ಪಂಚಾಯತ್ ಪ್ರತಿನಿಧಿಗಳಿಗೆ ಸರ್ಕಾರದ ಬಂಪರ್ ಕೊಡುಗೆ
ಬೆಂಗಳೂರು, ಡಿ.8 : ಕರ್ನಾಟಕ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಬಂಪರ್ ಕೊಡುಗೆ ನೀಡಿದ್ದು, ಗೌರವಧನವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಗೌರವ ಧನವನ್ನು ಹೆಚ್ಚಳ ಮಾಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಪಂಚಾಯತ್ ರಾಜ್ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ನೀಡುವ ಮಾಸಿಕ ಗೌರವಧನವನ್ನು ಹೆಚ್ಚಳ ಮಾಡಿ ಶನಿವಾರ ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.

ಈ ಗೌರವಧನ ಪರಿಷ್ಕರಣೆ 2014ರ ಎಪ್ರಿಲ್ 1ರಿಂದ ಪೂರ್ವಾನ್ವಯವಾಗಿ ಅನುಷ್ಠಾನಕ್ಕೆ ಬರಲಿದೆ. ಪಂಚಾಯತ್ ರಾಜ್ ಸಂಸ್ಥೆಗಳ ಪ್ರತಿನಿಧಿಗಳ ಗೌರವಧನ ದುಪ್ಪಟ್ಟುಗೊಳಿಸುವ ಬಗ್ಗೆ 2014-15ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಕಲಬುರಗಿ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಅನುನೋದನೆ ನೀಡಲಾಗಿತ್ತು. [ಕಲಬುರಗಿ ಸಂಪುಟ ಸಭೆಯ ನಿರ್ಣಯಗಳು]
ಎಷ್ಟಾಗಲಿದೆ ಗೌರವ ಧನ : ಹೊಸ ಪರಿಷ್ಕರಣೆಯ ಅನ್ವಯ ಜಿಲ್ಲಾ ಪಂಚಾಯತ್ ಜಿಲ್ಲಾ ಪಂಚಾಯತ್ ಸದಸ್ಯರ ಮಾಸಿಕ ಗೌರವಧನ 1,500 ರೂ.ಗಳಿಂದ 3 ಸಾವಿರ ರೂ, ಉಪಾಧ್ಯಕ್ಷರಿಗೆ 2,250 ರೂ.ಗಳಿಂದ 4,500 ರೂ. ಅಧ್ಯಕ್ಷರಿಗೆ 3 ಸಾವಿರದಿಂದ 6 ಸಾವಿರ ರೂ.ಗಳಿಗೆ ಹೆಚ್ಚಳವಾಗಿದೆ.
ಹಾಗೆಯೇ ತಾಲೂಕು ಪಂಚಾಯಿತಿ ಸದಸ್ಯರಿಗೆ 750 ರೂ.ಗಳಿಂದ 1,500 ರೂ., ಉಪಾಧ್ಯಕ್ಷರಿಗೆ 1,500 ರೂ.ಗಳಿಂದ 3 ಸಾವಿರ ರೂ., ಅಧ್ಯಕ್ಷರಿಗೆ 2,250 ರೂ.ಗಳಿಂದ 4,500 ರೂ.ಗಳಿಗೆ ಗೌರವ ಧನ ಹೆಚ್ಚಳವಾಗಿದೆ.
ಗ್ರಾಮ ಪಂಚಾಯಿತಿ ಸದಸ್ಯರಿಗೆ 250 ರೂ.ಗಳಿಂದ 500 ರೂ., ಉಪಾಧ್ಯಕ್ಷರಿಗೆ 300 ರೂ.ಗಳಿಂದ 600 ರೂ. ಮತ್ತು ಅಧ್ಯಕ್ಷರ ಗೌರವಧನ 500 ರೂ.ಗಳಿಂದ ಒಂದು ಸಾವಿರ ರೂ.ಗಳಿಗೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕದ 5,629 ಗ್ರಾಮ ಪಂಚಾಯಿತಿಗಳ 9,635, 176 ತಾಲೂಕು ಪಂಚಾಯಿತಿಗಳ 3,689 ಮತ್ತು 30 ಜಿಲ್ಲಾ ಪಂಚಾಯಿತಿಗಳ 1,013 ಚುನಾಯಿತ ಪ್ರತಿನಿಧಿಗಳು ಗೌರವಧನ ಪರಿಷ್ಕರಣೆಯ ಲಾಭ ಪಡೆಯಲಿದ್ದಾರೆ.












Click it and Unblock the Notifications