ಬಸವರಾಜ ಬೊಮ್ಮಾಯಿ ಸಂಪುಟ: ಯಾವ ಸಚಿವರಿಗೆ ಯಾವ ಖಾತೆ?
ಬೆಂಗಳೂರು, ಆಗಸ್ಟ್ 6: ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆಯಾಗಿದ್ದು, ಭಾರಿ ಕುತೂಹಲ ಕೆರಳಿಸಿದ್ದ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಆರಗ ಜ್ಞಾನೇಂದ್ರ ಅವರಿಗೆ ಗೃಹ ಹಾಗೂ ಸುನಿಲ್ ಕುಮಾರ್‌ಗೆ ಇಂಧನ ಖಾತೆ ನೀಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ರಾಜಭವನದಲ್ಲಿ ಕಳೆದ ಬುಧವಾರ ಮಧ್ಯಾಹ್ನ 2.15ಕ್ಕೆ ನಡೆದ ಸರಳ ಸಮಾರಂಭದಲ್ಲಿ ನೂತನ ಸಚಿವರ ಗೌಪ್ಯತಾ ವಿಧಿ, ಪ್ರತಿಜ್ಞೆ ಪ್ರಮಾಣ ವಚನ ಸ್ವೀಕಾರ ನಡೆಯಿತು. ಭಾರಿ ಬೇಡಿಕೆ, ಒತ್ತಡ ಕಂಡು ಬಂದರೂ ಡಿಸಿಎಂ ಹುದ್ದೆ ಸೃಷ್ಟಿಸದಿರಲು ಹೈಕಮಾಂಡ್ ನಿರ್ಧರಿಸಿದೆ. ಶುಕ್ರವಾರದಂದೇ ಸಚಿವರ ಖಾತೆ ಹಂಚಿಕೆ ಪಟ್ಟಿ ಪ್ರಕಟ ಮಾಡುವ ಬಗ್ಗೆ ಸುಳಿವು ನೀಡಿದ್ದ ಸಿಎಂ ಬೊಮ್ಮಾಯಿ ಸಂಜೆ ಸಿದ್ದಗಂಗಾ ಮಠಕ್ಕೆ ತೆರಳಿ ರಾತ್ರಿ ಆರ್ .ಟಿ ನಗರ ನಿವಾಸಕ್ಕೆ ಹಿಂದಿರುಗಿದರು. ಸಿಎಂ ಬೊಮ್ಮಾಯಿ ಜೊತೆಗೆ ಮುರುಗೇಶ್ ನಿರಾಣಿ, ಸೋಮಣ್ಣ, ಸುಧಾಕರ್ ಪ್ರಯಾಣಿಸಿದರೆ, ಮತ್ತೆ ಕೆಲವು ಮುಖಂಡರು ಸಿಎಂ ನಿವಾಸದ ಬಳಿ ಕಾಯುತ್ತಿದ್ದರು.
ಹೈಕಮಾಂಡ್ ಅಣತಿಯಂತೆ 6 ಹೊಸಬರು, ಅನುಭವವುಳ್ಳರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಪ್ರಮುಖವಾಗಿ ಮುಂಬರುವ ಬಿಬಿಎಂಪಿ ಚುನಾವಣೆ ಮೇಲೆ ಬಿಜೆಪಿ ಕಣ್ಣಿರಿಸಿಕೊಂಡು ಬೆಂಗಳೂರಿನ ಶಾಸಕರಿಗೆ ಮಣೆ ಹಾಕಲಾಗಿದೆ. 2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು, ಜಾತಿವಾರು ಲೆಕ್ಕಾಚಾರದಂತೆ ಕೂಡಾ ಲಿಂಗಾಯತ, ದಲಿತ, ಹಿಂದುಳಿತ ವರ್ಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ. ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿದಂತೆ 18 ಸಚಿವರು ಪದವಿ ಶಿಕ್ಷಣವನ್ನು ಮುಗಿಸಿದ್ದರೆ, ಉಳಿದ 12 ಸಚಿವರಲ್ಲಿ ಪಿಯುಸಿ, ಎಸ್‌ಎಸ್‌ಎಲ್‌ಸಿ ಅಥವಾ ಅದಕ್ಕಿಂತ ಕಡಿಮೆ ಶಿಕ್ಷಣವನ್ನು ಪಡೆದಿದ್ದಾರೆ.

