Yathindra Siddaramaiah: ತಂದೆ ಸಿದ್ದರಾಮಯ್ಯಗಾಗಿ ಕ್ಷೇತ್ರ ಬಿಟ್ಟುಕೊಟ್ಟ ಯತೀಂದ್ರಗೆ ಪರಿಷತ್‌ಗೆ ಅವಕಾಶ ಕೊಡಿ!
ಬೆಂಗಳೂರು, ಮೇ. 20: ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗಾಗಿ ವರುಣ ಕ್ಷೇತ್ರ ಬಿಟ್ಟುಕೊಟ್ಟಿದ್ದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರನ್ನು ಮತ್ತೆ ರಾಜಕಾರಣಕ್ಕೆ ಕರೆತರಲು ಸಿದ್ಧತೆ ನಡೆಯುತ್ತಿದೆ. ಈಗ ಅವರನ್ನು ಎಂಎಲ್‌ಸಿ ಮಾಡಲು ಕಾಂಗ್ರೆಸ್ ನಾಯಕರು ಒಲವು ತೋರುತ್ತಿದ್ದಾರೆ.
ಯತೀಂದ್ರ ಅವರನ್ನು ವಿಧಾನಸೌಧಕ್ಕೆ ಕರೆತರಲು ಮತ್ತೆ ಅವಕಾಶ ಸಿಕ್ಕಿದೆ. ಸದ್ಯ ರಾಜ್ಯ ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿ ಕೇವಲ ಒಂಬತ್ತು ತಿಂಗಳಲ್ಲಿಯೇ ಮತ್ತೆ ಬಿಜೆಪಿ ತೆಕ್ಕೆಗೆ ಮರಳಿದ್ದ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ಸ್ಥಾನ ಖಾಲಿ ಉಳಿದಿದೆ. ಆ ಸ್ಥಾನಕ್ಕೆ ಯತೀಂದ್ರ ಸಿದ್ದರಾಮ್ಯ ಅವರನ್ನು ಕೂರಿಸಲು ಕಾಂಗ್ರೆಸ್ ನಾಯಕರು ಒತ್ತಡ ಹಾಕುತ್ತಿದ್ದಾರೆ.

ವಿಧಾನ ಪರಿಷತ್‌ಗೆ ಯತೀಂದ್ರ ಸಿದ್ದರಾಮಯ್ಯ!
ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಸದಸ್ಯರ ಆಯ್ಕೆಗೆ ಚುನಾವಣೆ ಜೂನ್‌ನಲ್ಲಿ ನಡೆಯಲಿದೆ. ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ 11 ಸದಸ್ಯರ ಅವಧಿ ಜೂನ್ 17ಕ್ಕೆ ಕೊನೆಯಾಗಲಿದೆ. ಈ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೂ ಉಪಚುನಾವಣೆ ನಡೆಯಲಿದೆ. ಈ ಸ್ಥಾನದ ಅವಧಿ 2028ರ ಜೂನ್ 14ರವರೆಗೂ ಇದೆ.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದು, ಶಾಸಕರ ಸಂಖ್ಯೆಯು ಹೆಚ್ಚಾಗಿದೆ. ಹೀಗಾಗಿ ವಿಧಾನಸಭೆಯ ಬಲಾಬಲದ ಪ್ರಕಾರ, 11 ಸ್ಥಾನಗಳಲ್ಲಿ ಏಳು ಕಾಂಗ್ರೆಸ್ ಪಾಲಾಗಲಿವೆ. ಬಿಜೆಪಿಗೆ ಮೂರು, ಜೆಡಿಎಸ್‌ಗೆ ಒಂದು ಸ್ಥಾನ ಸಿಗಲಿವೆ. ಕಾಂಗ್ರೆಸ್‌ಗೆ ಸಿಗುವ ಏಳು ಸ್ಥಾನಗಳಲ್ಲಿ ಮೊದಲನೆ ಆಯ್ಕೆ ಯತೀಂದ್ರ ಸಿದ್ದರಾಮಯ್ಯ ಎಂದು ಪಕ್ಷದ ಮೂಲಗಳನ್ನು ಉಲ್ಲೇಖಿಸಿ 'ಪ್ರಜಾವಾಣಿ' ವರದಿ ಮಾಡಿದೆ.
ವರುಣ ಮತ್ತು ಯತೀಂದ್ರ ಸಿದ್ದರಾಮಯ್ಯ
ವರುಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಯತೀಂದ್ರ ಸಿದ್ದರಾಮಯ್ಯ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮ್ಯಯ ಅವರಿಗಾಗಿ ಕ್ಷೇತ್ರ ತ್ಯಾಗ ಮಾಡಿದ್ದರು. ತಂದೆಗೆ ಕ್ಷೇತ್ರ ಬಿಟ್ಟುಕೊಟ್ಟು ತಾವು ಬೇರೆ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದಿರಲಿಲ್ಲ. ಚುನಾವಣೆಯನ್ನು ಬಿಟ್ಟು ಪ್ರಚಾರಕ್ಕೆ ಸೀಮಿತವಾಗಿದ್ದರು. ಕ್ಷೇತ್ರದ ಜನ ಅವರನ್ನೇ ಶಾಸಕರನ್ನಾಗಿ ಬಯಸಿದರೂ ಕೂಡ ತಂದೆ ಪರವಾಗಿ ಇಡೀ ಕ್ಷೇತ್ರದಲ್ಲಿ ಮತ ಯಾಚಿಸಿದ್ದರು.

