ಕುಂವಿ ಸೇರಿ 61 ಜನರಿಗೆ ಜೀವ ಬೆದರಿಕೆ: ಎಲ್ಲರಿಗೂ ರಕ್ಷಣೆ ನೀಡಲು ಎಚ್‌ಡಿಕೆ ಆಗ್ರಹ
ಬೆಂಗಳೂರು, ಏ.8: ಕೋಮುವಾದದ ಕುರಿತು ಇತ್ತೀಚೆಗೆ ಪ್ರಖರ ಹೇಳಿಕೆಗಳನ್ನು ನೀಡಿರುವ ಸಾಹಿತಿ ಕುಂ. ವೀರಭ್ರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಸಹಿತ ಒಟ್ಟು 61 ಜನರಿಗೆ ಜೀವ ಬೆದರಿಕೆ ಹಾಕಲಾಗಿದೆ.
ಸಹಿಷ್ಣು ಹಿಂದು ಹೆಸರಿನಲ್ಲಿ ಕುಂ. ವೀರಭದ್ರಪ್ಪ ಅವರಿಗೆ ಈ ಪತ್ರ ಬರೆಯಲಾಗಿದೆ. ಸಿದ್ಧರಾಗಿ, ನಿಮ್ಮ ನಿಮ್ಮ ಮನೆಯಲ್ಲಿ ನಿಮ್ಮ ಅಂತಿಮ ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲು ಹೇಳಿ, ದೇಶದ್ರೋಹಿ ಕುಂ.ವೀರಭದ್ರಪ್ಪ ಎಂದು ಪತ್ರದಲ್ಲಿ ಹೇಳಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಕುಂ. ವೀರಭದ್ರಪ್ಪ ಅವರು, 'ನನಗೆ ಭದ್ರಾವತಿಯಿಂದ ಜೀವ ಬೆದರಿಕೆ ಪತ್ರ ಬಂದಿದೆ. ಪತ್ರದಲ್ಲಿ ಯಾವುದೇ ಹೆಸರು, ವಿಳಾಸ ಬರೆಯದೆ ಒಬ್ಬ ಹೇಡಿ ಬರೆದ ಪತ್ರ ಇದು. ಇದರಲ್ಲಿ ಮಾಜಿ ಮುಖ್ಯಮಂತ್ರಿಗಳ ಹೆಸರೂ ಇದೆ. ನೀವು ಓದಿ ಆನಂದಿಸಿ' ಎಂದು ಹೇಳಿದ್ದಾರೆ.

ಎಡಬಿಡಂಗಿ ಸಾಹಿತಿಗಳೇ, ಎಡಬಿಂಡಂಗಿ ಸಂವಿಧಾನ ವಿರೋಧಿ ಸಾಹಿತಿಗಳೇ, ದೇಶದ್ರೋಹಿ ಸಾಹಿತಿಗಳೇ, ಅನ್ನ ಹಾಕಿದ ಮನೆಗೆ ಕನ್ನಡ ಹಾಕಿದ ಸಾಹಿತಿಗಳೇ ಮತ್ತು ಲೂಸ್‌ಟಾಕ್ ಮಾಜಿ ಕಂತ್ರಿ ಸಿದ್ದರಾಮಯ್ಯ, ಊಸರವಳ್ಳಿ ಮಾಜಿ ಕಂತ್ರಿ ಪೋಲಿ ಎಚ್.ಡಿ. ಕುಮಾರಸ್ವಾಮಿ ಎಂದು ಪತ್ರದಲ್ಲಿ ಬರೆಯಲಾಗಿದೆ.
ಮುಸ್ಲಿಮರ ಪರವಾಗಿ, ಮುಸ್ಲಿಂ ಹೆಣ್ಣುಮಕ್ಕಳ ಪರವಾಗಿ, ಹಿಜಾಬ್ ಪರವಾಗಿ ಮತ್ತು ಈ ದೇಶದ ಮೂಲಗ್ರಂಥ ಭಗವದ್ಗೀತೆ ವಿರುದ್ಧವಾಗಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಎಲ್ಲಾ ಎಡಬಿಡಂಗಿ 61+ ಸಾಹಿತಿಗಳೇ ಎಂದು ಹೀಗೆ ಸರ್ಕಾರಕ್ಕೆ ಪತ್ರ ಬರೆದವರನ್ನು ಖಂಡಿಸಲಾಗಿದೆ.

ಎಲ್ಲರಿಗೂ ತಕ್ಷಣ ಭದ್ರತೆ ನೀಡುವಂತೆ ಎಚ್‌ಡಿಕೆ ಆಗ್ರಹ:
ನಾನು, ಹಿರಿಯ ಸಾಹಿತಿ ಕುಂ ವೀರಭದ್ರಪ್ಪ ಸೇರಿದಂತೆ 61 ಜನರಿಗೆ ಸಹಿಷ್ಣು ಹಿಂದೂ ಎಂಬ ಹೆಸರಿನಲ್ಲಿ ಒಡ್ಡಲಾಗಿರುವ ಜೀವ ಬೆದರಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸರಕಾರವನ್ನು ಒತ್ತಾಯ ಮಾಡಿದರು.
ಈ ಬಗ್ಗೆ ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಇಂತಹ ಬೆದರಿಕೆ ಪತ್ರವನ್ನು ಲಘುವಾಗಿ ಪರಿಗಣಿಸಬೇಡಿ. ಕುಂ.ವೀರಭದ್ರಪ್ಪ ಸೇರಿ ಜೀವ ಬೆದರಿಕೆ ಒಡ್ಡಲಾಗಿರುವ ಎಲ್ಲ ಸಾಹಿತಿಗಳಿಗೆ ತಕ್ಷಣವೇ ಸರಕಾರವು ರಕ್ಷಣೆ ಕೊಡಬೇಕು ಎಂದು ಆಗ್ರಹಪಡಿಸಿದರು.
ನನಗೆ ಈ ವಿಚಾರದಲ್ಲಿ ಅಂಜಿಕೆ ಇಲ್ಲ. ದೇವರನ್ನು ನಾನು ನಂಬಿರುವೆ. ನನ್ನ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಅಂಜಿ ಸತ್ಯವನ್ನು ಮರೆಮಾಚಲಾರೆ. ಹಣೆಯಲ್ಲಿ ಬರೆದಿರುವುದನ್ನು ತಿದ್ದಲು ಇವರಿಂದ ಆಗುವುದಿಲ್ಲ ಎಂದ ಅವರು, ನೇರವಾಗಿ ಮಾತನಾಡುತ್ತಿದ್ದರು ಎಂಬ ಕಾರಣಕ್ಕೆ ಎಂ ಎಂ ಕಲಬುರ್ಗಿ ಸೇರಿ ಕೆಲವರನ್ನು ಹತ್ಯೆ ಮಾಡಿದ ಉದಾಹರಣೆ ನಮ್ಮ ಮುಂದೆ ಇದೆ. ರಾಜ್ಯದಲ್ಲಿ ಮತ್ತೆ ಅಂಥ ಘಟನೆಗಳು ಮರುಕಳಿಸಬಾರದು ಎಂದು ಅವರು ಹೇಳಿದರು.












Click it and Unblock the Notifications