Karnataka Bandh: ಕರ್ನಾಟಕ ಬಂದ್ ಬಗ್ಗೆ ಹೊಸ ಅಪ್ಡೇಟ್ ಇಲ್ಲಿದೆ!
ಕರ್ನಾಟಕದಲ್ಲಿ ಎಂಇಎಸ್ ಪುಂಡರ ಹಾವಳಿಯನ್ನು ತಪ್ಪಿಸುವಂತೆ ಹಾಗೂ ಬೆಳಗಾವಿಯಲ್ಲಿ ಕನ್ನಡಿಗ ಕಂಡಕ್ಟರ್ ಮಹದೇವಪ್ಪ ಅವರ ಮೇಲೆ ಹಲ್ಲೆ ಮಾಡಿರುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಇದೇ ತಿಂಗಳು ಮಾರ್ಚ್ 22ಕ್ಕೆ ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಇದೀಗ ಈ ಬಂದ್‌ಗೆ ಸಂಬಂಧಿಸಿದಂತೆ ಇನ್ನಷ್ಟು ಅಪ್ಡೇಟ್‌ಗಳನ್ನು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ಎಂಇಎಸ್ ಪುಂಡರ್ ಹಾವಳಿಗೆ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡಪರ ಸಂಘಟನೆಗಳು ಇದೇ 22ಕ್ಕೆ ಬಂದ್‌ಗೆ ಕರೆ ನೀಡಲಾಗಿದ್ದು. ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಗಿದೆ. ಬೆಳಗಾವಿಯಲ್ಲಿ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿದೆ. ಈ ಪ್ರತಿಭಟನೆಯಲ್ಲಿ ಕನ್ನಡ ಫಿಲ್ಮಂ ಚೇಂಬರ್‌ನ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು ಹಾಗೂ ಕರವೇ ಮುಖಂಡರಾದ ಶಿವರಾಮೇಗೌಡ ಅವರು ಭಾಗಿಯಾಗಿದ್ದಾರೆ.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿರುವ ವಾಟಾಳ್ ನಾಗರಾಜ್ ಅವರು, ಕರ್ನಾಟಕದಲ್ಲಿ ಎಂಇಎಸ್ ನಿಷೇಧ ಮಾಡಬೇಕಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೀವು ಮಾಡಲಿಲ್ಲ ಎಂದು ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಎಂಇಎಸ್ ನಿಷೇಧ ಮಾಡದಿದ್ದರೆ ನಾವು ಬೆಳಗಾವಿಯಲ್ಲಿ ಅಧಿವೇಶನ ಮಾಡಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಮುಂದುವರಿದು ಸುವರ್ಣಸೌಧ ಇದೇ ತಿಂಗಳಿಗೆ ಮೂರು ಜನ ಮಂತ್ರಿಗಳು ಬಂದು ಕುಳಿತುಕೊಳ್ಳಬೇಕು. ಬೆಳಗಾವಿಯ ರಾಜಕಾರಣಿಗಳು ವೋಟ್ ಗಾಗಿ ಅಸ್ತಿತ್ವ ಮಾರಿಕೊಂಡಿದ್ದಾರೆ. ಬೆಳಗಾವಿಗೆ ಎಂಇಎಸ್ ಬೇಡವೇ ಬೇಡ ಹೊರ ಹೋಗಬೇಕು ಎಂದಿದ್ದಾರೆ.
ಬಂದ್‌ನ ಬಗ್ಗೆ ಅಪ್ಡೇಟ್ ಕೊಟ್ಟ ವಾಟಾಳ್ ನಾಗರಾಜ್: ಇನ್ನು ಇದೇ ಸಂದರ್ಭದಲ್ಲಿ ಕರ್ನಾಟಕ ಬಂದ್‌ನ ಬಗ್ಗೆ ಅಪ್ಡೇಟ್‌ವೊಂದನ್ನು ವಾಟಾಳ್ ನಾಗರಾಜ್ ಅವರು ಕೊಟ್ಟಿದ್ದಾರೆ. ಮಾರ್ಚ್ 22ಕ್ಕೆ ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಬೆಳಗಾವಿಗಾಗಿ, ಎಂಇಎಸ್ ನಿಷೇಧಕ್ಕಾಗಿ, ಮಹಾದಾಯಿಗಾಗಿ, ಉತ್ತರ ಕರ್ನಾಟಕ ಅಭಿವೃದ್ಧಿ ಹಾಗೂ ಮೇಕೆದಾಟು ಯೋಜನೆ ಜಾರಿ ಸೇರಿದಂತೆ ವಿವಿಧ ಕಾರಣಗಳಿಗಾಗಿ ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.
ಕನ್ನಡಿಗ ಚಾಲಕರಿಗೆ ಹೊಡೆದಿದ್ದು ಚಿಕ್ಕದಲ್ಲ. ಅತ್ಯಂತ ಗಂಭೀರವಾಗಿ ಚಿಂತನೆ ಮಾಡಬೇಕು. ಇಡೀ ಕರ್ನಾಟಕದ ಚಾಲಕರು, ಸಿಎಂ, ರಾಜ್ಯಪಾಲರ ಕಾರಿನ ಚಾಲಕರು ಬಂದ್‌ಗೆ ಬೆಂಬಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ಕರ್ನಾಟಕದ ಎಲ್ಲಾ ಚಾಲಕರು ಒಂದಾಗಿ ಬೀದಿಗಿಳಿಯಬೇಕು, ಇದು ಕನ್ನಡಿಗರ ಶಕ್ತಿಯ ಬಂದ್ ಎಂದು ಹೇಳಿದ್ದಾರೆ. 22 ರಂದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆ ವರೆಗೆ ಕರ್ನಾಟಕ ಬಂದ್ ಇರಲಿದೆ. ಬಂದ್ ಇರುವ ದಿನ ಬೆಳಗಾವಿಗೆ ಬರುವ ಕುರಿತು ತೀರ್ಮಾನ ಮಾಡುತ್ತೇವೆ ಎಂದ ವಾಟಾಳ್ ನಾಗರಾಜ್ ಅವರು ಹೇಳಿದ್ದಾರೆ.
ಹಿನ್ನೆಲೆ ಏನು: ಈಚೆಗೆ ಬೆಳಗಾವಿಯಲ್ಲಿ ಕನ್ನಡಿಗ ಬಸ್ ಕಂಡಕ್ಟರ್‌ನ ಮೇಲೆ ಹಲ್ಲೆ ಮಾಡಲಾಗಿತ್ತು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಮರಾಠಿ ಭಾಷಿಕರು ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದು ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಅಲ್ಲದೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಎರಡೂ ಕಡೆ ಸರ್ಕಾರಿ ಬಸ್‌ಗಳಿಗೆ ಮಸಿ ಬಳಿಯುವುದು ಹಾಗೂ ಹಾನಿ ಮಾಡಿರುವ ಘಟನೆಗಳು ವರದಿಯಾಗಿದ್ದವು.












Click it and Unblock the Notifications