ಸಾರಿಗೆ ಮುಷ್ಕರ : ಸೋಮವಾರ ಏನೇನಾಯ್ತು?

Posted By:
Subscribe to Oneindia Kannada

ಬೆಂಗಳೂರು, ಜುಲೈ 25 : ವೇತನ ಪರಿಷ್ಕರಣೆ ಸೇರಿದಂತೆ 42 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರ ನಡೆಸುತ್ತಿರುವ ಸಾರಿಗೆ ಸಂಸ್ಥೆಗಳ ನೌಕರರ ಮನವೊಲಿಸಲು ಸರ್ಕಾರ ವಿಫಲವಾಗಿದೆ. ಮಂಗಳವಾರವೂ ನೌಕರರ ಮುಷ್ಕರ ಮುಂದುವರೆಯಲಿದೆ.

ಹಿಂದಿನ ಸುದ್ದಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಸುಗಳು ರಸ್ತೆಗಿಳಿದಿಲ್ಲ.

ಶೇ. 35ರಷ್ಟು ವೇತನ ಪರಿಷ್ಕರಣೆ ಸೇರಿದಂತೆ 42 ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ಸಂಸ್ಥೆಗಳ ನೌಕರರು ಜುಲೈ 25ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಮುಷ್ಕರದ ಹಿನ್ನಲೆಯಲ್ಲಿ ಸರ್ಕಾರ ಜು.25 ಮತ್ತು 26ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. [ರಸ್ತೆ ಸಾರಿಗೆ ನಿಗಮದ ನೌಕರರ ಮುಷ್ಕರ ಏಕೆ, ಏನು?]

bmtc bus stand

ಬೆಂಗಳೂರಿನಲ್ಲಿ ಬಸ್ಸುಗಳು ಇಲ್ಲದ ಅವಕಾಶವನ್ನು ಆಟೋಗಳು ಬಳಸಿಕೊಂಡಿವೆ. ಸಾವಿರಾರು ಸಂಖ್ಯೆಯ ಆಟೋಗಳು ಮುಂಜಾನೆಯೇ ರಸ್ತೆಗಿಳಿದಿದ್ದು, ದುಪ್ಪಟ್ಟು ದರವನ್ನು ಪ್ರಯಾಣಿಕರಿಂದ ವಸೂಲಿ ಮಾಡುತ್ತಿವೆ. ಬೇರೆ ಊರುಗಳಿಂದ ಖಾಸಗಿ ಬಸ್ಸುಗಳಲ್ಲಿ ಬಂದ ಜನರು, ಬಿಎಂಟಿಸಿ ಬಸ್ಸುಗಳಲ್ಲಿದೇ ಪರದಾಡುತ್ತಿದ್ದಾರೆ.[ಸಾರಿಗೆ ಸಂಸ್ಥೆ ನೌಕರರಿಗೆ ಶೇ 8ರಷ್ಟು ವೇತನ ಹೆಚ್ಚಳ]

ಸಮಯ 11.30 : ಕೆಎಸ್ಆರ್‌ಟಿಸಿ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ಜೊತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಸಭೆ ನಡೆಸುತ್ತಿದ್ದಾರೆ. ಈ ಸಭೆ ಬಳಿಕ ಅಧಿಕಾರಿಗಳು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಜೊತೆ ಸಭೆ ನಡೆಸುವ ಸಾಧ್ಯತೆ ಇದೆ.[ಗ್ಯಾಲರಿ : ಬಸ್ ಇಲ್ಲದೆ ಜನರ ಪರದಾಟ]

ಸಮಯ 11 ಗಂಟೆ : ಚಿಕ್ಕಮಗಳೂರು, ಯಾದಗಿರಿ ಸೇರಿದಂತೆ ರಾಜ್ಯದ ವಿವಿಧ ಭಾಗಗಲ್ಲಿ 100ಕ್ಕೂ ಅಧಿಕ ಬಸ್ಸುಗಳಿಗೆ ಕಲ್ಲು ತೂರಲಾಗಿದೆ. ಬೆಂಗಳೂರು ನಗರದಲ್ಲಿಯೇ 64 ಬಸ್ಸುಗಳ ಮೇಲೆ ಕಲ್ಲೆಸೆಯಲಾಗಿದೆ.

ಸಮಯ 10.30 : ಸಾರಿಗೆ ಇಲಾಖೆ ಆಯುಕ್ತ ಡಾ.ಎ.ರಾಮೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನಿ ಭೇಟಿಯಾಗಿ ಮಷ್ಕರದ ಬಗ್ಗೆ ಮಾಹಿತಿ ನೀಡಿದರು. ಮಧ್ಯಾಹ್ನ 2.30ರ ಸುಮಾರಿಗೆ ಸಿದ್ದರಾಮಯ್ಯ ಅವರ ಜೊತೆ ನೌಕರರ ಸಭೆ ನಡೆಯುವ ಸಾಧ್ಯತೆ ಇದೆ.

