ಕಾಂಗ್ರೆಸ್ ಸರ್ಕಾರ ಕೂಡಲೇ ರಾಜಿನಾಮೆ ಕೊಟ್ಟು ಮನೆಗೆ ತೆರಳಲಿ: ವಿಜಯೇಂದ್ರ ದಿಢೀರ್ ಆಗ್ರಹವೇಕೆ?
ಬೆಂಗಳೂರು, ಜೂನ್ 19: ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗುತ್ತಿದ್ದು, ಕಾಂಗ್ರೆಸ್ ಸರ್ಕಾರ ಸಿಕ್ಕ ಕಡೆಗಳಲ್ಲಾ ತೆರಿಗೆ ಹಾಗೂ ಬೆಲೆ ಹೆಚ್ಚಿಸುತ್ತಿದೆ ಎನ್ನುವ ಆರೋಪ ಜೋರಾಗಿ ಕೇಳಿ ಬರುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಇತ್ತೀಚಿಗಷ್ಟೆ ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನು ಏರಿಸಿದೆ.
ಬೊಕ್ಕಸ ತುಂಬಿಸಿಕೊಳ್ಳಲು ಸಂಪನ್ಮೂಲಗಳತ್ತ ಚಿತ್ತ ವಹಿಸುವ ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿಕಾರಿದ್ದಾರೆ. ರಾಜ್ಯ ಹಿಂದೆಂದೂ ಕಂಡರಿಯದ ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ. ಜನರ ಮೇಲೆ ಬೆಲೆ ಏರಿಕೆಯ ಬರೆ ಎಳೆಯುತ್ತಿರುವ ಕಾಂಗ್ರೆಸ್ ಸರ್ಕಾರ ಇದೀಗ ಅಳಿದುಳಿದ ಸರ್ಕಾರಿ ಜಮೀನುಗಳನ್ನು ಆಶ್ರಯಿಸಿ ಸಂಪನ್ಮೂಲದ ಹಾದಿ ಕಂಡುಕೊಳ್ಳಲು ಹೊರಟಿರುವುದು ನಾಚಿಕೆಗೇಡಿನ ಕ್ರಮವಾಗಿದೆ ಎಂದಿದ್ದಾರೆ.

ಆದಾಯದ ಮೂಲಗಳನ್ನೆಲ್ಲ ಈಗಾಗಲೇ ದುಪ್ಪಟ್ಟು ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಸರ್ಕಾರ ಈಗ ಸರ್ಕಾರಿ ಆಸ್ತಿಗಳ ಮೇಲೂ ಕಣ್ಣು ಹಾಕಲು ಹೊರಟಿರುವುದನ್ನು ನೋಡಿದರೆ 'ಈ ಹಿಂದೆ ಚಿನ್ನ ಅಡವಿಟ್ಟು ದೇಶ ಮುನ್ನಡೆಸುವ ಸ್ಥಿತಿಗೆ ತಲುಪಿದ್ದ ಘಟನೆಯನ್ನು ನೆನಪಿಸುತ್ತಿದೆ'.
ಈ ಸರ್ಕಾರಕ್ಕೆ ರಾಜ್ಯ ಅಭಿವೃದ್ಧಿಪಡಿಸಿ ಆದಾಯ ಮೂಲ ಹೆಚ್ಚಿಸಿಕೊಳ್ಳುವ ಯಾವ ಬದ್ಧತೆಯೂ ಕಾಣುತ್ತಿಲ್ಲ. ನಿರುದ್ಯೋಗ ನಿರ್ಮೂಲನೆ ಮಾಡಿ ಮಾನವ ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳುವ ಯೋಜನೆಗಳನ್ನು ರೂಪಿಸಲು ಆಗುತ್ತಿಲ್ಲ, ಕೃಷಿ ಉತ್ಪನ್ನಗಳನ್ನು ಉತ್ತೇಜಿಸಿ ಮಾರುಕಟ್ಟೆಯನ್ನು ಗಡಿಯಾಚೆಗೆ ವಿಸ್ತರಿಸಿ ರೈತರ ಬದುಕನ್ನು ಹಸನಾಗಿಸಿ ನಾಡು ಸಮೃದ್ಧಗೊಳಿಸುವ ಮಾರ್ಗ ತಿಳಿದಿಲ್ಲ.
ತೆರಿಗೆಯ ಸುಲಿಗೆ, ಬೆಲೆ ಏರಿಕೆಯ ಅಸ್ತ್ರ, ವಸೂಲಿಯಾಗುವ ದುಡ್ಡನ್ನು ಪರ್ಸೆಂಟೇಜ್ ಮೂಲಕ ಹಾಗೂ ನಿಗಮಗಳ ಖಾತೆಗಳಿಗೆ ಕನ್ನ ಹಾಕಿ ಲಪಟಾಯಿಸುವ ಮಾರ್ಗ ಮಾತ್ರ ಕಾಂಗ್ರೆಸ್ ಸರ್ಕಾರಕ್ಕೆ ತಿಳಿದಿರುವಂತಿದೆ. ಈ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆರ್ಥಿಕ ಸಮತೋಲನ ಕಾಯ್ದುಕೊಂಡು ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಯೋಗ್ಯತೆ ಇಲ್ಲದಿದ್ದರೆ. ಈ ಕೂಡಲೇ ರಾಜಿನಾಮೆ ಕೊಟ್ಟು ಮನೆಗೆ ತೆರಳಲಿ, ಆ ಮೂಲಕವಾದರೂ ರಾಜ್ಯದ ಸ್ಥಿತಿಯನ್ನು ಅಧೋಗತಿಗೆ ತಳ್ಳುವ ಮಾರ್ಗದಿಂದ ಮುಕ್ತಿ ಕೊಡಲಿ ಎಂದು ಆಗ್ರಹಿಸಿದ್ದಾರೆ.












Click it and Unblock the Notifications