ಸಿದ್ದರಾಮಯ್ಯ ಕೊರಳಿಗೆ ಮತ್ತೆ ಸುತ್ತಿಕೊಂಡ ಡಿನೋಟಿಫಿಕೇಶನ್ ಪ್ರಕರಣ
ಬೆಂಗಳೂರು, ಮೇ 12 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಡಿನೋಟಿಫಿಕೇಶನ್ ಪ್ರಕರಣಕ್ಕೆ ಮರುಜೀವ ಸಿಕ್ಕಿದೆ. ಪ್ರಕರಣವನ್ನು ಮೈಸೂರಿನಿಂದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ.
ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದ ಶಾಸಕರಾದ ಕಾರಣ ಮೈಸೂರಿನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಯಶವಂತ್ ಕುಮಾರ್ ಅವರು ಪ್ರಕರಣವನ್ನು ವರ್ಗಾವಣೆ ಮಾಡಿದ್ದಾರೆ. ಜೂನ್ 10ರಂದು ಪ್ರಕರಣದ ವಿಚಾರಣೆ ನಡೆಯಲಿದೆ.
ಮೊದಲು ಮೈಸೂರಿನಲ್ಲಿ ಈ ಕುರಿತು ದೂರು ದಾಖಲಾಗಿತ್ತು. ತನಿಖೆ ನಡೆಸಿದ್ದ ಲಕ್ಷ್ಮೀಪುರಂ ಠಾಣೆ ಪೊಲೀಸರು 2018ರ ನವೆಂಬರ್ 3ರಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಅರ್ಜಿದಾರರು ಇದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದರು.

ಆರ್‌ಟಿಐ ಕಾರ್ಯಕರ್ತ ಗಂಗರಾಜು ಎಂಬುವವರು ಸಿದ್ದರಾಮಯ್ಯ ಅವರ ವಿರುದ್ಧ ಅಕ್ರಮವಾಗಿ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಆದರೆ, ಬಿರಿಪೋರ್ಟ್ ಸಲ್ಲಿಸಿದ ಕಾರಣದಿಂದಾಗಿ ಪ್ರಕರಣ ಅಂತ್ಯ ಕಂಡಿತ್ತು. ಈಗ ಪುನಃ ಪ್ರಕರಣ ಮರುಜೀವ ಪಡೆದುಕೊಂಡಿದೆ.
ಏನಿದು ಪ್ರಕರಣ? : 1988ರಲ್ಲಿ ಮುಡಾ ವಿಜಯನಗರ 2ನೇ ಹಂತದ ಬಡಾವಣೆ ನಿರ್ಮಾಣಕ್ಕೆ ಹಿನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ 535 ಎಕರೆ ಪ್ರದೇಶವನ್ನು ವಶಪಡಿಸಿಕೊಂಡಿತ್ತು. 10 ವರ್ಷಗಳ ಬಳಿಕ ಬಡಾವಣೆ ರಚನೆಗೊಂಡು ನಿವೇಶನ ಹಂಚಿಕೆ ಆಯಿತು.
ಈ ಸಮಯದಲ್ಲಿ ಸಿದ್ದರಾಮಯ್ಯ ಅವರ ಆಪ್ತ ಪಾಪಣ್ಣ ಅವರು ಸಂಬಂಧಿಕರಿಗೆ ಸೇರಿದ 30 ಗುಂಟೆ ಜಮೀನನ್ನು ಕೈ ಬಿಡುವಂತೆ ಮುಡಾಗೆ ಅರ್ಜಿ ಸಲ್ಲಿಸಿದರು. ಇದನ್ನು ಪುರಸ್ಕರಿಸಿ ಜಮೀನು ಡಿನೋಟಿಫಿಕೇಶನ್ ಮಾಡಲಾಯಿತು.
ಡಿನೋಟಿಫೈ ಮಾಡಿದ ಜಮೀನಿನಲ್ಲಿ ಸಾಕಮ್ಮ ಅವರಿಗೆ ಸೇರಿದ 10 ಗುಂಟೆ ನಿವೇಶವನ್ನು ಸಿದ್ದರಾಮಯ್ಯ ಖರೀದಿ ಮಾಡಿದರು. ಪಕ್ಕದ ಜಮೀನನ್ನು ಅತಿಕ್ರಮಿಸಿಕೊಂಡು ಹೆಚ್ಚುವರಿ ಅಳತೆಯಲ್ಲಿ ಮನೆ ಕಟ್ಟಿದರು. ಕೆಲವು ವರ್ಷಗಳ ಬಳಿಕ ಮನೆ ಮಾರಿದರು.
ಡಿನೋಟಿಫೈ ಸಂದರ್ಭದಲ್ಲಿ ಸಾಕಮ್ಮ ಅವರಿಗೆ ಬದಲಿ ನಿವೇಶನ ನೀಡಲಾಗಿತ್ತು. ಆದರೆ, 2017ರಲ್ಲಿ ಮತ್ತೆ ನಿವೇಶನ ನೀಡುವಂತೆ ಅವರು ಮುಡಾಗೆ ಅರ್ಜಿ ಹಾಕಿದ್ದರು. ಅದನ್ನು ಸಹ ಮೂಡಾ ಪುರಸ್ಕರಿಸಿದೆ.
ಸಿದ್ದರಾಮಯ್ಯ, ಅಂದಿನ ಮೂಡಾ ಅಧ್ಯಕ್ಷ ಸಿ.ಬಸವೇಗೌಡ, ಅಂದಿನ ಮುಡಾ ಆಯುಕ್ತ ಧ್ರುವ ಕುಮಾರ್, ಪ್ರಸ್ತುತ ಮೂಡಾ ಆಯುಕ್ತರಾಗಿರುವ ಪಿ.ಎಸ್.ಕಾಂತರಾಜು ವಿರುದ್ಧ ಗಂಗರಾಜು ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.
ದೂರನ್ನು ಮಾನ್ಯಗೊಳಿಸಿದ್ದ ನ್ಯಾಯಾಲಯ ಲಕ್ಷ್ಮೀಪುರಂ ಠಾಣೆ ಪೊಲೀಸರಿಗೆ ತನಿಖೆ ನಡೆಸಲು ಸೂಚನೆ ನೀಡಿತ್ತು. ತನಿಖೆ ನಡೆಸಿದ ಪೊಲೀಸರು ಬಿ.ರಿಪೋರ್ಟ್ ಸಲ್ಲಿಸಿದ್ದರು.












Click it and Unblock the Notifications