"ಪಕ್ಷ ನಮ್ಮ ಮೇಲೆ ನಂಬಿಕೆಯಿಟ್ಟು ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇವೆ" ಎಂಬುದು ಈ ದಿನ ಹೆಚ್ಚಾಗಿ ಕೇಳಿ ಬಂದ ಹೇಳಿಕೆ. ಪ್ರಭು ಚೌವ್ಹಾಣ್, ಬಿ.ಸಿ ಪಾಟೀಲ್ ಬಿಟ್ಟರೆ ಮಿಕ್ಕವರು ಯಾರೂ ಕೂಡಾ ಇಂಥದ್ದೇ ಖಾತೆ ಬೇಕು ಎಂದು ವರಾತ ಹಿಡಿದಿರಲಿಲ್ಲ. ಡಾ. ಸುಧಾಕರ್ ಹಾಗೂ ಡಾ. ಅಶ್ವಥ್ ನಾರಾಯಣ್ ನಡುವೆ ಆರೋಗ್ಯ ಖಾತೆ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಗಾಗಿ ಪೈಪೋಟಿ ಇದೆ ಎಂಬ ಸುದ್ದಿ ಇದ್ದಿದ್ದು ನಿಜ. ಆರ್ ಅಶೋಕ ಅವರು ಗೃಹ ಖಾತೆ ಸಹವಾಸವೇ ಬೇಡ ಎಂದಿದ್ದು ಬಿಟ್ಟರೆ ಮಿಕ್ಕವರು ಕೊಟ್ಟ ಖಾತೆ ನಿಭಾಯಿಸುತ್ತೇವೆ ಎಂದು ಹೇಳಿದ್ದರು.
ಬೊಮ್ಮಾಯಿ ಸಂಪುಟದ ಸಚಿವರು-ಖಾತೆ ವಿವರ
| ಕ್ರಮ ಸಂಖ್ಯೆ | ಬೊಮ್ಮಾಯಿ ಸಂಪುಟದ ಸಚಿವರು | ಖಾತೆ |
| 01 | ಬಸವರಾಜ ಬೊಮ್ಮಾಯಿ | ಮುಖ್ಯಮಂತ್ರಿ, DPAR, ಹಣಕಾಸು, ಗೃಹ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಗುಪ್ತಚರ (ಗೃಹ ಖಾತೆಯಿಂದ), ಸಂಪುಟ ವ್ಯವಹಾರ, |
| 02 | ಅರಗ ಜ್ಞಾನೇಂದ್ರ | ಗೃಹ(ಗುಪ್ತಚರ ಹೊರತುಪಡಿಸಿ) |
| 03 | ಗೋವಿಂದ ಎಂ ಕಾರಜೋಳ | ಬೃಹತ್ ಹಾಗೂ ಮಧ್ಯಮ ನೀರಾವರಿ ಇಲಾಖೆ(ಜಲ ಸಂಪನ್ಮೂಲ) |
| 04 | ಡಾ. ಸಿ.ಎಸ್ ಅಶ್ವಥ ನಾರಾಯಣ | ಉನ್ನತ ಶಿಕ್ಷಣ ಸಚಿವ, ಐಟಿ-ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ, ಹೆಚ್ಚುವರಿಯಾಗಿ ಕೌಶಲ್ಯಾಭಿವೃದ್ಧಿ |
| 05 | ಕೆ.ಎಸ್ ಈಶ್ವರಪ್ಪ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
| 06 | ಆರ್. ಅಶೋಕ | ಕಂದಾಯ(ಮುಜರಾಯಿ ಹೊರತುಪಡಿಸಿ) |
| 07 | ಉಮೇಶ್ ಕತ್ತಿ | ಅರಣ್ಯ, ಆಹಾರ, ಪಡಿತರ ವಿತರಣೆ, ಗ್ರಾಹಕ ವ್ಯವಹಾರ |
| 08 | ಬಿ. ಶ್ರೀರಾಮುಲು | ಸಾರಿಗೆ, ಎಸ್ ಟಿ ಅಭಿವೃದ್ಧಿ |
| 09 | ಬಿ. ಸಿ ನಾಗೇಶ್ | ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಾಗೂ ಸಕಾಲ |
| 10 | ವಿ ಸೋಮಣ್ಣ | ವಸತಿ |
| 11 | ಸುನಿಲ್ ಕುಮಾರ್ | ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ |
| 12 | ಎಸ್ ಅಂಗಾರ | ಬಂದರು, ಒಳನಾಡು ಸಾರಿಗೆ ಮತ್ತು ಮೀನುಗಾರಿಕೆ |
| 13 | ಕೋಟಾ ಶ್ರೀನಿವಾಸ ಪೂಜಾರಿ | ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಕಲ್ಯಾಣ |
| 14 | ಜೆ. ಸಿ ಮಾಧುಸ್ವಾಮಿ | ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರ |
