ಎಲ್‌ಸಿಎ ಡೇಟಾ ಕಳವು: ಕ್ರಿಮಿನಲ್ ಪ್ರಕರಣ ರದ್ದಿಗೆ ಹೈಕೋರ್ಟ್ ನಕಾರ
ಬೆಂಗಳೂರು, ಆಗಸ್ಟ್ 17: ಎರಡು ವರ್ಷಗಳ ಹಿಂದೆ ವೈಮಾನಿಕ ಅಭಿವೃದ್ಧಿ ಸಂಸ್ಥೆಯ ಲಘು ಯುದ್ದ ವಿಮಾನ (ಎಲ್‌ಸಿಎ)ಅಭಿವೃದ್ಧಿಗೆ ಸಂಬಂಧಿಸಿದ ದತ್ತಾಂಶವನ್ನು ಕಳವು ಮಾಡಿ ಡಾರ್ಕ್ ವೆಬ್ ಸಂಸ್ಥೆಗೆ ಮಾರಾಟ ಮಾಡಿದ ಪ್ರಕರಣದಲ್ಲಿ ತನಿಖೆಯನ್ನು 4 ತಿಂಗಳಲ್ಲಿ ಪೂರ್ಣಗೊಳಿಸಲು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, 27 ವರ್ಷದ ವೈಮಾನಿಕ ಇಂಜಿನಿಯರ್ ಶಿವರಾಮ ಕೃಷ್ಣ ಚೆನ್ನುಬೊಯಿನಾ ವಿರುದ್ಧದ ಕ್ರಿಮಿನಲ್ ಕೇಸ್ ರದ್ದುಗೊಳಿಸಲು ನ್ಯಾಯಾಕಯ ನಿರಾಕರಿಸಿದೆ.
ತನ್ನ ವಿರುದ್ಧ ಹೂಡಿರುವ ಪ್ರಕರಣ ರದ್ದು ಕೋರಿ ಶಿವರಾಮಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ವಜಾಗೊಳಿಸಿದೆ. ತನಿಖೆ ಸಮರೋಪಾದಿಯಲ್ಲಿ ನಡೆಸುವಂತೆ ನ್ಯಾಯಾಲಯ ಸೂಚಿಸಿರುವುದರಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿ, ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ ಅರ್ಜಿದಾರರ ಎಲ್ಲ ವಾದಗಳನ್ನು ತಿರಸ್ಕರಿಸಿದೆ.

ಹೈಕೋರ್ಟ್ ಆದೇಶವೇನು?; ಅಪರಾಧದಲ್ಲಿ ತೊಡಗಿರುವ ಯಾವುದೇ ವ್ಯಕ್ತಿ, ಯಾವುದೇ ರೀತಿಯಲ್ಲಿ ರಾಷ್ಟ್ರದ ಸುರಕ್ಷತೆಯನ್ನು ಅಸ್ಥಿರಗೊಳಿಸಲು ಮುಂದಾದರೆ ಅದನ್ನು ಲಘುವಾಗಿ ಪರಿಗಣಿಸಲಾಗದು. ಅರ್ಜಿದಾರರು ತನ್ನನ್ನು ತಾನು ಅಮಾಯಕನೆಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ ಇದು ಇಲ್ಲಿಗೆ ಬಿಡುವಂತಹ ಪ್ರಕರಣವಲ್ಲ, ಈ ಕೇಸಿನಲ್ಲಿ ತನಿಖೆ ಆಗಲೇಬೇಕು, ಸತ್ಯಾಂಶ ಹೊರಬರಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ದತ್ತಾಂಶ ಸೋರಿಕೆ ಅಥವಾ ಕಳವು ಮತ್ತು ಡಾರ್ಕ್‌ವೆಬ್‌ಗೆ ಅದರ ಮಾರಾಟ ನಮ್ಮ ರಾಷ್ಟ್ರ ಸೇರಿದಂತೆ ಎಲ್ಲ ದೇಶಗಳಿಗೂ ಆತಂಕದ ವಿಚಾರ. ಹಾಗಾಗಿ ದತ್ತಾಂಶ ಸೋರಿಕೆಯ ಮೂಲದವರೆಗೆ ತನಿಖೆ ಆಗಲೇಬೇಕು, ಅಕ್ರಮ ಹಣಕಾಸಿನ ವಹಿವಾಟು ನಡೆದಿದ್ದರೆ ಅದೂ ಹೊರಬರಬೇಕು ಮತ್ತು ಇಂತಹ ಸೂಕ್ಷ್ಮ ದತ್ತಾಂಶ ಸೋರಿಕೆ ಕೃತ್ಯದಲ್ಲಿ ಭಾಗಿಯಾದವರನ್ನು ಕಠಿಣ ರೀತಿಯಲ್ಲಿ ಹತ್ತಿಕ್ಕಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಅಲ್ಲದೆ, ಈ ಪ್ರಕರಣದಲ್ಲಿ ತನಿಖೆಯನ್ನು ರಾತ್ರೋರಾತ್ರಿ ಪೂರ್ಣಗೊಳಿಸಲಾಗದು. ಹಲವು ಸೂಕ್ಷ್ಮ ಹಾಗೂ ಗೌಪ್ಯ ವಿಚಾರಗಳು ಇದರಲ್ಲಿಅಡಗಿವೆ. ಜತೆಗೆ ಅರ್ಜಿದಾರರು ರಾಷ್ಟ್ರದ ಭದ್ರತೆಯ ಹಿತಾಸಕ್ತಿಯೊಂದಿಗೆ ರಾಜಿ ಆಗುವಂತೆ ನಡೆದುಕೊಂಡಿದ್ದಾರೆ. ಅರ್ಜಿದಾರರು ಅತ್ಯಂತ ಸೂಕ್ಷ್ಮ ದತ್ತಾಂಶವನ್ನು ಡಾರ್ಕ್ ವೆಬ್ ಸಂಸ್ಥೆಗೆ ಸೋರಿಕೆ ಮಾಡಿದ್ದಾರೆನ್ನಲಾಗಿದ್ದು, ಇದು ರಾಷ್ಟ್ರದ ಭದ್ರತೆಯನ್ನು ಅಸ್ಥಿರಗೊಳಿಸುವ ಯತ್ನವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಅರ್ಜಿದಾರರು, ಅತ್ಯಂತ ತಡವಾಗಿ ಪ್ರಕರಣವನ್ನು ದಾಖಲಿಸಲಾಗಿದೆ. ಆ ಕೃತ್ಯದಲ್ಲಿ ತಾನು ಭಾಗಿಯಾಗಿದ್ದೇನೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಜತೆಗೆ ತಮ್ಮಂತಹ ಪ್ರತಿಭಾವಂತ ವಿದ್ಯಾರ್ಥಿಯ ಮೇಲೆ ಮತ್ತಷ್ಟು ತನಿಖೆಗೆ ಅವಕಾಶ ನೀಡಿದರೆ, ಅದು ಕಾನೂನಿನ ದುರ್ಬಳಕೆ ಆಗಲಿದೆ. ಹಾಗಾಗಿ ಪ್ರಕರಣ ರದ್ದುಗೊಳಿಸಬೇಕೆಂದು ಹೈಕೋರ್ಟ್ ಮೊರೆ ಹೋಗಿದ್ದರು.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ್ದ ಡೆಪ್ಯೂಟಿ ಸಾಲಿಸಿಟರ್ ಜನರಲ್ ಶಾಂತಿ ಭೂಷಣ್, 18 ತಿಂಗಳ ನಂತರ ಸಿಐಡಿ ಅರ್ಜಿದಾರರನ್ನು ಬಂಧಿಸಿದೆ. ಆತ ದೇಶದ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದ್ದಾನೆ. ಪ್ರಕರಣದಲ್ಲಿಇತರರ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ವಾದಿಸಿದ್ದರು.
ಪ್ರಕರಣದ ಹಿನ್ನೆಲೆ ಏನು?; ಭಾರತ ಸರಕಾರದ ರಕ್ಷಣಾ ಇಲಾಖೆಯಡಿ ಬರುವ ವೈಮಾನಿಕ ಅಭಿವೃದ್ಧಿ ಸಂಸ್ಥೆ (ಎಡಿಎ), ಭಾರತೀಯ ವಿಜ್ಞಾನ ಮಂದಿರ (ಐಐಎಸ್‌ಸಿ)ದ ಜತೆ ಕೆಲವು ಯೋಜನೆಗಳ ಜಾರಿಗೆ ಕಾರ್ಯನಿರ್ವಹಿಸುತ್ತಿತ್ತು.
ಆಗ ಐಐಎಸ್‌ಸಿ ಜತೆ ಇಂಟರ್ನಿಯಾಗಿದ್ದ ಅರ್ಜಿದಾರರು ಯುದ್ದ ಸಮಯದಲ್ಲಿ ಬಳಕೆ ಮಾಡುವ ಲಘು ಯುದ್ಧ ವಿಮಾನಗಳ ತಯಾರಿಕೆಯಲ್ಲಿಯೂ ಇಂಟರ್ನಿಯಾಗಿ ಕಾರ್ಯನಿರ್ವಹಿಸಿದ್ದರು. ಆಗ ಅವರು ಸೋರ್ಸ್ ಕೋಡ್ ಪಡೆದು ಅದನ್ನು ಡಾರ್ಕ್ ವೆಬ್ ಸಂಸ್ಥೆಗೆ ಮಾರಾಟ ಮಾಡಿದ್ದಾರೆಂದು ಆರೋಪಿಸಲಾಗಿದೆ. ಆರಂಭದಲ್ಲಿ ಮಾಹಿತಿ ಯಾರಿಂದ ಸೋರಿಕೆಯಾಗಿದೆ? ಎಂಬುದು ತಿಳಿದಿರಲಿಲ್ಲ. ಇಲಾಖೆ ಸತತ 18 ತಿಂಗಳು ನಡೆಸಿದ ಆಂತರಿಕ ತನಿಖೆಯಲ್ಲಿಅರ್ಜಿದಾರರು ಭಾಗಿಯಾಗಿರುವ ಅಂಶ ಕಂಡು ಬಂದಿತ್ತು.












Click it and Unblock the Notifications