರೀಯ ಲೋಕ್ ಅದಾಲತ್; 29 ಲಕ್ಷ ಕೇಸ್ ಇತ್ಯರ್ಥ
ಬೆಂಗಳೂರು, ಮಾರ್ಚ್ 20: ಕಳೆದ ಶನಿವಾರ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ರಾಜ್ಯದಾದ್ಯಂತ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟು 29 ಲಕ್ಷ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ, 2,541 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ.
ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಕರ್ನಾಟಕ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಕೆ. ಸೋಮಶೇಖರ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ಹೈಕೋರ್ಟ್ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳು ಸೇರಿ ರಾಜ್ಯದಾದ್ಯಂತ ಒಟ್ಟು 1,041 ನ್ಯಾಯಪೀಠಗಳು ಅದಾಲತ್‌ನಲ್ಲಿ ಕಾರ್ಯ ನಿರ್ವಹಿಸಿದ್ದವು.

ಈ ಬಾರಿಯ ರಾಷ್ಟ್ರೀಯ ಲೋಕ ಅದಾಲತ್‌ಗೆ 3,76,577 ಪ್ರಕರಣಗಳು ಶಿಫಾರಸು ಆಗಿದ್ದವು. ಅವುಗಳ ಪೈಕಿ ನ್ಯಾಯಾಲಯದಲ್ಲಿ ಬಾಕಿಯಿದ್ದ 2,52,277 ಮತ್ತು ವ್ಯಾಜ್ಯ ಪೂರ್ವ 26,48,035 ಸೇರಿದಂತೆ ಒಟ್ಟು 29,00,312 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು.
ಅಲ್ಲದೆ, 771 ವೈವಾಹಿಕ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಿ, 281 ದಂಪತಿಗಳನ್ನು ಜೊತೆಗೂಡಿಸಲಾಗಿದೆ. 4,853 ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣಗಳನ್ನು ಇತ್ಯರ್ಥಪಡಿಸಿ 249 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ. ಹಾಗೆಯೇ, 12,563 ಚೆಕ್ ಬೌನ್ಸ್, 3,689 ವಿಭಾಗ ದಾವೆ ವಿಲೇವಾರಿ ಮಾಡಲಾಗಿದೆ. 281 ಭೂ ಸ್ವಾಧೀನ ಅಮಲ್ದಾರಿ ಪ್ರಕರಣಗಳನ್ನು ಇತ್ಯರ್ಥಪಡಿಸಿ, 114 ಕೋಟಿ ರೂ. ಪರಿಹಾರ ಕಲ್ಪಿಸಲಾಗಿದೆ ಎಂದು ವಿವರಿಸಿದರು.
50 ಲಕ್ಷ ರೂ.ಗೆ ಇತ್ಯರ್ಥ: ಧಾರವಾಡ ಪ್ರಧಾನ ಹಿರಿಯ ನ್ಯಾಯಾಧೀಶರ ನ್ಯಾಯಾಲಯದಲ್ಲಿದ್ದ ಮೂಲದಾವೆ ಪ್ರಕರಣವನ್ನು 6 ಕೋಟಿ ರೂ. ಮೊತ್ತಕ್ಕೆ ಇತ್ಯರ್ಥಪಡಿಸಲಾಗಿದೆ. ಮಂಗಳೂರಿನ ಅಪರ ಜಿಲ್ಲಾ ನ್ಯಾಯಾಲಯವು ವಾಣಿಜ್ಯ ಪ್ರಕರಣವೊಂದನ್ನು 2.14 ಕೋಟಿ ರೂ.ಗೆ, ಧಾರವಾಡ ಪ್ರಧಾನ ಹಿರಿಯ ಸಿವಿಲ್ ಮತ್ತು ಸಿಜೆಎಂ ನ್ಯಾಯಾಲಯವು 2 ಕೋಟಿ ರೂ. ಮೊತ್ತಕ್ಕೆ ಎಂವಿಸಿ ಪ್ರಕರಣವನ್ನು ಇತ್ಯರ್ಥಪಡಿಸಿದೆ. ಮಂಡ್ಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯವು ಶ್ರೀರಂಗಪಟ್ಟಣದ ಎಂವಿಸಿ ಪ್ರಕರಣವೊಂದನ್ನು 50 ಲಕ್ಷ ರೂ.ಗೆ ಇತ್ಯರ್ಥ ಮಾಡಿದೆ.
ಧಾರವಾಡದ ಔದ್ಯೋಗಿಕ ನ್ಯಾಯಾಲಯವು ಹುಬ್ಬಳ್ಳಿಯ ಟಾಟಾ ಮಾರ್ಕೋಪೋಲೋ ಕಂಪನಿಯ 200 ಕಾರ್ಮಿಕರನ್ನು ಪುನಃ ಸೇವೆಗೆ ತೆಗೆದುಕೊಳ್ಳಲು ಆದೇಶಿಸಿದೆ. ಚಿಕ್ಕಮಗಳೂರಿನ ಮೂಡಿಗೆರೆಯ ಹಿರಿಯ ಸಿವಿಲ್ ಮತ್ತು ಜೆಎಫ್‌ಎಂಸಿ ಕೋರ್ಟ್‌ನಲ್ಲಿದ್ದ 20 ವರ್ಷದ ಹಳೆಯ ಪ್ರಕರಣವನ್ನು, ಮಂಡ್ಯ ಪ್ರಧಾನ ಸಿವಿಲ್ ನ್ಯಾಯಾಲಯ, ಶ್ರೀರಂಗಪಟ್ಟಣದ 10 ವರ್ಷ ಹಳೆಯದ ಅಮಲ್ಜಾರಿ ಹಾಗೂ ಸಿಜೆ-ಜೆಎಂಎಫ್‌ಸಿ ನ್ಯಾಯಾಲಯವು ಪಾಂಡವಪುರದ 10 ವರ್ಷದ ಹಳೆಯ ವಿಭಾಗ ಪ್ರಕರಣವನ್ನು ಇತ್ಯರ್ಥಪಡಿಸಿದೆ.
ರಾಜ್ಯದ ಎಲ್ಲಾ ಕೋರ್ಟ್‌ನಲ್ಲಿ 2024ರ ಮಾರ್ಚ್ 1ರ ವೇಳೆಗೆ ಒಟ್ಟು 20,43,999 ಪ್ರಕರಣಗಳು ವಿಲೇವಾರಿಗೆ ಬಾಕಿ ಇವೆ. ಅವುಗಳ ಪೈಕಿ ಹೈಕೋರ್ಟ್‌ನಲ್ಲಿ 2,82,870 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿದೆ. ಬೆಂಗಳೂರು ಪೀಠದಲ್ಲಿ 1,75,41, ಧಾರವಾಡ ಪೀಠದಲ್ಲಿ 61,630 ಮತ್ತು ಕಲಬುರಗಿ ಪೀಠದಲ್ಲಿ 26,199 ಪ್ರಕರಣಗಳು ವಿಲೇವಾರಿ ಬಾಕಿ ಇವೆ.












Click it and Unblock the Notifications