ರೈತರ ಭೂಮಿಗೆ ಬಂಗಾರದ ಬೆಲೆ, ಸೂಕ್ತ ಪರಿಹಾರ: ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು, ಸೆಪ್ಟೆಂಬರ್ 11: ರೈತರ ಭೂಮಿಗೆ ನ್ಯಾಯಯುತವಾದ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ರೈತರ ಭೂಮಿಗೆ ಬಂಗಾರದ ಬೆಲೆ ಇದೆ. ಯುಕೆಪಿ ಹಂತ 3 ರ ಅಡಿ ಸ್ವಾಧೀನಕ್ಕೊಳಪಡುವ ಭೂಮಿಗಳಿಗೆ ದರ ನಿಗದಿಯನ್ನು ಗುರುವಾರ ನಡೆಯುವ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ, ಪುನರ್ವಸತಿ, ಪುನರ್‌ನಿರ್ಮಾಣ, ಭೂಪರಿಹಾರ ಹಾಗೂ ವಿವಿಧ ನ್ಯಾಯಾಲಯಗಳಲ್ಲಿ ಹೆಚ್ಚುವರಿ ಭೂ ಪರಿಹಾರ ಕೋರಿ ದಾಖಲಿಸಿರುವ ಪ್ರಕರಣಗಳ ಕುರಿತು ಸಿಎಂ ಸಿದ್ದರಾಮಯ್ಯ, ಜಲ ಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಂತ್ರಿಗಳು, ಶಾಸಕರು ಹಾಗೂ ಅಧಿಕಾರಿಗಳ ಜತೆ ವಿಧಾನಸೌಧದಲ್ಲಿ ಸಭೆ ನಡೆಸಿದರು.

ಸಭೆಯ ಬಳಿಕ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಭೂಸ್ವಾಧೀನ ಪರಿಹಾರ ವಿಚಾರವನ್ನೇ ವಿವಾದ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ. ಮುಂದೆ ತೀರ್ಮಾನ ಮಾಡಲಿರುವ ಸೂಚಿತ ಪರಿಹಾರಕ್ಕೆ ಸರ್ವ ಪಕ್ಷಗಳೂ ಒಪ್ಪಿಗೆ ಸೂಚಿಸಬೇಕು ಎಂದು ಮನವಿ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ದರ ನಿಗದಿ ಎಂದು ಅಂತಿಮವಾಗಬಹುದು ಹಾಗೂ ಕಾನೂನಾತ್ಮಕ ತೊಡಕುಗಳ ನಿವಾರಣೆಯ ಕ್ರಮದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಈ ವಿಚಾರ ತುಂಬಾ ತಡವಾಗಬಾರದು ಎಂದು ನಾನು ತೀರ್ಮಾನ ತೆಗೆದುಕೊಂಡಿರುವೆ. ಸಚಿವ ಸಂಪುಟದಲ್ಲಿ ಇದರ ಬಗ್ಗೆ ತೀರ್ಮಾನ ಮಾಡಲಾಗುವುದು. ನಾನು ಅಫಿಡವಿಟ್ ಗೆ ಸಹಿ ಹಾಕಿದ್ದು ಎಸಿಎಸ್ ಅವರು ಗುರುವಾರ ನ್ಯಾಯಲಯಕ್ಕೆ ಇದನ್ನು ಸಲ್ಲಿಸಲಿದ್ದಾರೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಆಲಮಟ್ಟಿ ಅಣೆಕಟ್ಟು ಎತ್ತರವನ್ನು 524 ಮೀ. ಹೆಚ್ಚಳ ಮಾಡಿದರೆ ಎಷ್ಟು ಭೂಮಿ ಬೇಕಾಗಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ನಾನು ಸಂಬಂಧಪಟ್ಟವರಿಂದ ಮಾಹಿತಿ ಪಡೆದುಕೊಂಡಿದ್ದೇವೆ. ಇದರ ಬಗ್ಗೆ ಕಾನೂನು ತಜ್ಞರ ಬಳಿ ಚರ್ಚೆ ನಡೆಸಲಾಗುತ್ತಿದೆ. ಇದರ ಬಗ್ಗೆ ಕಾನೂನು ತಂಡ ಗುರುವಾರ ಬೆಳಿಗ್ಗೆ ಅಭಿಪ್ರಾಯ ನೀಡಲಿದ್ದು, ಇದನ್ನು ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು ಎಂದು ಹೇಳಿದರು.
ದ್ವೇಷ ಬಿತ್ತುವ, ಸಮಾಜ ಇಬ್ಬಾಗ ಮಾಡುವುದೇ ಅವರ (ಆರ್.ಅಶೋಕ್) ಅಜೆಂಡಾ. ಅವರೇ ಶಾಂತಿಭಂಗ ಮಾಡುವ, ಅಶಾಂತಿ ಉಂಟುಮಾಡುವ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು. ಧರ್ಮಸ್ಥಳ, ದಸರಾ ಉದ್ಘಾಟನೆ, ಚಾಮುಂಡಿ ಬೆಟ್ಟ ಪ್ರವೇಶದ ವಿಚಾರದಲ್ಲಿ ವಿಪಕ್ಷ ನಾಯಕ ಅಶೋಕ್ ಟೀಕೆ ಮಾಡುತ್ತಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಉದ್ಯೋಗವಿಲ್ಲ. ಎಲ್ಲಾ ಷಡ್ಯಂತ್ರಗಳ ಬಗ್ಗೆ ತನಿಖೆ ನಡೆಯುತ್ತಿದೆ. ಎಲ್ಲವೂ ಶೀಘ್ರ ಆಚೆ ಬರಲಿದೆ ಎಂದು ಹೇಳಿದರು.












Click it and Unblock the Notifications