ಸರ್ಕಾರದ ವಿರುದ್ಧ ವಿಧಾನಪರಿಷತ್ ಸದಸ್ಯರಿಂದ ಪ್ರತಿಭಟನೆ
ಬೆಂಗಳೂರು, ಆಗಸ್ಟ್. 24 : ವಿಧಾನಪರಿಷತ್ ಸದಸ್ಯರು ಪಕ್ಷಾತೀತವಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಶಿಕ್ಷಕರು ಮತ್ತು ಶಿಕ್ಷಣ ವ್ಯವಸ್ಥೆ ಹಿತ ಕಾಪಾಡಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಪರಿಷತ್ ಸದಸ್ಯರು ಆರೋಪಿಸಿದ್ದಾರೆ.
ಶಿಕ್ಷಕರು ಮತ್ತು ಪದವೀಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯರ ಕಾರ್ಯಪಡೆಯನ್ನು ರಚನೆ ಮಾಡಲಾಗಿದೆ. ಮೂವತ್ತು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆ.6ರಿಂದ ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪರಿಷತ್ ಸದಸ್ಯರು ಅಹೋರಾತ್ರಿ ಧರಣಿ ನಡೆಸಲಿದ್ದಾರೆ.

ಇದೇ ಮೊದಲ ಬಾರಿಗೆ ಪರಿಷತ್ ಸದಸ್ಯರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಇದಕ್ಕಾಗಿ ಬಸವರಾಜ ಹೊರಟ್ಟಿ ಅವರ ಗೌರವಾಧ್ಯಕ್ಷತೆಯಲ್ಲಿ ಕಾರ್ಯಪಡೆಯನ್ನು ರಚನೆ ಮಾಡಲಾಗಿದೆ. ಪುಟ್ಟಣ್ಣ ಅವರು ಈ ಕಾರ್ಯಪಡೆ ಅಧ್ಯಕ್ಷರಾಗಿದ್ದಾರೆ.
ಶರಣಪ್ಪ ಮಟ್ಟೂರು, ಗಣೇಶ್ ಕಾರ್ಣಿಕ್, ವಿ.ಎಸ್.ಸಂಕನೂರು ಮುಂತಾದವರು ಈ ಸಮಿತಿಯಲ್ಲಿದ್ದಾರೆ. ಬೇಡಿಕೆಗಳನ್ನು ಈಡೇರಿಸಲು ಸೆ.13ರ ತನಕ ಸರ್ಕಾರಕ್ಕೆ ಗಡುವು ನೀಡಲಾಗಿದೆ. ಸರ್ಕಾರ ಒಪ್ಪಿಗೆ ನೀಡದಿದ್ದರೆ, ಸೆ.14ರಿಂದ ರಾಜ್ಯಾದ್ಯಂತ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ ಸರ್ಕಾರ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಹೊಸ ಪಿಂಚಣಿ ಯೋಜನೆ ಸೇರಿ ಅನೇಕ ಬೇಡಿಕೆಗಳು ಈಡೇರಿಲ್ಲ. ಶಿಕ್ಷಣ ಸಚಿವರು ಭಾಷಣ ಮಾಡುತ್ತಾರೆ. ಬೇಡಿಕೆ ಈಡೇರಿಸುತ್ತಿಲ್ಲ ಎಂದು ಪರಿಷತ್ ಸದಸ್ಯರು ಆರೋಪಿಸಿದರು.












Click it and Unblock the Notifications