ಸಮಯ 10 ಗಂಟೆ : '23 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳು ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡತ್ತಿದ್ದು, ಹಿರಿಯ ಅಧಿಕಾರಿಗಳು ಕೆಲಸಕ್ಕೆ ಹಾಜರಾಗಲೇಬೇಕೆಂದು ಧಮ್ಕಿ ಹಾಕುತ್ತಿದ್ದಾರೆಂದು' ಯೂನಿಯನ್ ಉಪಾಧ್ಯಕ್ಷ ಆರ್.ಎಫ್.ಕವಳಿಕಾಯಿ ಹೇಳಿದ್ದಾರೆ.

ಸಮಯ 9.30 : ಬೆಂಗಳೂರಿನ ಯಶವಂತಪುರ, ಮೈಸೂರು ಬ್ಯಾಂಕ್, ಹೆಬ್ಬಾಳ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 20ಕ್ಕೂ ಹೆಚ್ಚು ಸರ್ಕಾರಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

ಸಮಯ 9 ಗಂಟೆ : ಸಾರಿಗೆ ಮುಷ್ಕರದ ಹಿನ್ನಲೆಯಲ್ಲಿ ಬಿಎಂಆರ್‌ಸಿಎಲ್ ಬೈಯಪ್ಪನಹಳ್ಳಿ-ಮೈಸೂರು ರಸ್ತೆ, ಸಂಪಿಗೆ ರಸ್ತೆ-ನಾಗಸಂದ್ರ ಮಾರ್ಗದಲ್ಲಿ ಪ್ರತಿ ಐದು ನಿಮಿಷಕ್ಕೊಂದು ಮೆಟ್ರೋ ರೈಲು ಓಡಿಸುತ್ತಿದೆ.

ಸಮಯ 8.30 : ಹುಬ್ಬಳ್ಳಿಯಲ್ಲಿ ನಗರ ಸಾರಿಗೆ ಬಸ್ಸುಗಳನ್ನು ಡಿಪೋಗಳಲ್ಲಿ ಬಿಟ್ಟು ಚಾಲಕರು ಮತ್ತು ನಿರ್ವಾಹಕರು ಮನೆಗೆ ಮರಳಿದ್ದಾರೆ. ಗ್ರಾಮೀಣ ಪ್ರದೇಶಗಳಿಗೆ ಹೋಗುವ ಬಸ್ ಗಳನ್ನೂ ಕೂಡ ಡಿಪೋದಲ್ಲಿ ನಿಲ್ಲಿಸಲಾಗಿದೆ. ನಗರದ ಹೊಸ ಬಸ್ ನಿಲ್ದಾಣ ಮತ್ತು ಹಳೇ ಬಸ್ ನಿಲ್ದಾಣಗಳಲ್ಲಿ ಬಸ್ ಗಳು ನಿಂತಿವೆ.

ksrtc

ಸಮಯ 8 ಗಂಟೆ :ಮುಷ್ಕರದ ಕುರಿತು ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, 'ಸಾರಿಗೆ ನೌಕರರ ಯೂನಿಯನ್‌ಗಳು ಹಠಮಾರಿ ಧೋರಣೆ ಅನುಸರಿಸುತ್ತಿವೆ. ನಾವು ಸಹ ಪರ್ಯಾಯ ವ್ಯವಸ್ಥೆ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಅವರು ಹೇಳಿದಂತೆ ಶೇ 30 ರಿಂದ 35ರಷ್ಟು ವೇತನ ಪರಿಷ್ಕರಣೆ ಸಾಧ್ಯವೇ ಇಲ್ಲ' ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಸಮಯ 7.30 : ಬೆಂಗಳೂರಿನ ಯಶವಂತಪುರ, ಮೈಸೂರು ಬ್ಯಾಂಕ್ ಸೇರಿದಂತೆ 6 ಕಡೆ ಸರ್ಕಾರಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಪರ ಊರುಗಳಿಂದ ಈ ಬಸ್ಸುಗಳು ಬೆಂಗಳೂರಿಗೆ ಆಗಮಿಸಿದ್ದವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka State Road Transport Corporation employees strike July 25, 2016. Government approved to hike salary of employees to 10 percent. But they demanding for 35 percent hike.
Please Wait while comments are loading...