| 15 | ಚಂದ್ರಕಾಂತಗೌಡ ಚೆನ್ನಪ್ಪಗೌಡ ಪಾಟೀಲ | ಲೋಕೋಪಯೋಗಿ |
| 16 | ಶಂಕರ್ ಬಿ, ಪಾಟೀಲ ಮುನ್ನೇನಕೊಪ್ಪ | ಜವಳಿ, ಸಕ್ಕರೆ |
| 17 | ಪ್ರಭು ಚೌಹಾಣ್ | ಪಶು ಸಂಗೋಪಣೆ |
| 18 | ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್ | ಮುಜರಾಯಿ, ಹಜ್ ಮತ್ತು ವಕ್ಫ್ |
| 19 | ಆನಂದ್ ಸಿಂಗ್ | ಪ್ರವಾಸೋದ್ಯಮ, ಪರಿಸರ |
| 20 | ಆಚಾರ್ ಹಾಲಪ್ಪ ಬಸಪ್ಪ | ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ, ಹಿರಿಯ ನಾಗರಿಕರ ಸಬಲೀಕರಣ |
| 21 | ಕೆ. ಸಿ ನಾರಾಯಣ ಗೌಡ | ಕ್ರೀಡೆ, ಯುವಜನ, ರೇಷ್ಮೆ |
| 22 | ಮುರುಗೇಶ್ ನಿರಾಣಿ | ಬೃಹತ್ ಹಾಗೂ ಮಧ್ಯಮ ಕೈಗಾರಿಕೆ |
| 23 | ಅರೆಬೈಲು ಹೆಬ್ಬಾರ್ ಶಿವರಾಂ | ಕಾರ್ಮಿಕ |
| 24 | ಎಸ್. ಟಿ ಸೋಮಶೇಖರ್ | ಸಹಕಾರ |
| 25 | ಬಸನಗೌಡ ಚನ್ನಬಸವನಗೌಡ ಪಾಟೀಲ್ | ಕೃಷಿ |
| 26 | ಬಿ.ಎ ಬಸವರಾಜ (ಬೈರತಿ) | ನಗರಾಭಿವೃದ್ಧಿ(ಬೆಂಗಳೂರು ಹೊರತುಪಡಿಸಿ) |
| 27 | ಡಾ. ಕೆ ಸುಧಾಕರ್ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ |
| 28 | ಕೆ ಗೋಪಾಲಯ್ಯ | ಅಬಕಾರಿ |
| 29 | ಎನ್ ನಾಗರಾಜ (ಎಂ.ಟಿ.ಬಿ) | ಸಣ್ಣ ಕೈಗಾರಿಕೆ, ಸಾರ್ವಜನಿಕ ವಲಯ ಕೈಗಾರಿಕೆ |
| 30 | ಮುನಿರತ್ನ | ತೋಟಗಾರಿಕೆ, ಯೋಜನೆ ಹಾಗೂ ಸಾಂಖ್ಯಿಕ |
Karnataka Cabinet Expansion updates: ಕರ್ನಾಟಕದಲ್ಲಿ ಡಿಸಿಎಂ ಹುದ್ದೆ ಇರುವುದಿಲ್ಲ
ಬೊಮ್ಮಾಯಿ ಸಂಪುಟಕ್ಕೆ ಆಯ್ಕೆಯಾದವರ ಪೈಕಿ 8 ಲಿಂಗಾಯತ, 7 ಒಬಿಸಿ, 7 ಒಕ್ಕಲಿಗ, 3 ದಲಿತ, 1 ಎಸ್ ಟಿ ಮತ್ತು ಒಬ್ಬ ಮಹಿಳೆಗೆ ಸ್ಥಾನ ಕಲ್ಪಿಸಲಾಗಿದೆ. ಯಡಿಯೂರಪ್ಪ ಸಂಪುಟದಲ್ಲಿದ್ದ ಜಗದೀಶ್ ಶೆಟ್ಟರ್, ಆರ್. ಶಂಕರ್, ಸಿ. ಪಿ. ಯೋಗೇಶ್ವರ್, ಅರವಿಂದ ಲಿಂಬಾವಳಿ, ಶ್ರೀಮಂತ ಪಾಟೀಲ್, ಎಸ್. ಸುರೇಶ್ ಕುಮಾರ್ ಹಾಗೂ ಲಕ್ಷ್ಮಣ ಸವದಿ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ. ರಾಜ್ಯ ಸರ್ಕಾರದಲ್ಲಿ ಒಟ್ಟು 34 ಶಾಸಕರು ಸಚಿವರಾಗಬಹುದು. ಇಂದು 29 ಮಂದಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಬಗ್ಗೆ ರಾಜ್ಯಪಾಲರಿಗೆ ಅಧಿಕೃತವಾಗಿ ಪತ್ರ ಮೂಲಕ ತಿಳಿಸಲಾಗಿತ್ತು. ಆದರಂತೆ, 29 ಮಂದಿ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಉಳಿದಿರುವ 4 ಸ್ಥಾನಗಳನ್ನು ಕಾಯ್ದಿರಿಸಲು ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡಿದೆ.












Click it and Unblock the Notifications