ಚುನಾವಣೆಯಲ್ಲಿ ಸ್ಪರ್ಧೆ ಮಾಡದೇ ಇದ್ದರೂ ಕೂಡ ವರುಣ ಕ್ಷೇತ್ರದಲ್ಲಿ ಸಿದ್ಧರಾಮಯ್ಯ ಅವರ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ್ದು ಯತೀಂದ್ರ. ಇಷ್ಟೇ ಅಲ್ಲದೆ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಭಾಗದ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಓಡಾಟ ನಡೆಸಿ ಕಾಂಗ್ರೆಸ್ ಗೆಲುವಿನಲ್ಲಿ ಪಾಲುದಾರರಾಗಿದ್ದಾರೆ.
ಇದಲ್ಲದೆ, ಲೋಕಸಭಾ ಚುನಾವಣೆಯಲ್ಲಿಯೂ ಪಕ್ಷದ ಅಭ್ಯರ್ಥಿಗಳ ಪರವಾಗಿ ಸತತವಾಗಿ ಪ್ರಚಾರ ನಡೆಸಿದ್ದಾರೆ. ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕರು ವಿಧಾನ ಪರಿಷತ್ ಸದಸ್ಯರಲ್ಲಿ ಯತೀಂದ್ರ ಇರಬೇಕು ಎಂದು ಬಯಸಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾಗಿರು ಸ್ಥಾನಕ್ಕೆ ಅವರನ್ನು ಶಿಫಾರಸು ಮಾಡುತ್ತಿದ್ದಾರೆ.
ವಿಧಾನ ಪರಿಷತ್‌ಗೆ ಕಾಂಗ್ರೆಸ್ ಆಕಾಂಕ್ಷಿಗಳು
ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್, ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ್ ಅವರು ಜೂನ್ 17ಕ್ಕೆ ನಿವೃತ್ತರಾಗುತ್ತಿದ್ದಾರೆ. ಆದರೆ, ಮತ್ತೆ ಅದೇ ಸ್ಥಾನಗಳಲ್ಲಿ ಮುಂದುವರೆಯುವ ಆಸೆ ವ್ಯಕ್ತಪಡಿಸಿದ್ದಾರೆ. ಇವರ ಜೊತೆಗೆ ರಮೇಶ್ ಬಾಬು, ವಿನಯ್ ಕಾರ್ತಿಕ್, ವಿಜಯ್ ಕೆ. ಮುಳುಗುಂದ್, ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್, ಬಿ.ವಿ. ಶ್ರೀನಿವಾಸ್, ಸೂರಜ್ ಹೆಗ್ಡೆ, ಸಿ.ಎಸ್. ದ್ವಾರಕಾನಾಥ್, ಪುಷ್ಪಾ ಅಮರನಾಥ್, ಕವಿತಾ ರೆಡ್ಡಿ, ಆರತಿ ಕೃಷ್ಣ, ಕಮಲಾಕ್ಷಿ ರಾಜಣ್ಣ, ಕೆ.ಪಿ.ನಂಜುಂಡಿ ವಿಶ್ವಕರ್ಮ, ತೇಜಸ್ವಿನಿ ಗೌಡ ಕೂಡ ಕಾಂಗ್ರೆಸ್ ಆಕಾಂಕ್ಷಿಗಳಾಗಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.












Click it and Unblock the Notifications